ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಿ ನರಸಿಂಹ ಆಲಯದಲ್ಲಿ ಬಿರುಕು

ಕಾಯಕಲ್ಪಕ್ಕೆ ಕಾದಿರುವ ಐತಿಹಾಸಿಕ ಅಗರ ಚಾರಿತ್ರಿಕ ದೇವಳ
ನಾ.ಮಂಜುನಾಥಸ್ವಾಮಿ
Published 16 ಜೂನ್ 2024, 7:35 IST
Last Updated 16 ಜೂನ್ 2024, 7:35 IST
ಅಕ್ಷರ ಗಾತ್ರ

ಯಳಂದೂರು: ಚೋಳರ ಕಾಲದ ಗತ ವೈಭವವನ್ನು ಸಾರುವ, ತಾಲ್ಲೂಕಿನ ಅಗರ ನರಸಿಂಹ ದೇವಾಲಯ ಅಪರೂಪದ ಶಿಲ್ಪ ಕಲ್ಪಗಳಿಂದ ಗಮನ ಸೆಳೆಯುತ್ತದೆ. ಆದರೆ, ಈಚಿನ ದಿನಗಳಲ್ಲಿ ದೇಗುಲ ಶಿಥಿಲವಾಗುತ್ತಿದ್ದು, ಅಪೂರ್ವ ಕಲಾಕೃತಿಯನ್ನು ಹೊತ್ತು ನಿಂತ ಶಿಲಾ ಗೋಡೆಗಳು ಬಿರುಕು ಬಿಟ್ಟು ಧರಾಶಾಯಿಯಾಗುವ ಆತಂಕ ಎದುರಾಗಿದೆ.  

3-10ನೇ ಶತಮಾನದ ಅಂತ್ಯದಲ್ಲಿ ಯಳಂದೂರು ಪಟ್ಟಣ ಸುತ್ತಮುತ್ತಲೂ ಚೋಳರ ಕಲಾ ವಲಯ ಅರಳಿತ್ತು. ಇವರ ಕಾಲದ ಶಿಲ್ಪಿಗಳ ಕೈಚಳಕದಲ್ಲಿ ಕ್ರಿ.ಶ 1050ರ ಸಮಯದಲ್ಲಿ ನಿರ್ಮಿಸಿರುವ ಅಗರ ನರಸಿಂಹ ದೇವಳ ಈಗ ಕುಸಿಯುವ ಆತಂಕದಲ್ಲಿದೆ. ಕಲ್ಲಿನ ಚಾಚಣಿಯಿಂದ ಮಳೆ ನೀರು ಹರಿದು ಮೂಲೆ ಬಿರುಕು ಬಿಟ್ಟಿದೆ.

ಯಳಂದೂರು ತಾಲ್ಲೂಕಿನ ಅಗರ ಗ್ರಾಮದ ಐತಿಹಾಸಿಕ ನರಸಿಂಹ ದೇಗುಲದ ಶಿಲೆಯ ಗೋಡೆಗಳು ಬಿರುಕು ಬಿಟ್ಟು, ಬೇರು ಬೆಳೆಯುತ್ತಿದೆ

ಯಳಂದೂರು ತಾಲ್ಲೂಕಿನ ಅಗರ ಗ್ರಾಮದ ಐತಿಹಾಸಿಕ ನರಸಿಂಹ ದೇಗುಲದ ಶಿಲೆಯ ಗೋಡೆಗಳು ಬಿರುಕು ಬಿಟ್ಟು, ಬೇರು ಬೆಳೆಯುತ್ತಿದೆ

ನಡುವೆ ಮರದ ಬೇರುಗಳು ಸೇರಿ ಗೋಡೆಯನ್ನು ಸಡಿಲಗೊಳಿಸುತ್ತಿದೆ. ಮಾಡಿನಿಂದ ನೀರು ತೊಟ್ಟಿಕ್ಕುತ್ತಿದ್ದು, ಅಮೂಲ್ಯ ಕಲಾಸಿರಿ ಕಣ್ಮೆರೆಯಾಗುವ ಸನ್ನಿವೇಶ ಸೃಷ್ಟಿಯಾಗಿದೆ.  

‘ದೇವಾಲಯ ಪ್ರಾಂಗಣ ಒತ್ತುವರಿ ಸಮಸ್ಯೆಯಿಂದ ನಲುಗಿದೆ. ವರದರಾಜಸ್ವಾಮಿ ವಿಗ್ರಹ ಭಗ್ನಗೊಂಡಿದೆ. ಸಾವಿರ ವರ್ಷಗಳಿಂದ ಗಂಗರು, ಚೋಳ, ಪಾಳೆಗಾರ, ಹದಿನಾಡಿನ ಸಂಬಂಧಗಳ  ಮೇಲೆ ಬೆಳಕು ಚೆಲ್ಲಿದ್ದ ಗುಡಿಯನ್ನು ಉಳಿಸಬೇಕು. ಅಪೂರ್ವತಮಿಳು ಶಾಸನಗಳನ್ನು ಒಳಗೊಂಡ ದೇವಾಲಯದ ಜಗತಿಯನ್ನು ಸ್ವಚ್ಛಗೊಳಿಸಿ, ಕಾಯಕಲ್ಪಗೊಳಿಸುವ ಕೆಲಸಕ್ಕೆ ವೇಗ ಕೊಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.

ನರಸಿಂಹನ ವಿಶೇಷ: ಗರ್ಭಗುಡಿಯಲ್ಲಿ ಗರುಡಪೀಠದ ಮೇಲೆ ಪವಡಿಸಿರುವ
ನರಸಿಂಹನ ಮೂರ್ತಿ ರಚನೆ ಸೊಗಸಾಗಿದೆ.

‘ಯೋಗಭಂಗಿ, ಲಕ್ಷ್ಮಿಯ ಸಾಮಿಪ್ಯ, ಪ್ರಹ್ಲಾದ, ನಾರದ ಮುನಿಯ ಶಾಂತತೆ, ಉಗ್ರತೆಯ ಲಕ್ಷಣಗಳನ್ನು, ಜ್ವಾಲಾ ನರಸಿಂಹನ ಏಕ ವಿಗ್ರಹದಲ್ಲಿ ಕೆತ್ತಲಾಗಿದೆ. ಹಾಗಾಗಿ, ಈ ರೀತಿಯ ನರಸಿಂಹ ದರ್ಶನ ಪಡೆಯುವುದರಿಂದ ಸಕಲವೂ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ. ದೇವತೆಯ ಪ್ರಭಾವಳಿ ರಚನೆ ಮತ್ತು ದಶಾವತಾರ ಚಿತ್ರಗಳು ಆಕರ್ಷಣೀವಾಗಿದ್ದು ನೆರೆ ರಾಜ್ಯದ ಭಕ್ತರು ಇಲ್ಲಿ ಪೂಜೆ ಸಲ್ಲಿಸಲು ಬರುತ್ತಾರೆ’ ಎಂದು ಅರ್ಚಕ ಹರಿಕೃಷ್ಣ ಹೇಳಿದರು.

ಚೋಳರ ಗ್ರಾಮಾಡಳಿತದ ತೊಟ್ಟಿಲು

ತಾಲ್ಲೂಕಿನ ಅಗರ-ಮಾಂಬಳ್ಳಿ ಕೇಂದ್ರವಾಗಿಸಿ ಹತ್ತಾರು ಶಿವ ದೇವಾಲಯಗಳನ್ನು ರಾಜರಾಜ, ಕುಲೋತ್ತುಂಗ ಮತ್ತು ನಂತರದ ಚೋಳ ಅರಸರು ನಿರ್ಮಿಸಿದ್ದಾರೆ.

ದೇಗುಲ ಕೇಂದ್ರವಾಗಿಸಿ ಆಡಳಿತ, ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದರು. ಗ್ರಾಮಾಡಳಿತದ ಮೊದಲ ಮೆಟ್ಟಿಲಾಗಿ ಗುಡಿ-ಗೋಪುರ ಕಟ್ಟುತ್ತಿದ್ದರು. ದೇವಾಲಯದಲ್ಲಿ ಶಿವನಿಗೆ  ಪ್ರಥಮ ಪ್ರಾಶಸ್ತ್ಯ ನೀಡಿ, ಗೋಡೆಗಳಲ್ಲಿ ಶಿಲಾ ಚಿತ್ರಗಳ ಕೆತ್ತನೆ ಮಾಡುತ್ತಿದ್ದರು, ಪಲ್ಲವ ಕಾಲ ಘಟ್ಟದಲ್ಲಿ ಪ್ರಾರಂಭವಾದ ಮಂಟಪ ಇಲ್ಲವೇ ಸಭಾಂಗಣದ ಪ್ರವೇಶ ದ್ವಾರದಲ್ಲಿ ಪ್ರಜೆಗಳ ಪಾಲಕ ರಾಜರನ್ನು ನಿಲ್ಲಿಸುವ ಪರಂಪರೆಗೆ ನಾಂದಿ ಹಾಡಿದರು. ಇಂತಹ ಹತ್ತು ಹಲವು ವಿಶೇಷತೆಗಳ ಆಗರವಾದ ಅಗರದ ಚೋಳ ಕಾಲದ ದ್ರಾವಿಡ ಶೈಲಿಯ ದೇಗುಲದ ಕಲೆ ಮತ್ತು ವಾಸ್ತು ಶಿಲ್ಪವನ್ನು ಉಳಿಸುವ ಕೆಲಸ ಆಗಬೇಕು.

1000 ವರ್ಷಗಳ ಹಿಂದಿನ ದೇವಾಲಯ ವಾಸ್ತು ಶಿಲ್ಪಕ್ಕೆ ಹೆಸರುವಾಸಿ ಅಪೂರ್ವವಾದ ನರಸಿಂಹ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT