ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ಗೃಹ ಸಚಿವರ ಭೇಟಿಗೆ ನಿರ್ಧಾರ

ದಡದಹಳ್ಳಿ ರಮೇಶ್‌ ಸಾವಿನ ಪ್ರಕರಣ, ಸಮಗ್ರ ತನಿಖೆಗೆ ದಲಿತ ಮುಖಂಡರ ಆಗ್ರಹ
Published 10 ಸೆಪ್ಟೆಂಬರ್ 2023, 6:58 IST
Last Updated 10 ಸೆಪ್ಟೆಂಬರ್ 2023, 6:58 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ದಡದಹಳ್ಳಿಯ ರಮೇಶ್‌ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ಹೇರುವುದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಪ್ರತಿಭಟನೆ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಮನವಿ ಮಾಡಲು ದಲಿತ ಸಂಘಟನೆಗಳ ಮುಖಂಡರು ಶನಿವಾರ ತೀರ್ಮಾನಿಸಿದ್ದಾರೆ. 

ರಮೇಶ್‌ ಸಾವು ಹಾಗೂ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದಕ್ಕಾಗಿ ದಲಿತ ಸಂಘಟನೆಗಳ ಮುಖಂಡರು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸಭೆ ಸೇರಿದ್ದು, ಅಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. 

‘ರಮೇಶ್‌ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನೋಡಿದಾಗ, ಅದು ಅಪಘಾತವಲ್ಲ, ಕೊಲೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರಮೇಶ್‌ ಅವರ ಪತ್ನಿ, ಕುಟುಂಬದ ಸದಸ್ಯರು ಅಪಘಾತದಿಂದ ಸಾವು ಸಂಭವಿಸಿದೆ ಎಂದು ದೂರು ನೀಡಿರುವುದರಿಂದ ಅಪಘಾತ ಪ್ರಕರಣ ಎಂದು ದಾಖಲಾಗಿದೆ. ಅವರು ಯಾವ ಒತ್ತಡಕ್ಕೆ ಆ ರೀತಿ ದೂರು ಕೊಟ್ಟಿದ್ದಾರೋ ತಿಳಿಯದು. ಆದರೆ, ಮೃತಪಟ್ಟಿರುವ ವ್ಯಕ್ತಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು. ಹಾಗಾಗಿ, ಇದು ಸಮುದಾಯದ ಅಸ್ತಿತ್ವದ ಪ್ರಶ್ನೆ. ಕುಟುಂಸ್ಥರು ಬರುತ್ತಾರೋ, ಬಿಡುತ್ತಾರೋ, ಸಮಾಜ ಒಗ್ಗಟ್ಟಾಗಿ ಈ ಪ್ರಕರಣದಲ್ಲಿ ಹೋರಾಟ ಮಾಡಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. 

ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ‘ಅನುಮಾನಸ್ಪದ ಸಾವು ಎಂದು ಗೊತ್ತಿದ್ದರೂ, ನಮ್ಮ ಸಮುದಾಯದವರು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಹೋರಾಟಕ್ಕೆ ಮುಂದೆ ಬರುತ್ತಿಲ್ಲ. ಬೇರೆಲ್ಲೋ ಆದ ಘಟನೆಗೆ ಹೋರಾಟ ಮಾಡುವ ನಾವು, ನಮ್ಮ ನಡುವೆಯೇ ನಡೆದ ಘಟನೆ ಬಗ್ಗೆ ಮೌನವಾಗಿದ್ದೇವೆ. ಇದು ಸರಿಯಲ್ಲ ’ ಎಂದರು. 

‘ರಮೇಶ್‌ ಪತ್ನಿ, ಅಪಘಾತ ಎಂದು ದೂರು ನೀಡಲು ಏನು ಕಾರಣವೋ ಗೊತ್ತಿಲ್ಲ. ಕನಿಷ್ಠ ಪಕ್ಷ ಪೊಲೀಸರಾದರೂ ಸ್ವಯಂ ಪ್ರೇರಿತರಾಗಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಿತ್ತು. ಆದರೆ, ಅದನ್ನೂ ಮಾಡಿಲ್ಲ. ಮಾಧ್ಯಮಗಳಲ್ಲಿ ವರದಿಯಾದ ಬಳಿಕ, ಸಮುದಾಯದ ಕೆಲವು ಮುಖಂಡರು ಎಸ್‌ಪಿಯವರನ್ನು ಭೇಟಿಯಾದ ಬಳಿಕ, ಉರಿಲಿಂಗ ಪೆದ್ದಿಮಠದ ಪ್ರಕಾಶ ಸ್ವಾಮೀಜಿಯವರ ಗಮನಕ್ಕೆ ತಂದು ಅವರು ಸಚಿವರೊಂದಿಗೆ ಮಾತನಾಡಿದ ನಂತರ, ತನಿಖಾಧಿಕಾರಿ ಬದಲಾಗಿ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅದಕ್ಕಾಗಿ ನಾವು ಹೋರಾಟ ಮಾಡಬೇಕಾಗಿದೆ’ ಎಂದರು. 

ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಎನ್‌.ನಾಗಯ್ಯ ಮಾತನಾಡಿ, ‘ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಪೊಲೀಸರು ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ. ನಾವು ಒಂದು ನಿಯೋಗ ಮಾಡಿಕೊಂಡು ಗೃಹ ಸಚಿವ ಡಾ.ಜಿ.ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು’ ಎಂದು ಸಲಹೆ ನೀಡಿದರು. 

ದಡದಹಳ್ಳಿ ಗ್ರಾಮದ ಮುಖಂಡ ಶಂಕರ್ ಮಾತನಾಡಿ, ‘ಮೃತ ರಮೇಶ್ ಅವರ ಕುಟುಂಬವನ್ನು ಭೇಟಿ ಮಾಡಿ, ಇದು ಅಪಘಾತದಂತೆ ಕಾಣುತ್ತಿಲ್ಲ‌‌. ಇದೊಂದು ಕೊಲೆ ಎಂಬ ಶಂಕೆ ಇದೆ. ಈ ಬಗ್ಗೆ ಹೋರಾಟಕ್ಕೆ ನಮ್ಮೊಂದಿಗೆ ಬನ್ನಿ ಎಂದು ಹೇಳಿದರೂ, ಅವರು ಮುಂದೆ ಬದಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಡೆದಿರುವ ಬೆಳವಣಿಗೆಗಳು ಅನುಮಾನ ಹುಟ್ಟಿಸುವಂತಿವೆ. ಹಾಗಾಗಿ, ತನಿಖೆ ನಡೆಯಬೇಕು’ ಎಂದರು. 

ದಲಿತ ಸಂಘರ್ಷ ಸಮಿತಿ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ‘ರಮೇಶ್ ಸಾವು ಕುರಿತು ಅವರ ಪತ್ನಿ ನೀಡಿರುವ ದೂರಿನಲ್ಲಿ ಅನುಮಾನವಿದ್ದು, ಈ ಘಟನೆಯ ಬಗ್ಗೆ ನಾವು ವಿಸ್ತೃತವಾಗಿ ವಿಚಾರಿಸಬೇಕು. ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿಸಬೇಕು. ಆ ಬಳಿಕ ನಾವು ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು. 

ಮುಖಂಡರಾದ ಶಿವಮೂರ್ತಿ, ಜಯಶಂಕರ್‌, ಬಸವರಾಜು, ಹೊಂಡರಬಾಳು ವಾಸು, ಚಂದ್ರಕಾಂತ್, ಶಿವಮೂರ್ತಿ, ನಲ್ಲೂರು ಪರಮೇಶ್ವರ್, ಆಲೂರು ನಾಗೇಂದ್ರ ಇತರರು ಮಾತನಾಡಿದರು. 

ಬಿಎಸ್‌ಪಿಯ ಬ್ಯಾಡಮೂಡ್ಲು ಬಸವಣ್ಣ, ಎಸ್‌.ಪಿ.ಮಹೇಶ್‌, ಬಿವಿಎಫ್‌ನ ರವಿಮೌರ್ಯ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು. 

ಜ್ಞಾನಪ್ರಕಾಶ್‌ ಸ್ವಾಮೀಜಿ ನೇತೃತ್ವದಲ್ಲಿ ನಿಯೋಗ

ಅಂತಿಮವಾಗಿ ಮಾತನಾಡಿದ ಕೃಷ್ಣಮೂರ್ತಿ ‘ಘಟನೆ ಸಂಬಂಧ ಸೋಮವಾರ ಸುದ್ದಿಗೋಷ್ಠಿ ನಡೆಸೋಣ. ಮಂಗಳವಾರ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು ಅಲ್ಲೂ ಈ ವಿಚಾರ ಪ್ರಸ್ತಾಪಿಸೋಣ. ಗುರುವಾರ ಇಲ್ಲವೇ ಶುಕ್ರವಾರ ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನೆ ನಡೆಸಬೇಕು. ಆ ಬಳಿಕ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ಹೋಗಿ ಗೃಹಸಚಿವ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT