ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್‌ ಆಗ್ರಹ

ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕುರಿತ ಸುಪ್ರೀಂ ತೀರ್ಪಿಗೆ ಅಸಮಾಧಾನ, ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ
Last Updated 15 ಫೆಬ್ರುವರಿ 2020, 15:42 IST
ಅಕ್ಷರ ಗಾತ್ರ

ಚಾಮರಾಜನಗರ:ಸರ್ಕಾರಿ ನೌಕರಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಕಾಂಗ್ರೆಸ್‌ನ ಜಿಲ್ಲಾ ಸಮಿತಿ ಆಗ್ರಹಿಸಿದೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದಕಾಂಗ್ರೆಸ್‌ ಮುಖಂಡರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.

ಸಂವಿಧಾನ ವಿರೋಧಿ: ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಳ ಹಿತದೃಷ್ಟಿಯಿಂದ ಸಂವಿಧಾನದಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ನೌಕರಿ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಕೋರ್ಟ್‌ ತೀರ್ಪು ನೀಡಿದೆ. ಇದು ಸಂವಿಧಾನಕ್ಕೆ ವಿರೋಧವಾದುದು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ಮೊದಲಿನಿಂದಲೂ ಮೀಸಲಾತಿ ವಿರೋಧಿ. ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಅವರು ದೂರಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದೆ. ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನವನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ. ಕೇಂದ್ರದ ವಿರುದ್ದ ಉಗ್ರ ಹೋರಾಟ ಮಾಡಬೇಕಿದೆ’ ಎಂದರು.

‘ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕು ಅಲ್ಲ’ ಎಂದು ಹೇಳಿರುವುದು ಅಸಾಂವಿಧಾನಿಕ ತೀರ್ಪು. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕನ್ನು ಕಸಿದಂತಾಗಿದೆ.ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಸಂವಿಧಾನ ಪೀಠದಿಂದ ಪ್ರಕರಣದ ವಿಚಾರಣೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್‌ ಅಸ್ಗರ್, ಹೊಂಗನೂರು ಚಂದ್ರು, ತೋಟೇಶ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಆರ್.ಅರುಣ್‌ಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಸದಸ್ಯರಾದ ಯೋಗೇಶ್, ಕೆ.ಪಿ.ಸದಾಶಿವಮೂರ್ತಿ, ಮುಖಂಡರಾದಕಾಗಲವಾಡಿ ಎಂ.ಶಿವಣ್ಣ, ಎಸ್.ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಚಿನ್ನಮ್ಮ, ಭಾಗ್ಯಮ್ಮ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಇದ್ದರು.

ಸಭೆ ಬಳಿಕ ಶಿವಮ್ಮ ವಿರುದ್ಧ ಕ್ರಮ: ಧ್ರುವನಾರಾಯಣ

‘ವರಿಷ್ಠರ ಸೂಚನೆಯನ್ನೂ ಕಡೆಗಣಿಸಿ, ಆಂತರಿಕ ಒಪ್ಪಂದದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸುತ್ತೇವೆ’ಎಂದು ಆರ್‌. ಧ್ರುವನಾರಾಯಣ ಹೇಳಿದರು.

‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಮೂರು ಸದಸ್ಯರಿಗೆ ಹಂಚಿಕೆಯಾಗಿತ್ತು. ಎರಡನೇ ಬಾರಿ ಅಧ್ಯಕ್ಷರಾದ ಶಿವಮ್ಮ ಅವರ 20 ತಿಂಗಳ ಅವಧಿ ಮುಕ್ತಾಯದ ಹಂತದಲ್ಲೇ ಹನೂರು ಶಾಸಕ ಆರ್‌.ನರೇಂದ್ರ ಅವರು, ಅಧ್ಯಕ್ಷರಗಮನಕ್ಕೆ ತಂದು ರಾಜೀನಾಮೆ ಸಲ್ಲಿಸಲುತಿಳಿಸಿದ್ದೆವು. ತಿಂಗಳ ಅವಕಾಶ ಪಡೆದರೂ ರಾಜೀನಾಮೆ ಕೊಡಲಿಲ್ಲ. ಸಭೆ ಬಳಿಕ ರಾಜೀನಾಮೆ ನೀಡುತ್ತೇನೆ ಎಂದಿದ್ದರು ಆದರೂ ನೀಡಲಿಲ್ಲ’ ಎಂದರು.

ಪಕ್ಷದಲ್ಲಿ ಇದುವರೆಗೂ ನಡೆದಿಲ್ಲ: ‘ಅವಧಿ ಮೀರಿದರೂ ರಾಜೀನಾಮೆ ನೀಡದ ಪ್ರಸಂಗ ಪಕ್ಷದಲ್ಲಿ ಇದುವರೆಗೂ ನಡೆದಿಲ್ಲ. ಒಪ್ಪಂದಕ್ಕೆ ಒಪ್ಪಿ ಅವಧಿಗೂ ಮುನ್ನವೇ ರಾಜೀನಾಮೆ ನೀಡುತ್ತಿದ್ದರು.ಈಗ ಬೈದಾಡಿದ ಪ್ರಸಂಗದ ಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಬೇಸರ ತಂದಿದೆ. ರಾಜಕೀಯ ಜೀವನದಲ್ಲಿ ಯಾರೂ ಈ ರೀತಿ ಮಾಡಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT