ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ...

ಆರ್ಥಿಕ ಸಂಕಷ್ಟದಲ್ಲಿ ಹಣ್ಣಿನ ಬೆಳೆಗಾರ: ಖರೀದಿಗೆ ತೊಡಕು
Last Updated 22 ಮೇ 2021, 4:07 IST
ಅಕ್ಷರ ಗಾತ್ರ

ಯಳಂದೂರು: ಕಲ್ಲಂಗಡಿ, ಎಲೆಕೋಸು ಮತ್ತಿತರ ತರಕಾರಿ ಮತ್ತು ಹಣ್ಣನ್ನು ಬೆಳೆದು ಉತ್ತಮ ವರಮಾನ ನಿರೀಕ್ಷಿಸಿದ್ದ ತಾಲ್ಲೂಕಿನ ರೈತಾಪಿ ವರ್ಗ ಜನತಾ ಕರ್ಫ್ಯೂನಿಂದ ಸಂಕಷ್ಟಕ್ಕೆ ಸಿಲುಕಿದೆ.

ಗುತ್ತಿಗೆ ಪಡೆದವರು ಮತ್ತು ರೈತರು ಹಣ್ಣು ಮತ್ತು ತರಕಾರಿ ಬೆಳೆದು, ಕೊಯ್ಲಿನ ನಂತರ ಸಾಗಣೆ ಮಾಡಲಾಗದೆ, ಖರ್ಚುವೆಚ್ಚಗಳಿಗೆ ಹೆದರಿ ಹೊಲದಲ್ಲಿ ಬಿಟ್ಟಿದ್ದಾರೆ. ಆಮೆಕೆರೆ ಮತ್ತು ವಡಗೆರೆ ಸುತ್ತಮುತ್ತ ಲಕ್ಷಾಂತರ ರೂಪಾಯಿ ವ್ಯಯಿಸಿ ಉತ್ತಮ ಇಳುವರಿ ಪಡೆದರೂ ಗ್ರಾಹಕರು ಇಲ್ಲದೆ ಕೈಚೆಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಗುಣಮಟ್ಟದ ಕಲ್ಲಂಗಡಿ ಬೆಳೆದವರು ಕೊಯ್ಲು ಮಾಡಲಾಗದೆ ಬಿಟ್ಟಿದ್ದು, ಕಳೆಗಿಡಗಳ ಮಧ್ಯೆ ಹಣ್ಣು ಕೊಳೆಯುತ್ತಿದೆ.

ಲಾಕ್‌ಡೌನ್‌ಗೂ ಮೊದಲು ಪಟ್ಟಣ ಪ್ರದೇಶಕ್ಕೆ ಮಾರಾಟ ಮಾಡಲು ಕಲ್ಲಂಗಡಿ ಬೆಳೆಯಲಾಗಿತ್ತು. ಕೆಲ ಕೃಷಿಕರು ಎಲೆಕೋಸು ಬೆಳೆದಿದ್ದರು. ಆದರೆ, ಮುಂಗಡ ನೀಡಿದ ವ್ಯಾಪಾರಿಗಳೇ ಹೊಲದತ್ತ ಬರದೆ ಇರುವುದರಿಂದ ಕೋಸನ್ನು ಹೊರತುಪಡಿಸಿ ಹಣ್ಣುಗಳನ್ನು ತಾಕಿನಲ್ಲಿ ಬಿಟ್ಟಿದ್ದಾರೆ. ಕಡಿಮೆ ದರಕ್ಕೆ ಕೋಸು ಬೆಳೆಗಾರರು ಸ್ಥಳೀಯರಿಗೆ ನೀಡುತ್ತಿದ್ದಾರೆ. ಇತರರು ಕಟಾವು ಮಾಡಿಲ್ಲ ಎಂದು ಕೊಮಾನಪುರ ಬಸವರಾಜು ಹೇಳಿದರು.

ಬಹುತೇಕ ಬೇಸಾಯಗಾರರು ಕೊಳವೆಬಾವಿ ಕೊರೆಸಿ, ಸಾಲ ಮಾಡಿ ಕೃಷಿ ಮಾಡಿದ್ದಾರೆ. ಬೆಳೆ ಉತ್ತಮ ವಾಗಿ ಬಂದಿದ್ದು ಇದೀಗ ಕಟಾವು ಮಾಡುವ ಹಂತದಲ್ಲಿ ಇದೆ. ಮಧ್ಯವರ್ತಿ ವ್ಯಾಪಾರಿಗಳಿಗೆ ತಿಳಿಸಿದರೂ ಲಾಕ್‌ಡೌನ್‌ ಇರುವುದರಿಂದ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಕೃಷಿಕರು ನಷ್ಟ ಅನುಭವಿಸುವಂತೆ ಆಗಿದೆ. ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡುವ ಮೂಲಕ ಹಣ್ಣು, ತರಕಾರಿ ಬೆಳೆಗಾರರ ಹಿತಕಾಯಬೇಕು ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT