ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ, ವೈದ್ಯಕೀಯ ಸಲಕರಣೆಗಳಿಗೆ ಹಣದ ಕೊರತೆ ಇಲ್ಲ: ಎಸ್. ಸುರೇಶ್ ಕುಮಾರ್

ಭಾನುವಾರದ ಜನತಾ ಕರ್ಫ್ಯೂ ಬೆಂಬಲಿಸಲು ಜನತೆಗೆ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಕರೆ
Last Updated 21 ಮಾರ್ಚ್ 2020, 15:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಬೇಕಾದ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣ ನೀಡಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಹೇಳಿದರು.

ಜಿಲ್ಲಾಸ್ಪತ್ರೆ, ಜೆಎಸ್ಎಸ್‌ ಆಸ್ಪತ್ರೆ ಹಾಗೂ ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಲಾಗಿರುವ ಕೋವಿಡ್‌–19 ವಿಶೇಷ ನಿಗಾ ಘಟಕಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲೆಯಲ್ಲಿ ಸದ್ಯ ಎಂಟು ವೆಂಟಿಲೇಟರ್‌ಗಳಿವೆ. ಇನ್ನೂ 10 ಅಗತ್ಯವಿದೆ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಆರೋಗ್ಯ ಸಚಿವರೊಂದಿಗೆ ಮಾತನಾಡಿ ಆದಷ್ಟು ಶೀಘ್ರದಲ್ಲಿ ಅದರ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. 150 ಹಾಸಿಗೆಗಳ ವಿಶೇಷ ನಿಗಾ ಘಟಕವನ್ನೂ ಸಿದ್ಧಪಡಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪ್ರಕರಣ ದಾಖಲಾಗಿಲ್ಲ. ವಿದೇಶದಿಂದ ಬಂದಿರುವ 33 ಮಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನಾಲ್ವರು 14 ದಿನಗಳ ಪ್ರತ್ಯೇಕ ವಾಸದ ಅವಧಿ ಪೂರ್ಣಗೊಳಿಸಿದ್ದಾರೆ. 29 ಜನರನ್ನು ಪ್ರತ್ಯೇಕವಾಗಿರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಎಲ್ಲರ ಸಹಕಾರ ಬೇಕು: ‘ಕೊರೊನಾ ವೈರಸ್‌ ಹರಡುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಬೇಕಿದೆ. ಇದೊಂದು ರೀತಿಯಲ್ಲಿ ಕೊರೊನಾ ವಿರುದ್ಧದ ಸಮರ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಅವರು ಹೇಳಿದರು.

ಜನತಾ ಕರ್ಫ್ಯೂ ಬೆಂಬಲಕ್ಕೆ ಕರೆ: ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಭಾನುವಾರದ ‘ಜನತಾ ಕರ್ಫ್ಯೂ’ನಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಸಚಿವರು ಕರೆ ನೀಡಿದರು.

‘ಜಿಲ್ಲೆಯಾದ್ಯಂತ ಈ ಬಗ್ಗೆ ಧ್ವನಿವರ್ಧಕದಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಜನರು ಕೂಡ ಸ್ವಯಂ ಪ್ರೇರಿತರಾಗಿ ಇಡೀ ದಿನ ಮನೆಯಲ್ಲೇ ಕುಳಿತುಕೊಳ್ಳಬೇಕು’ ಎಂದು ಅವರು ಹೇಳಿದರು.

ಟೀಕೆ ಬೇಡ, ಪಕ್ಷಾತೀತವಾಗಿ ಬೆಂಬಲಿಸಿ

‘ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿರುವ ಭಾಷಣದ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ದೇಶದ ನಾಯಕನಾಗಿ ಮೋದಿ ಅವರಿಗೆ ಜವಾಬ್ದಾರಿ ಇದೆ. ಇಡೀ ದೇಶಕ್ಕೆ ಜಾಗೃತಿಯನ್ನು ಉಂಟು ಮಾಡುವ ಕೆಲಸ ಮಾಡಿದ್ದಾರೆ. ಒಳ್ಳೆಯ ದೃಷ್ಟಿಯಿಂದ ಸಲಹೆ ಕೊಟ್ಟಿದ್ದಾರೆ. ಇದರಲ್ಲಿ ಯಾರೂ ರಾಜಕೀಯ ಬೆರೆಸಬಾರದು’ ಎಂದರು.

‘ಈಗ ಕೊರೊನಾ ವೈರಸ್‌ ನಮ್ಮ ಶತ್ರು. ಅದರ ವಿರುದ್ಧ ಹೋರಾಡಬೇಕೇ ವಿನಾ ಆಡಳಿತ ಪಕ್ಷದ ವಿರುದ್ಧ ಅಲ್ಲ. ವೈರಸ್‌ ನಿಯಂತ್ರಣಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ವಿವಿಧ ದೇಶಗಳು ಮೆಚ್ಚಿವೆ. ಈ ಹೊತ್ತಿನಲ್ಲಿ ಸಮಾಜಕ್ಕೆ ವಿಶ್ವಾಸ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು. ಈ ಕಾರ್ಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಪ್ರಧಾನಿ ಅವರು ಭಾಷಣದಲ್ಲಿ ಸಂಕಷ್ಟದಲ್ಲಿರುವವರಿಗೆ, ಕೇರಳ ಮಾದರಿಯಲ್ಲಿ ಆರ್ಥಿಕ ನೆರವು ನೀಡುವ ಬಗ್ಗೆ ಏನೂ ಘೋಷಣೆ ಮಾಡಿಲ್ಲವಲ್ಲ ಎಂದು ಕೇಳಿದ್ದಕ್ಕೆ, ‘ಕೇರಳ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಉತ್ತರ ಪ್ರದೇಶ ಸರ್ಕಾರವೂ ಕೆಲವು ಯೋಜನೆಗಳನ್ನು ಪ್ರಕಟಿಸಿದೆ. ನಮ್ಮ ಸರ್ಕಾರವೂ ಇದೇ ಚಿಂತನೆಯಲ್ಲಿದೆ. ಮೋದಿ ಅವರು ತಮ್ಮ ಭಾಷಣದಲ್ಲಿ ಹಣಕಾಸು ಸಚಿವರ ನೇತೃತ್ವದಲ್ಲಿ ಆರ್ಥಿಕ ಕಾರ್ಯ ಪಡೆಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಈ ಪಡೆಯು ಸಭೆ ಸೇರಿ ಕೊರೊನಾ ವೈರಸ್‌ ಕಾರಣದಿಂದ ದೇಶದ ಅರ್ಥವ್ಯವಸ್ಥೆ ಮೇಲೆ ಆಗುತ್ತಿರುವ ಪರಿಣಾಮವನ್ನು ಅಧ್ಯಯನ ನಡೆಸಲಿದೆ. ಅಸಹಾಯಕ ಮತ್ತು ದುರ್ಬಲ ವರ್ಗದವರಿಗೆ ಆಗುತ್ತಿರುವ ತೊಂದರೆಯನ್ನು ಅರಿಯಲಿದೆ. ನಂತರ ಈ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹುಡುಗಾಟಿಕೆ ಬೇಡ, ವದಂತಿ ಹರಡದಿರಿ’

ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿ ಬಿಟ್ಟ ಇಬ್ಬರನ್ನು ಬಂಧಿಸಿರುವ ಜಿಲ್ಲೆಯ ಪೊಲೀಸ್‌ ಇಲಾಖೆಯನ್ನು ಶ್ಲಾಘಿಸಿದ ಸಚಿವರು, ‘ಇದು ಹುಡುಗಾಟಿಯ ವಿಷಯ ಅಲ್ಲ. ಯಾರೂ ವದಂತಿಗಳನ್ನು ಹರಡಬಾರದು. ಶತ್ರು ದೇಶಗಳ ವಿರುದ್ಧ ಯುದ್ಧ ಮಾಡುವಾಗ ನಾವು ಹೊಂದಿರುವ ಮಾನಸಿಕತೆಯನ್ನೂ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲೂ ತೋರ್ಪಡಿಸಬೇಕು. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕೇ ವಿನಾ ಆತಂಕ ಮೂಡಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT