ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ: ಚಾಮರಾಜನಗರದಲ್ಲಿ ಶೇ 86ರಷ್ಟು ಪ್ರಗತಿ

ಪ್ರಸ್ತುತ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿ, ಪಿ.ಆರ್‌ ಸಮೀಕ್ಷೆಯಲ್ಲೂ ಮುಂಚೂಣಿಯಲ್ಲಿ
Last Updated 24 ಸೆಪ್ಟೆಂಬರ್ 2020, 15:51 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ 2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಜಿಲ್ಲೆಯಲ್ಲಿ ಶೇ 86.25ರಷ್ಟು ಪ್ರಗತಿ ಸಾಧಿಸಿದೆ.

ಗುರುವಾರದ ಅಂಕಿ ಅಂಶಗಳ ಪ್ರಕಾರ,ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಯುತ್ತಿರುವುದರಿಂದ ಪ್ರತಿ ದಿನ ಸ್ಥಾನದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ಜಿಲ್ಲೆಗೆ 4,22,386 ತಾಕುಗಳ ಗುರಿ ನಿಗದಿಪಡಿಸಲಾಗಿದೆ.

ರೈತರು ತಮ್ಮ ಜಮೀನುಗಳ ಸರ್ವೆ ನಂಬರ್‌ ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳ ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ‘ಬೆಳೆ ಸಮೀಕ್ಷೆ –2020’ರ ಆ್ಯಪ್‌ ಮೂಲಕ ಮಾಡಲು ಅವಕಾಶ ನೀಡಲಾಗಿತ್ತು. ರೈತರು ಸ್ವತಃ 97,472 ತಾಕುಗಳ ಬೆಳೆ ಸಮೀಕ್ಷೆ ನಡೆಸಿದ್ದಾರೆ.

ಆ ಬಳಿಕ ಖಾಸಗಿ ವ್ಯಕ್ತಿಗಳನ್ನು ಎಲ್ಲ ಗ್ರಾಮಗಳಿಗೆ ನೇಮಿಸಿ ಪಿ.ಆರ್‌. ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, 2,66,819 ತಾಕುಗಳಲ್ಲಿ ಸಮೀಕ್ಷೆ ಕಾರ್ಯಪೂರ್ಣಗೊಂಡಿದೆ.

ರಾಜ್ಯದಲ್ಲಿ ಪಿ.ಆರ್ ಆ್ಯಪ್‌ ಮೂಲಕನಡೆಸುತ್ತಿರುವ ಬೆಳೆ ಸಮೀಕ್ಷೆ ಪ್ರಗತಿಯಲ್ಲೂ ಜಿಲ್ಲೆ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ.

ಸಮೀಕ್ಷೆ ಉಸ್ತುವಾರಿಗಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನೇಮಿಸಿದ್ದು, ರೈತರ ಬೆಳೆ ಸಮೀಕ್ಷೆಯ ತಾಕುಗಳ ಮೇಲ್ವಿಚಾರಣೆಯಲ್ಲಿ ಶೇ 93.90 ರಷ್ಟು ಹಾಗೂ ಖಾಸಗಿ ನಿವಾಸಿಗಳ ತಾಕುಗಳ ಮೇಲ್ವಿಚಾರಣೆಯಲ್ಲಿ ಶೇ 82.40ರಷ್ಟು ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳೊಂದಿಗೆ ಹಲವು ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದರು.

‘ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸಿದ ದತ್ತಾಂಶವನ್ನು ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ, ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್‌ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡಲು, ಅನುಕೂಲವಾಗಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿ, ಎನ್.ಡಿ.ಆರ್ ಎಫ್ ಮತ್ತು ಎಸ್.ಟಿ.ಆರ್.ಎಫ್ ನಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಹಾಯಧನ ನೀಡುವ ಸಲುವಾಗಿ ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸಲು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT