ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಮಾಜ ಸ್ಥಾಪನೆಯೇ ವಿಕಸಿತ ಭಾರತ:ದೇವನೂರ ಮಹಾದೇವ

Published 24 ಏಪ್ರಿಲ್ 2024, 16:16 IST
Last Updated 24 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಚಾಮರಾಜನಗರ: ‘2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡಲು 24X7 ಕೆಲಸಮಾಡುತ್ತಿರುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ಹಿಂದೂ ಸಮಾಜ ನಿರ್ಮಾಣ ಮಾಡುವುದೇ ಅವರ ವಿಕಸಿತ ಭಾರತ. ಇದು ಪ್ರಧಾನಿ ಮೋದಿ ಮತ್ತು ಅವರ ಗುರು ಗೋಳ್ವಾಲ್ಕರ್‌ ಅವರ ಕನಸು’ ಎಂದು ಸಾಹಿತಿ ದೇವನೂರ ಮಹಾದೇವ ಬುಧವಾರ ಹೇಳಿದರು. 

ನಗರದಲ್ಲಿ ರೈತ ಸಂಘದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾತುರ್ವರ್ಣ ಸಮಾಜವನ್ನು ಸ್ಥಾಪಿಸುವುದೇ ದೇವರ ಸಾಕ್ಷಾತ್ಕಾರ ಎಂಬುದು ಅವರ ನಿಲುವು. ಇಂತಹ ಸನ್ನಿವೇಶದಲ್ಲಿ ಈ ದೇಶವನ್ನು ಏನು ಮಾಡಬೇಕು? ಲಿಂಗಾಯತರು ಒಕ್ಕಲಿಗರು, ಬಹುಸಂಖ್ಯಾತ ಶೂದ್ರರು, ದಲಿತರ ಪರಿಸ್ಥಿತಿ ಏನಾಗಬಹುದು? ಇಂತಹ ವ್ಯವಸ್ಥೆ ನಮಗೆ ಬೇಕೇ? ಈ ಸಮುದಾಯದವರೆಲ್ಲ ಇದನ್ನು ಪ್ರಶ್ನೆ ಮಾಡಬೇಕು’ ಎಂದು ಹೇಳಿದರು. 

‘ಬಿಜೆಪಿಯವರು ಸಂವಿಧಾನವನ್ನು ಮುಗಿಸುವುದಕ್ಕೆ ನೋಡುತ್ತಾ ಇದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆಯೇ ಇಲ್ಲವೇ ಎಂಬಂತಹ ಪರಿಸ್ಥಿತಿ ಇದೆ. ಆರ್‌ಎಸ್‌ಎಸ್‌, ಬಿಜೆಪಿಯ ಸೇವಕರು ಆಗಬಾರದು ಎಂದಿದ್ದರೆ ಲಿಂಗಾಯತರು, ಒಕ್ಕಲಿಗರು ಸೇರಿದಂತೆ ತಳಸಮುದಾಯದವರು, ದಲಿತರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ಅವರು ಹೇಳಿದರು. 

ಬಿಜೆಪಿಯೇ ಜೈಲು: ‘ಭ್ರಷ್ಟರನ್ನು ಜೈಲಿಗೆ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಭ್ರಷ್ಟರಿಂದ ದುಡ್ಡು ವಸೂಲು ಮಾಡಿದ್ದಲ್ಲದೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹಾಗಿದ್ದರೆ, ಬಿಜೆಪಿಯೇ ಜೈಲು ಆದಂತಾಯಿತು’ ಎಂದು ವ್ಯಂಗ್ಯವಾಡಿದರು. 

‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತದೆ ಎಂದು ಮೋದಿಯವರು 10 ವರ್ಷಗಳಿಂದ ಹೇಳುತ್ತಲೇ ಇದೆ. ಆದರೆ, ಅದನ್ನು ಮಾಡಿಲ್ಲ. ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಬಣ್ಣ ಬಣ್ಣದ ಗೋಸುಂಬೆ ಮಾತುಗಳನ್ನು ಹೇಳುತ್ತಿದೆ. ಆದರೆ, ಕಾಂಗ್ರೆಸ್‌ ಕನಿಷ್ಠ ಬೆಂಬಲ ಬೆಲೆ ನೀಡುವುದರ ಜೊತೆಗೆ ಅದನ್ನು ಖಾತ್ರಿಪಡಿಸಲು ಕಾನೂನು ಕೂಡ ಜಾರಿಗೆ ತರುವುದಾಗಿ ಎಂದು ಹೇಳಿದೆ. ಒಂದು ವೇಳೆ ಅವರು ಅನುಷ್ಠಾನಗೊಳಿಸದಿದ್ದರೆ ಅವರ ಕತ್ತು ಪಟ್ಟಿ ಹಿಡಿದು ಪ್ರಶ್ನಿಸುತ್ತೇವೆ’ ಎಂದು ಮಹಾದೇವ ಹೇಳಿದರು. 

ರೈತ ಸಂಘದವರು ತಾಲ್ಲೂಕಿನ ನಂಜೇದೇವನಪುರದಲ್ಲಿ ಬಿಜೆಪಿಗೆ ಮತ ಹಾಕದಂತೆ ಮನವಿ ಮಾಡಿದ ಸಂದರ್ಭದಲ್ಲಿ ನಡೆದ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು ಅವರನ್ನು ನಿಂದಿಸಿರುವುದಕ್ಕೆ ಅವರು ಆಕ್ಷೇಪವನ್ನೂ ವ್ಯಕ್ತಪಡಿಸಿದರು. 

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಸಂಘವು ಹಮ್ಮಿಕೊಂಡಿರುವ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ ಎಂಬ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ ಒಂಬತ್ತು ಕ್ಷೇತ್ರಗಳಲ್ಲಿ ಅಭಿಯಾನ ನಡೆಸಿದ್ದೇವೆ. ಜನರಿಗೆ ನಮ್ಮ ಹೋರಾಟದ ಬಗ್ಗೆ ಮನವರಿಕೆಯಾಗಿದೆ’ ಎಂದರು. 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು, ಜಿಲ್ಲಾ ಅಧ್ಯಕ್ಷ ಶಾಂತಮಲ್ಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮಾದಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್‌, ಶೈಲೇಂದ್ರ, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನಗೌಡ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT