ಗುರುವಾರ , ಆಗಸ್ಟ್ 18, 2022
25 °C

ಬಕ್ರೀದ್: ಸೌಹಾರ್ದ ಆಚರಣೆಗೆ ಡಿ.ಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇದೇ 10ರಂದು ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಆಗಿರುವ ಚಾರುಲತಾ ಸೋಮಲ್ ಅವರು ಬುಧವಾರ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ‘ಪವಿತ್ರ ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಹಬ್ಬ. ಹಬ್ಬವನ್ನು ಸೌಹಾರ್ದವಾಗಿ ಆಚರಿಸುವ ಜೊತೆಗೆ ಸರ್ಕಾರ ನಿಗದಿಪಡಿಸಿದ ನಿರ್ದೇಶನ, ಮಾರ್ಗಸೂಚಿಗಳನ್ನು ಪಾಲಿಸಬೇಕು. ಶಾಂತಿ, ಸೌಹಾರ್ದತೆಗೆ ಬದ್ಧರಾಗಿ ಎಲ್ಲರೂ ಈ ನೆಲದ ಕಾನೂನನ್ನು ಗೌರವಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಸ್. ಸುಂದರರಾಜ್‌ ಮಾತನಾಡಿ, ‘ಬಕ್ರೀದ್ ಕಾರಣಕ್ಕೆ ಜಿಲ್ಲೆಯ ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಬ್ಬಂದಿ ನಿಯೋಜಿಸಲಾಗಿದೆ. ಹಬ್ಬ ಆಚರಣೆಗೆ ಪಡೆದಿರುವ ಪರವಾನಗಿಯಲ್ಲಿರುವ ಷರತ್ತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಧ್ವನಿವರ್ಧಕಗಗಳಿಂದ ಹೊರಡುವ ಶಬ್ಧದ ಬಗ್ಗೆ ನಿಗದಿಪಡಿಸಿರುವ ಅಂಶಗಳನ್ನು ಚಾಚು ತಪ್ಪದೇ ಪಾಲಿಸಬೇಕು’ ಎಂದರು.

ಮದೀನ ಮಸೀದಿ ಕಾರ್ಯದರ್ಶಿ ವಶೀಂ ಪಾಷ  ಮಾತನಾಡಿ, ‘ಹಬ್ಬದಂದು ಚಾಮರಾಜನಗರದ ಪಟ್ಟಣದ ಸೋಮವಾರಪೇಟೆಯ ಈದ್ಗಾ ಮೈದಾನ ಹಾಗೂ ಕ್ರೀಡಾಂಗಣದ ಬಳಿ ಪ್ರಾರ್ಥನೆ ಸ್ಥಳ ಹಾಗೂ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಮಾಡಿಕೊಡಬೇಕು. ಪಟ್ಟಣವ್ಯಾಪ್ತಿಯಲ್ಲಿ ಕಸದ ವಿಲೇವಾರಿ, ವಿದ್ಯುತ್ ಸರಬರಾಜು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಉಪ ವಿಭಾಗಾಧಿಕಾರಿ ಗೀತಾ ಹುಡೇದ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಆಯುಕ್ತರಾದ ಕರಿಬಸವಯ್ಯ, ತಹಶೀಲ್ದಾರ್ ಬಸವರಾಜು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಸ್ಲಿಂ ಧಾರ್ಮಿಕ ಮುಖಂಡರು ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.