ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಜೂನ್ 4ಕ್ಕೆ ಮತ ಎಣಿಕೆ; ಸಕಲ ಸಿದ್ಧತೆ

ಲೊಕಸಭಾ ಚುನಾವಣೆ; ಮಂಗಳವಾರ ಬೆಳಿಗ್ಗೆ 8 ರಿಂದ ಮತ ಎಣಿಕೆ– ಜಿಲ್ಲಾಧಿಕಾರಿ ಶಿಲ್ಪಾ ನಾಗ್‌
Published 2 ಜೂನ್ 2024, 15:57 IST
Last Updated 2 ಜೂನ್ 2024, 15:57 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ (ಜೂನ್ 4) ನಡೆಯಲಿದ್ದು, ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. 

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. 

‘ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಎಚ್.ಡಿ. ಕೋಟೆ, ನಂಜನಗೂಡು, ವರುಣ, ತಿ. ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ’ ಎಂದರು.

‘ಅಂಚೆ ಮತಪತ್ರಗಳ ಮೂಲಕ 4,405 ಮತ ಚಲಾವಣೆಯಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ತಲಾ 14 ಟೇಬಲ್‌ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ತಲಾ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಮಂದಿ ಎಣಿಕೆ ಸಹಾಯಕರು, 14 ಮಂದಿ ಮೈಕ್ರೋ ಅಬ್ಸರ್ವರ್‌ ಹಾಗೂ ಅಂಚೆ ಮತ ಪತ್ರ ಎಣಿಕೆಗೆ 5 ಮಂದಿ ಸೇರಿ ಒಟ್ಟು 45 ಸಿಬ್ಬಂದಿ ಇರಲಿದ್ದಾರೆ. ಅಂಚೆ ಮತ ಪತ್ರ ಎಣಿಕೆಗೆ 8 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 8 ಮಂದಿ ಏಜೆಂಟರನ್ನು ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಯು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯವರ ಸಮ್ಮುಖದಲ್ಲಿ ನಡೆಯಲಿದೆ’ ಎಂದರು.

‘ಇವಿಎಂ ಮೂಲಕ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಏಜೆಂಟರಂತೆ ಒಟ್ಟು 120 ಮಂದಿ ಎಣಿಕೆ ಏಜೆಂಟರನ್ನು ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‍ಗಳಂತೆ 112 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆ ಟೇಬಲ್‍ಗಳಲ್ಲಿ ಮತಯಂತ್ರಗಳ ಎಣಿಕೆ ಕಾರ್ಯವನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇಟಿಪಿಬಿಎಸ್ ತಂತ್ರಾಂಶದಲ್ಲಿ ನಡೆಸಲು 2 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ನಮೂನೆ-18 ರಲ್ಲಿ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಲು ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಎಣಿಕೆ ನಡೆಯುವ ಸ್ಥಳ, ಎಣಿಕೆ ಕಾರ್ಯದ ಸಮಯ ಮತ್ತು ಎಣಿಕೆ ಕಾರ್ಯ ನಡೆಸುತ್ತಿರುವ ಟೇಬಲ್‍ಗಳ ವಿವರವನ್ನು ನೀಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್ ಬಳಿ ಮತ ಎಣಿಕೆ ಏಜೆಂಟರುಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಲ್ಪಾ ನಾಗ್‌ ಹೇಳಿದರು. 

‘ಏಜೆಂಟರಿಗೆ ಎಣಿಕೆಯ ಸಮಗ್ರ ಪ್ರಕ್ರಿಯೆಯನ್ನು ನೋಡಲು ಮುಕ್ತ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಎಣಿಕೆ ಟೇಬಲ್‍ಗಳಿಗೆ ನೀಡಲಾಗುವ ಕಂಟ್ರೋಲ್ ಯುನಿಟ್ ಜೊತೆಗೆ ಮತ ಕೇಂದ್ರಕ್ಕೆ ಸಂಬಂಧಿಸಿದಂತೆ ನಮೂನೆ-17ಸಿ ರಲ್ಲಿ ದಾಖಲಾದ ಮತಗಳಿಗೆ ಸಂಬಂಧಿಸಿದ ಲೆಕ್ಕವನ್ನು ಎಣಿಕೆ ಟೇಬಲ್‍ಗಳಿಗೆ ನೀಡಿ, 17ಸಿ ಪಾರ್ಟ್-2 ರಲ್ಲಿ ಮತದಾನವಾದ ಮತಗಳ ವಿವರವನ್ನು ದಾಖಲಿಸಲಾಗುತ್ತದೆ. ಅಂಚೆ ಮತಪತ್ರಗಳ ಎಣಿಕೆಯು ಪ್ರಾರಂಭವಾದ 30 ನಿಮಿಷಗಳ ನಂತರ, ಇವಿಎಂ ಮತ ಎಣಿಕೆಯನ್ನು ಪ್ರಾರಂಭಿಸಲಾಗುತ್ತದೆ’ ಎಂದರು.

‘ಮತ ಎಣಿಕೆಯ ಏಜೆಂಟರು ತಮ್ಮ ನೇಮಕಾತಿ ಪತ್ರದ ಜೊತೆಗೆ (ನಮೂನೆ-18) ತಮ್ಮ ಗುರುತಿನ ಚೀಟಿಯನ್ನು ಮತಗಳ ಎಣಿಕೆ ಆರಂಭವಾಗುವುದಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಏಜೆಂಟರು ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಐಫೋನ್, ಲ್ಯಾಪ್ ಟಾಪ್ ಅಥವಾ ಅಥವಾ ವಿಡಿಯೊ ಚಿತ್ರೀಕರಿಸುವ ವಿದ್ಯುನ್ಮಾನ ಸಾಧನಗಳನ್ನು ತರುವುದನ್ನು ನಿಷೇಧಿಸಲಾಗಿದೆ’ ಎಂದರು.

‘ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ಸಲುವಾಗಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್‌ಗಳು, ಯುಪಿಎಸ್, ಟೆಲಿಫೋನ್, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಣಿಕೆ ಕಾರ್ಯವನ್ನು ಶಾಂತಿ ಮತ್ತು ಸುವ್ಯವಸ್ಥೆ ಮತ್ತು ಸುರಕ್ಷಿತವಾಗಿ ನಡೆಸಲು ಅಗತ್ಯ ಬ್ಯಾರಿಕೇಡಿಂಗ್, ಸಿಗ್ನಲ್‌ ಮತ್ತು ವಾಹನ ನಿಲುಗಡೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಭಾಗವಹಿಸಿದ್ದರು. 

ಭೇಟಿ: ಸುದ್ದಿಗೋಷ್ಠಿಯ ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಎಸ್‌ಪಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. 

ಬಿಗಿ ಭದ್ರತೆ

ಎಸ್‌ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ ‘ಮತ ಎಣಿಕೆ ಸಂದರ್ಭದಲ್ಲೂ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಕೆ.ಎಸ್.ಆರ್.ಪಿ ಹಾಗೂ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. 80 ಮಂದಿ ಅಧಿಕಾರಿಗಳು 300 ಸಿಬ್ಬಂದಿ ಹಾಗೂ 350 ಮಂದಿ ಗೃಹರಕ್ಷಕ ದಳ ಸಿಬ್ಬಂದಿ ನೀಯೋಜಿಸಲಾಗಿದೆ. ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ’ ಎಂದರು.

5 ಮತಗಟ್ಟೆಗಳ ವಿವಿಪ್ಯಾಟ್‌ ರಸೀದಿ ಎಣಿಕೆ

‘ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರ‍್ಯಾಂಡಮ್‌ ಆಗಿ ಆಯ್ಕೆ ಮಾಡಿದ 5 ಮತಗಟ್ಟೆಗಳ ವಿವಿಪ್ಯಾಟ್ ರಸೀದಿಗಳನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆ ಕಾರ್ಯ ನಡೆಸಲಾಗುವ ಎಲ್ಲ 8 ವಿಧಾನಸಭಾ ಕ್ಷೇತ್ರಗಳ ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಕಾರ್ಯ ನಡೆಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT