ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ

Last Updated 15 ಏಪ್ರಿಲ್ 2021, 12:31 IST
ಅಕ್ಷರ ಗಾತ್ರ

ಚಾಮರಾಜನಗರ: 'ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾನೂನು ಬಾಹಿರವಾಗಿ ಚುನಾವಣೆ ನಡೆಯುತ್ತಿದೆ. ಪ್ರತಿ ಬಾರಿಯೂ ಆಡಳಿತ ಮಂಡಳಿಯ ಅಧಿಕಾರ‌ ಮುಕ್ತಾಯಗೊಂಡ‌ ನಂತರ ಚುನಾವಣೆ ನಡೆಯುವವರೆಗೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುತ್ತದೆ. ಈ ಬಾರಿ ಈ ಪ್ರಕ್ರಿಯೆ ನಡೆದಿಲ್ಲ' ಎಂದು ನಾಗನವ ಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ ಹೊಮ್ಮ ಮಂಜುನಾಥ್ ಅವರು ಗುರುವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರ ಮುಂದಾಗಿದ್ದರೂ, ಹಾಲಿ ಅಧ್ಯಕ್ಷ ಮನು ಮಳಿಗಾರ್ ಅವರು ತಮ್ಮ ಪ್ರಭಾವ ಬಳಸಿ ಆಡಳಿತಾಧಿಕಾರಿ ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕ ಮಾಡುವಂತೆ ಮಾಡಿದ್ದಾರೆ. ಸರ್ಕಾರ ತಕ್ಷಣವೇ ಆಡಳಿತಾಧಿಕಾರಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ಅಧಿಕಾರಿಗಳಿಗೆ ಮತ ಬೇಡ: ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ನಿವೃತ್ತಿಯ ಬಳಿಕ ಕಸಾಪವನ್ನು ತಮ್ಮ ಪುನರ್ವಸತಿ ಕೇಂದ್ರವನ್ನಾಗಿ ಮಾಡಿದ್ದಾರೆ. ಸಾಹಿತ್ಯ ಪರಿಷತ್ತು ಗುಂಪುಗಾರಿಕೆ ಮತ್ತು ರಾಜಕೀಯದಿಂದ ತತ್ತರಿಸಿದೆ. ಈ ಬಾರಿಯ ಚುನಾವಣೆಯು ರಾಜಕೀಯ ಚುನಾವಣೆಗಳಿಗಿಂತ ಕೀಳಾಗಿದೆ. ಅಭ್ಯರ್ಥಿಗಳು ದುಡ್ಡು, ಹೆಂಡದ ಹೊಳೆಯನ್ನೇ ಹರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮತದಾರರು ಯಾವುದೇ ಕಾರಣಕ್ಕೂ‌ ನಿವೃತ್ತ ಅಧಿಕಾರಿಗಳಿಗೆ ಮತ ಹಾಕಬಾರದು ಕನ್ನಡದ ಕೆಲಸ ಯಾರು ಮಾಡುತ್ತಾರೋ ಅವರನ್ನು ಗೆಲ್ಲಿಸಬೇಕು’ ಎಂದು ಅವರು‌ ಮನವಿ ಮಾಡಿದರು.

‌‘ಕಸಾಪ ಸದಸ್ಯತ್ವ ಶುಲ್ಕ 260 ರೂ ಇತ್ತು. ಅದನ್ನು ₹1000 ಏರಿಕೆ ಮಾಡಲಾಗಿದೆ. ಆಡಳಿತ ಮಂಡಳಿಯ ಏಕ ಪಕ್ಷೀಯ ನಿರ್ಧಾರದಿಂದಾಗಿ ಸದಸ್ಯತ್ವ ಪಡೆಯಲು ಇಚ್ಛಿಸುವ ಬಡ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆಯಾಗಿದೆ. ಸದಸ್ಯತ್ವ ನೋಂದಣಿ ಶುಲ್ಕವನ್ನು ಮತ್ತೆ ₹260ಗೆ ಇಳಿಸಬೇಕು’ ಎಂದು ಒತ್ತಾಯಿಸಿದರು.

ವಿನಯ್‌ ವಿರುದ್ಧ ವಾಗ್ದಾಳಿ; ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯ

ಜಿಲ್ಲೆ ಹಾಗೂ ತಮಿಳುನಾಡಿನ ತಾಳವಾಡಿಯಲ್ಲಿ ಪ‍ರಿಷತ್ತಿನ ಸದಸ್ಯತ್ವ ನೋಂದಣಿ ಮಾಡಿದ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡ ಜಿಲ್ಲಾ ಕಸಾಪ ಹಾಲಿ ಅಧ್ಯಕ್ಷ ಬಿ.ಎಸ್.ವಿನಯ್ ವಿರುದ್ಧ ಹೊಮ್ಮ ಮಂಜುನಾಥ್ ಅವರು ವಾಗ್ದಾಳಿ ನಡೆಸಿದರು.

‘ವಿನಯ್‌ ಅಕ್ಷರ ಬಾರದಿರುವ ದಡ್ಡರಲ್ಲ; ವಿದ್ಯಾವಂತರು. ‌ಅವರಿಗೆ ಪರಿಷತ್ತಿನ ಬೈಲಾ ತಿಳಿದಿಲ್ಲವೇ?ಬೋಧಕ ಹುದ್ದೆಯಲ್ಲಿದ್ದುಕೊಂಡು ಅಧಿಕಾರದ ಆಸೆಗಾಗಿ ಎರಡು‌ ಕಡೆ ಸದಸ್ಯತ್ವ ಹೊಂದಿರುವುದು ಅಕ್ಷಮ್ಯ ಅಪರಾಧ.ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅವರನ್ನು ಶಾಶ್ವತವಾಗಿ ಕಸಾಪದಿಂದ ದೂರವಿಡಬೇಕು. ಈ ಸಂಬಂಧ ಕೇಂದ್ರ ಸಮಿತಿಗೆ ಬರೆಯುತ್ತೇನೆ’ ಎಂದು ಹೇಳಿದರು.

ನಾಗನವ ಕಲಾ ವೇದಿಕೆ ಟ್ರಸ್ಟ್‌ನ ವ್ಯಾಸರಾಜ, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT