ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 15 ಮಂದಿ ವರದಿ ನೆಗೆಟಿವ್‌, ಜಿಲ್ಲೆ ಸುರಕ್ಷಿತ

ಕಾನ್‌ಸ್ಟೆಬಲ್‌ಗೆ ಕೋವಿಡ್‌–19 ಇಲ್ಲ: ಪುಣೆ ಪ್ರಯೋಗಾಲಯದ ವರದಿ
Last Updated 7 ಮೇ 2020, 16:02 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಬೆಳತ್ತೂರಿಗೆ ಬಂದು ಹೋಗಿ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದ್ದ ಬೆಂಗಳೂರಿನ ಹೆಡ್‌ ಕಾನ್‌ಸ್ಟೆಬಲ್‌ ಅವರ ಗಂಟಲ ದ್ರವದ ಮಾದರಿಯ ಪುಣೆ ಪ್ರಯೋಗಾಲಯದ ಪರೀಕ್ಷಾ ವರದಿಯೂ ನೆಗೆಟಿವ್‌ ಬಂದಿದೆ.

ಜೊತೆಗೆ, ಕಾನ್‌ಸ್ಟೆಬಲ್‌ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದ ಬೆಳತ್ತೂರಿನ 15 ಮಂದಿಯಗಂಟಲ ದ್ರವದ ಪ‍ರೀಕ್ಷಾ ವರದಿಗಳೂ ನೆಗಟಿವ್‌ ಬಂದಿರುವುದರಿಂದ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕ್ವಾರಂಟೈನ್‌ ಕೇಂದ್ರ ಹಾಗೂ ಹಾಗೂ ಆಸ್ಪತ್ರೆಯಲ್ಲಿದ್ದ 15 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ.‌ ಕ್ವಾರಂಟೈನ್‌ನಲ್ಲಿರುವ ಇನ್ನೂ 23 ಜನರ ಗಂಟಲ ದ್ರವದ ಮಾದರಿಗಳ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಶುಕ್ರವಾರ ಬೆಳಿಗ್ಗೆ ಬರುವ ನಿರೀಕ್ಷೆ ಇದೆ.

ಪತ್ನಿ ಹಾಗೂ ಮಗಳೊಂದಿಗೆ ಅತ್ತೆ ಮನೆಗೆ ಬಂದಿದ್ದ ಕಾನ್‌ಸ್ಟೆಬಲ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಹೇಳಲಾಗಿತ್ತು. ಜಿಲ್ಲಾಡಳಿತ ತಕ್ಷಣವೇ ಅವರ ಸಂಪರ್ಕಕ್ಕೆ ಬಂದಿದ್ದ 36 ಮಂದಿಯನ್ನು ಕ್ವಾರಂಟೈನ್‌ ಮಾಡಿ ಆರೋಗ್ಯದ ಮೇಲೆ ನಿಗಾ ಇರಿಸಿತ್ತು. ಎಲ್ಲರ ಗಂಟಲ ದ್ರವದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಆದರೆ, ಬೆಂಗಳೂರಿನಲ್ಲಿ ಎರಡನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬುಧವಾರ ಹೇಳಿತ್ತು. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಜನತೆಯ ಆತಂಕ ಸ್ವಲ್ಪ ನಿವಾರಣೆಯಾಗಿತ್ತು.

ಮತ್ತೊಮ್ಮೆ ದೃಢಪಡಿಸುವ ಉದ್ದೇಶದಿಂದ ಅವರ ಮಾದರಿಯನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲೂ ಅವರಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ, ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

ಸ್ಥಳೀಯ ಶಾಸಕ ಆರ್‌.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಗುರುವಾರ ಬೆಳತ್ತೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ಯಾವುದೇ ಕಾರಣಕ್ಕೂ ಆತಂಕ ಪಡದಂತೆ ಧೈರ್ಯ ತುಂಬಿದರು. ಕ್ವಾರಂಟೈನ್‌ ಕೇಂದ್ರದಿಂದ ಮನೆಗೆ ಬಂದವರನ್ನು ಕೀಳಾಗಿ ಕಾಣಬೇಡಿ ಎಂದು ಸಲಹೆ ನೀಡಿದರು. ಕೋವಿಡ್‌ ತಡೆಗೆಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಿದರು.

ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT