ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳುಗಳ ಮೇಲೆ ಬಿಜೆಪಿಯ ರಾಜ್ಯಭಾರ: ಕೃಷ್ಣಬೈರೇಗೌಡ ವಾಗ್ದಾಳಿ

ಯುವ ಕಾಂಗ್ರೆಸ್‌ನಿಂದ ನವ ಶಕ್ತಿ–ನವದೃಷ್ಟಿ: ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕೃಷ್ಣಬೈರೇಗೌಡ ವಾಗ್ದಾಳಿ
Last Updated 27 ಡಿಸೆಂಬರ್ 2021, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸುಳ್ಳುಗಳ ಮೇಲೆ ರಾಜ್ಯಭಾರ ಮಾಡುತ್ತಿದೆ. ಜನರಿಗೆ ಸತ್ಯವನ್ನು ಹೇಳದ ವ್ಯವಸ್ಥೆ ಈಗ ಜಾರಿಯಲ್ಲಿದೆ’ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣಬೈರೇಗೌಡ ಸೋಮವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ನಗರದಲ್ಲಿ ಹಮ್ಮಿಕೊಂಡಿದ್ದ ನವ ಶಕ್ತಿ–ನವದೃಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಬಡವರಿಗೆ ಮನೆ, ವಸತಿ, ಬಟ್ಟೆ ನೀಡುವ ವಿಚಾರ ಬಿಟ್ಟು, ಸಮಾಜದಲ್ಲಿ ಜಾತಿಯ ವಿಷಯವನ್ನು ಬಿತ್ತಿ, ಜನರ ನಡುವೆ ಬೆಂಕಿ ಹಚ್ಚುವ ವಿಚಾರಗಳಿಗೆ ಒತ್ತು ನೀಡುತ್ತಿದೆ. ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಮತಾಂತರ ನಿಷೇಧ ಕಾಯ್ದೆಯಂತಹ ವಿಚಾರ ಪ್ರಸ್ತಾಪಿಸುತ್ತಿದೆ’ ಎಂದು ಕಿಡಿಕಾರಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಾಮರಾಜನಗರಕ್ಕೆ ಯಾವುದಾದರೂ ಹೊಸ ಯೋಜನೆ ಬಂದಿವೆಯೇ’ ಎಂದು ಪ್ರಶ್ನಿಸಿದಾಗ ನೆರೆದಿದ್ದವರು ‘ಇಲ್ಲ’ ಎಂದು ಉತ್ತರಿಸಿದರು. ‘ಚಾಮರಾಜನಗರ ಮಾತ್ರ ಅಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಹೊಸ ಮನೆ ಮಂಜೂರಾಗಿಲ್ಲ. ಈ ಹಿಂದೆ ಮಂಜೂರಾಗಿದ್ದ ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಅನುದಾನದಲ್ಲಿ ಶೇ 80ರಷ್ಟು ಕಡಿತಗೊಳಿಸಿದೆ. ಆದರೆ, ಇವರು ಮಾತ್ರ ಯೋಜನೆಗಳಲ್ಲಿ ಶೇ 40ರಷ್ಟು ಕಮಿಷನ್‌ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಜನರಿಗೆ ಸತ್ಯ ತಿಳಿಸಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶದ ಹಣಕಾಸು ಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಹೊಸ ಉದ್ಯೋಗ ಸೃಷ್ಟಿ ಮಾಡುವುದಿರಲಿ; ಉದ್ಯೋಗ ಹೊಂದಿದ್ದವರು ಕೂಡ ಕೆಲಸ ಕಳೆದುಕೊಂಡಿದ್ದಾರೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಪರವಾಗಿದೆ. ಅವರ ತೆರಿಗೆ ಕಡಿತಗೊಳಿಸಿ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲಗಳಿಗೆ ಹೆಚ್ಚು ತೆರಿಗೆ ವಿಧಿಸಿ ಜನಸಾಮಾನ್ಯರಿಂದ ವಸೂಲು ಮಾಡುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಎಲ್ಲರೂ ಹಣ ಕಳೆದುಕೊಂಡಿದ್ದರೆ, ಅದಾನಿ, ಅಂಬಾನಿ ಸಂಪತ್ತು ಹೆಚ್ಚಳವಾಗಿತ್ತು. ಈ ಸತ್ಯಗಳನ್ನು ಜನರಿಗೆ ಯಾರೂ ಹೇಳುತ್ತಿಲ್ಲ. ಮಾಧ್ಯಮಗಳು ಕೂಡ ಇವುಗಳನ್ನು ತಿಳಿಸುತ್ತಿಲ್ಲ. ಪಕ್ಷದ ಕಾರ್ಯಕರ್ತರು ಈ ಸತ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾರಾಮಯ್ಯ ಮಾತನಾಡಿ, ‘ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು, ದುರಾಡಳಿತವನ್ನು ತಿಳಿಸುವ ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್‌ ಅಜೀಜ್‌, ಶಾಸಕರಾದ ರಿಜ್ವಾನ್‌ ಹರ್ಷದ್‌, ಸಿ.ಪುಟ್ಟರಂಗಶೆಟ್ಟಿ, ಯುವ ಮುಖಂಡ ಗಣೇಶ್‌ ಪ್ರಸಾದ್‌ ಮಾತನಾಡಿದರು. ಶಾಸಕ ನರೇಂದ್ರ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಅದ್ಧೂರಿ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಸಂತೇಮರಹಳ್ಳಿ ವೃತ್ತದ ಬಳಿಯ ರೇಷ್ಮೆ ಕಾರ್ಖಾನೆ ಬಳಿಯಿಂದ ರಾಮಸಮುದ್ರ ಅಂಬೇಡ್ಕರ್‌ ಪ್ರತಿಮೆಯವರೆಗೆ ಬೈಕ್‌ ರ‍್ಯಾಲಿ ನಡೆಸಲಾಯಿತು. ನಂತರ ಸಮಾರಂಭ ಆಯೋಜಿಸಿದ್ದ ಅಂಬೇಡ್ಕರ್‌ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

‘ಪಂಚ ಸೂತ್ರ ಪಾಲಿಸಿ’

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ‘ಕಾಂಗ್ರೆಸ್‌ ಯುವ ಸಮೂಹವನ್ನು ದೇಶ ಕಟ್ಟುವುದಕ್ಕೆ ಬಳಸಿದರೆ, ಬಿಜೆಪಿಯು ಕೋಮುವಾದ ಪ್ರಚೋದಿಸುವ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಯುವ ಸಮೂಹದ ಅಭಿವೃದ್ಧಿಗೆ ಶ್ರಮಿಸಿದರೆ, ಬಿಜೆಪಿ ಅವರ ಕೈಗೆ ತ್ರಿಶೂಲ ನೀಡುತ್ತಿದೆ’ ಎಂದು ಟೀಕಿಸಿದರು.

‘ಶಿಸ್ತು, ಸಾಮರ್ಥ್ಯ, ಆದರ್ಶ, ನಿರ್ಭಯತೆ ಮತ್ತು ಜ್ಞಾನ ಈ ಐದು ಸೂತ್ರಗಳನ್ನು ಯುವ ಕಾಂಗ್ರೆಸ್‌ ಸದಸ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಪರವಾಗಿ ಹೋರಾಟ ಮಾಡಿದರೆ ಜನಮನ್ನಣೆ ಸಿಗುತ್ತದೆ. ಸರ್ಕಾರದ ವೈಫಲ್ಯಗಳನ್ನು, ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಜನರ ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಯುವ ಕಾಂಗ್ರೆಸ್‌ ಸದಸ್ಯರು ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT