ಶನಿವಾರ, ಫೆಬ್ರವರಿ 4, 2023
18 °C
ಜಿಲ್ಲೆಯಾದ್ಯಂತ ಸಂವಿಧಾನ ದಿನಾಚರಣೆ, ಪ್ರತಿಜ್ಞಾ ವಿಧಿ ಬೋಧನೆ, ಸ್ವೀಕಾರ

ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅಗತ್ಯ: ಭಾರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಶನಿವಾರ ಅಭಿಪ್ರಾಯಪಟ್ಟರು. 

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ರಂಗವಾಹಿನಿ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ‘ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ: ನಾಗರಿಕ ಜಾಗೃತಿ ಸಂವಿಧಾನದ ದಿನ-2022’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘1949ರ ನ.26 ರಂದು ದೇಶದ ಸಂವಿಧಾನ ಅಂಗೀಕಾರ ಮಾಡಲಾಯಿತು. ಇದನ್ನು 1970 ಜನವರಿ 26 ರಂದು ಜಾರಿಗೆ ಬಂದಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದಿಂದ ದೇಶಕ್ಕೆ ಉತ್ತಮ ಸಂವಿಧಾನ ರಚನೆಯಾಗಿದೆ’ ಎಂದರು. 

‘ಶ್ರೇಷ್ಠವಾದ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅಲ್ಲದೇ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದ್ದು, ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಜನರು ತಮ್ಮ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿನ ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಾದ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದಡಿ ಸರ್ಕಾರಗಳು ಜನರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಎಲ್ಲರೂ ಒಂದೇ ಭಾವನೆ ಹೊಂದಬೇಕು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮೈಸೂರು ಮಹಾರಾಜ ಕಾಲೇಜಿನ ಅರ್ಥಶಾಸ್ತ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ. ಷಣ್ಮುಗಂ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ರಂಗವಾಹಿನಿ ಟ್ರಸ್ಟ್ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಪ್ರಾಧ್ಯಾಪಕಿ ಚಂದ್ರಮ್ಮ ಇತರರು ಇದ್ದರು. 

ಸಂವಿಧಾನ ಗೌರವಿಸಿ: ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬ ನಾಗರಿಕನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ವ್ಯಕ್ತಿಯಾಗಿ ಜೀವನ ಸಾಗಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಮಾತನಾಡಿ, ‘ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಬಗ್ಗೆ ಅರಿವು ಹೊಂದಬೇಕು. ಅಲ್ಲದೆ ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯ ಪಾಲಿಸಬೇಕು. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ, ಪ್ರಾಧಿಕಾರದ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ, ಅರೆ ಕಾಲಿಕ ಕಾನೂನು ಸ್ವಯಂ ಸೇವಕರು ಇದ್ದರು.

ಜಿಲ್ಲಾಡಳಿತದಿಂದಲೂ ಆಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಸೇರಿದಂತೆ ಇತರರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು.

ಜಿಲ್ಲಾಧಿಕಾರಿ ರಮೇಶ್ ಭಾರತ ಸಂವಿಧಾನ ಪ್ರಸ್ತಾವನೆಯ ಪೀಠಿಕೆಯನ್ನು ಬೋಧಿಸಿದರು. ಇದೇ ವೇಳೆ ಗಣ್ಯರು ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರವು ಪ್ರಕಟಿಸಿರುವ ಭಾರತ ಸಂವಿಧಾನ ಪುಸ್ತಕ ಬಿಡುಗಡೆಗೊಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ತಹಶೀಲ್ದಾರ್ ಬಸವರಾಜು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಮುಖಂಡರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು