ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಪರಿಸರವಾದಿಗಳಿಂದ ಭೂ ಕಬಳಿಕೆದಾರರೇ, ಬಿಳಿಗಿರಿರಂಗನಬೆಟ್ಟ ಬಿಟ್ಟು ತೊಲಗಿ ಅಭಿಯಾನ

ಚಾಮರಾಜನಗರ: ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗರಿಗೆ ಹಾಗೂ ದೇವಸ್ಥಾನದ ಸಿಬ್ಬಂದಿಗೆ ಮಂಜೂರು ಮಾಡಲಾಗಿರುವ 425 ಎಕರೆ ಜಾಗ ಬಿಟ್ಟು, ಬೇರೆಯವರು ಕಬಳಿಕೆ ಮಾಡಿಕೊಂಡಿರುವ 750 ಎಕರೆ ಜಾಗವನ್ನು ಕಂದಾಯ ಇಲಾಖೆ ವಶಪಡಿಸಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಪರಿಸರವಾದಿ, ಪುಣಜನೂರು ಪರಿಸರ ಅಭಿವೃದ್ಧಿ ಸಮಿತಿಯ ಡಿ.ಎಸ್‌.ದೊರೆಸ್ವಾಮಿ ಅವರು ಸೋಮವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಉಪ ಲೋಕಾಯುಕ್ತರಾಗಿದ್ದ ಸುಭಾಷ್‌ ಬಿ. ಅಡಿ ಅವರು 2018ರಲ್ಲಿ ಬೆಟ್ಟದಲ್ಲಿನ ಭೂ ಕಬಳಿಕೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಮಂಜೂರು ಮಾಡಿರುವುದಕ್ಕಿಂತಲೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಜಂಟಿ ಸರ್ವೆ ನಡೆಸಲು ಜಿಲ್ಲಾಡಳಿತವು ಸಿಬ್ಬಂದಿ ಕೊರತೆ ಇದೆ ಎಂದು ಸಬೂಬು ಹೇಳುತ್ತ ಮುಂದೂಡುತ್ತಲೇ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಸಭೆ ನಡೆಸಿದ್ದು, ಜಂಟಿ ಸರ್ವೆಗೆ ಸೂಚಿಸಿದ್ದಾರೆ. ತಕ್ಷಣೇ ಈ ಕೆಲಸವನ್ನು ಮಾಡಬೇಕು. ಅಕ್ರಮವಾಗಿ ಭೂ ಕಬಳಿಕೆ ಮಾಡಿದವರನ್ನು ಒಕ್ಕಲೆಬ್ಬಿಸಿ, ಆ ಜಮೀನುಗಳನ್ನು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು’ ಎಂದು ಅವರು ಆಗ್ರಹಿಸಿದರು. 

‘ಈ ಬಗ್ಗೆ ಜಿಲ್ಲಾಡಳಿತವನ್ನು ಒತ್ತಾಯಿಸುವುದಕ್ಕಾಗಿ ಭೂ ಕಬಳಿಕೆದಾರರೇ, ಬಿಳಿಗಿರಿರಂಗನಬೆಟ್ಟ ಬಿಟ್ಟು ತೊಲಗಿ ಎಂಬ ಅಭಿಯಾನ ಆರಂಭಿಸಿದ್ದೇವೆ. ಒತ್ತುವರಿಯಾಗಿರುವ ಭೂಮಿಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ತಕ್ಷಣ ಆರಂಭವಾಗಿದಿದ್ದರೆ, ಈ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದರು. 

‘ಭೂಕಬಳಿಕೆ ಮಾಡಿದವರಲ್ಲಿ ಹಲವು ಪ್ರಭಾವಿಗಳಿದ್ದಾರೆ. ಈಗ ಮಾಡಿರುವ ಅಕ್ರಮವನ್ನು ಸಕ್ರಮ ಮಾಡಿಸಲು ಕೆಲವರು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಅರಣ್ಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳನ್ನು ಪ್ರಭಾವಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟು ಕಂದಾಯ ಇಲಾಖೆಯ ಅಧಿಕಾರಿಗಳು ತಪ್ಪೆಸಗಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೊರೆಸ್ವಾಮಿ ಅವರು ಆಗ್ರಹಿಸಿದರು. 

ಪಿಯುಸಿಎಲ್ ಕಾರ್ಯದರ್ಶಿ ಮಹದೇವಯ್ಯ, ಸದಸ್ಯ ರಂಗಸ್ವಾಮಿನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.