ಮಂಗಳವಾರ, ಜೂನ್ 15, 2021
22 °C
ಜನರಿಂದ ಹಿಡಿಶಾಪ

ಕೋವಿನ್ ತಂತ್ರಾಂಶದಲ್ಲಿ ತಪ್ಪು ಮಾಹಿತಿ: ಕೊವ್ಯಾಕ್ಷಿನ್‌ಗಾಗಿ ಬಳಲಿ ಬಸವಳಿದ ಜನರು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ನ ಮೊದಲ ಡೋಸೆಜ್‌ ಪಡೆದ ಜನರು 2ನೇ ಡೋಸೆಜ್‌ಗಾಗಿ ಜಿಲ್ಲೆಯಲ್ಲಿ ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಬಗೆಯ ಲಸಿಕೆಯ ಕೊರತೆ ಇದೆ. ಆದರೆ, 2ನೇ ಡೋಸೆಜ್‌ನ ನಿಗದಿತ ಅವಧಿ ಸಮೀಪಕ್ಕೆ ಬಂದಿದೆ. ಎಲ್ಲಿ ಸಿಗುತ್ತದೆ ಎಂದು ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ.

‘ಕೋವಿನ್’ ತಂತ್ರಾಂಶದಲ್ಲಿ ಕೋವ್ಯಾಕ್ಸಿನ್‌ ಕೊಳ್ಳೇಗಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೆ ಎಂಬ ಮಾಹಿತಿ ಇದೆ. ಇದನ್ನು ನೋಡಿದ ಬಹಳಷ್ಟು ಮಂದಿ ಲಾಕ್‌ಡೌನ್‌ ಮಧ್ಯೆದಲ್ಲೂ ಅಲ್ಲಿಗೆ ಲಸಿಕೆ ಪಡೆಯಲು ಧಾವಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಸದ್ಯ ಕೋವಿಶೀಲ್ಡ್ ಲಸಿಕೆ ಮಾತ್ರವೇ ಇದೆ ಎಂದು ಹೇಳಿದ್ದಾರೆ. ಇದರಿಂದ ಬಹಳಷ್ಟು ದೂರದಿಂದ ಬಂದಿದ್ದವರು ನಿರಾಶರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಜತೆ ಮಾಹಿತಿ ಹಂಚಿಕೊಂಡ ಶಿವಸ್ವಾಮಿ, ‘ನನ್ನ ಮಗ ಕೋವಿನ್ ತಂತ್ರಾಂಶ ನೋಡಿ ಕೋವ್ಯಾಕ್ಸಿನ್ ಪಡೆಯಲು ಕೊಳ್ಳೇಗಾಲದವರೆಗೂ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋದ. ಆದರೆ, ಅಲ್ಲಿ ನನಗೆ ಕೋವಿಶೀಲ್ಡ್ ಮಾತ್ರವೇ ಇದೆ ಎಂದು ಹೇಳಿ ವಾಪಸ್ ಕಳಿಸಿದರು. ಈ ರೀತಿ ಸಾಕಷ್ಟು ಮಂದಿ ಅಲ್ಲಿಗೆ ಬಂದಿದ್ದರು. ತಂತ್ರಾಂಶದಲ್ಲಿ ಯಾವಾಗಲೂ ಸರಿಯಾದ ಮಾಹಿತಿ ನೀಡಬೇಕು’ ಎಂದರು.

ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಡಿ.ಎಸ್.ಗಿರೀಶ್ ಪ್ರತಿಕ್ರಿಯಿಸಿ, ‘ಈ ರೀತಿ ಸಾಕಷ್ಟು ಮಂದಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ಕನಿಷ್ಠ ಪಕ್ಷ ಸಮಯ ನಿಗದಿಯಾಗಿದ್ದವರಿಗಾದರೂ ಲಸಿಕೆ ನೀಡಬೇಕಾಗಿತ್ತು. ಸರ್ಕಾರದ ಈ ಕ್ರಮ ಸರಿಯಾದುದಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ ಕೊಳ್ಳೇಗಾಲ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಅವರನ್ನು ಸಂಪರ್ಕಿಸಿದಾಗ ಅವರು ಈ ರೀತಿಯಾಗಿರುವುದು ಗಮನಕ್ಕೆ ಬಂದಿಲ್ಲ ಎಂದರು. ‘ಕೋವಿನ್’ ತಂತ್ರಾಂಶದಲ್ಲಿ ತಾಂತ್ರಿಕ ದೋಷದಿಂದ ತಪ್ಪಾಗಿ ನಮೂದಾಗಿರಬಹುದು. ನಮ್ಮಲ್ಲಿ ಸದ್ಯ ಕೋವ್ಯಾಕ್ಸಿನ್‌ ಇಲ್ಲ’ ಎಂದು ಹೇಳಿದರು.ಕೊಳ್ಳೇಗಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊವ್ಯಾಕ್ಸಿನ್‌
 ಲಭ್ಯವಿದೆ ಎಂದು ಕೋವಿನ್ ತಂತ್ರಾಂಶದಲ್ಲಿ ನಮೂದಾಗಿರುವುದು

ಆದರೆ, ಕೊಳ್ಳೇಗಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಮೊಬೈಲ್‌ ಸಂಪರ್ಕಕ್ಕೆ ಸಿಗಲಿಲ್ಲ.

32 ಡೋಸ್‌ ಇದೆ ಎಂಬ ಮಾಹಿತಿ ಇತ್ತು!
‘ಮೇ 12ರಂದು ಬುಕ್‌ ಮಾಡಿದಾಗ ಕೋವ್ಯಾಕ್ಸಿನ್ 32 ಡೋಸ್‌ ಇದೆ ಎಂಬ ಮಾಹಿತಿ ಬಂದಿತ್ತು. ನಾನು 14ರಂದು ಬೆಳಿಗ್ಗೆ 11ಕ್ಕೆ ಬುಕ್‌ ಮಾಡಿದ್ದೆ. ಹಾಗಾಗಿ, 10 ಗಂಟೆಗೆ ಹೋಗಿದ್ದೆ. ಆದರೆ, ಅಲ್ಲಿನ ಸಿಬ್ಬಂದಿ ‘ಇಲ್ಲಿ ಕೋವ್ಯಾಕ್ಸಿನ್ ಇಲ್ಲ, ಕೋವಿಶೀಲ್ಡ್‌ ಮಾತ್ರ ಇದೆ. ಮೂರು ದಿನದಿಂದಲೂ ಹೀಗೆ ಆಗುತ್ತಿದೆ. ಮಳವಳ್ಳಿ ಹಾಗೂ ಮೈಸೂರಿನಿಂದಲೂ ಜನರು ಬಂದು ವಾಪಸ್ ತೆರಳುತ್ತಿದ್ದಾರೆ  ಎಂದು ಹೇಳಿದರು.

ತಂತ್ರಾಂಶದಲ್ಲಿ ಈ ರೀತಿ ತಪ್ಪು ಮಾಹಿತಿ ನೀಡಿದ್ದರಿಂದ ಸಾಕಷ್ಟು ಮಂದಿಗೆ ತೊಂದರೆಯಾಗಿದೆ ಎಂದು ದೊಡ್ಡರಾಯಪೇಟೆಯ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು