ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವನಾರಾಯಣಗೆ ಕಾರ್ಯಾಧ್ಯಕ್ಷ ಪಟ್ಟ: ‘ನಿಷ್ಠ’ನಿಗೆ ಪಕ್ಷ ಸಂಘಟನೆಯ ಹೊಣೆ

Last Updated 21 ಜನವರಿ 2021, 15:44 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಂಸದರಾಗಿ ಜನರೊಂದಿಗೆ ಹೆಚ್ಚು ಒಡನಾಡಿ ‘ಜನನಾಯಕ’ರಾಗಿ ರೂಪುಗೊಂಡಿರುವ ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ಪಕ್ಷ ನಿಷ್ಠೆಗೆ ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸ್ಥಾನ ಒಲಿದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ (2019) ಅನಿರೀಕ್ಷಿತವಾಗಿ ಅನುಭವಿಸಿದ ಸೋಲಿನಿಂದ ಕಂಗೆಡದೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದ ಧ್ರುವನಾರಾಯಣ ಅವರಿಗೆ ಕಾರ್ಯಾಧ್ಯಕ್ಷ ಪಟ್ಟ ನೀಡುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವ ಮಹತ್ತರ ಜವಾಬ್ದಾರಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ವಹಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಮೋದಿ ಅಲೆಯ ನಡುವೆಯೇ 1.41 ಲಕ್ಷ ಮತಗಳ ಭಾರಿ ಅಂತರದಿಂದ ಗೆದ್ದು ಎರಡನೇ ಬಾರಿ ಸಂಸತ್‌ ಪ್ರವೇಶಿಸುವ ಮೂಲಕ, ಕಾಂಗ್ರೆಸ್‌ನಲ್ಲಿ ಮೈಸೂರು ಭಾಗದ ಪ್ರಭಾವಿ ನಾಯಕರಾಗಿ ಧ್ರುವನಾರಾಯಣ ಹೊರಹೊಮ್ಮಿದ್ದರು. ಪರಿಶಿಷ್ಟ ಜಾತಿಯ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿರುವ ಅವರು, ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ತಂದ ಅನುದಾನ, ಮಾಡಿದ ಅಭಿವೃದ್ಧಿ ಕೆಲಸಗಳಿಂದಲೂ ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಕೆಪಿಸಿಸಿಯು ಅವರನ್ನು ಪಕ್ಷದ ಕಾರ್ಯಕ್ಕೆ ಬಳಸಿಕೊಂಡಿತ್ತು. ರಾಜ್ಯ ವಕ್ತಾರರ ಹೊಣೆಯನ್ನು ನೀಡಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಇರುವಾಗ ದೊಡ್ಡ ಜವಾಬ್ದಾರಿಯನ್ನು ನೀಡಿದೆ.

ಪಕ್ಷದ ಕಟ್ಟಾಳು: ರಾಜಕೀಯ ಪ್ರವೇಶದ ಕಾಲದಿಂದಲೂ ಕಾಂಗ್ರೆಸ್‌ನೊಂದಿಗೇ ಗುರುತಿಸಿಕೊಂಡಿದ್ದ ಧ್ರುವನಾರಾಯಣ ಅವರು, 1998ರಲ್ಲಿ ತಮ್ಮ ರಾಜಕೀಯ ಗುರು ರಾಜಶೇಖರ ಮೂರ್ತಿ ಅವರೊಂದಿಗೆ ಬಿಜೆಪಿ ಸೇರಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಕಾಂಗ್ರೆಸ್‌ಗೆ ವಾಪಸ್‌ ಬಂದಿದ್ದ ಅವರು ಎರಡು ಬಾರಿ ಶಾಸಕರಾಗಿ, ಮತ್ತೆರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

1983ಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು, ಬೆಂಗಳೂರು ಕೃಷಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐನ ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ 1984ರಲ್ಲಿ ಆಯ್ಕೆಯಾಗಿದ್ದರು. 1986ರಲ್ಲಿ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ಯುವ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡಿದ್ದರು.

ಬಿಜೆಪಿ ಸೇರಿದ್ದು ತಮ್ಮ ರಾಜಕೀಯ ಜೀವನದಲ್ಲಿ ಕೈಗೊಂಡ ತಪ್ಪು ನಿರ್ಧಾರ ಎಂದು ಹೇಳಿಕೊಳ್ಳುತ್ತಾ ಬಂದಿರುವ ಧ್ರುವನಾರಾಯಣ ಅವರು ಕಾಂಗ್ರೆಸ್‌ ಪಕ್ಷದ ಕಟ್ಟಾಳು. ಅವರ ಪ‍ಕ್ಷ ನಿಷ್ಠೆ ಹಾಗೂ ಜನಪ್ರತಿನಿಧಿಯಾಗಿ ಮಾಡಿರುವ ಕೆಲಸವನ್ನು ಗಮನಿಸಿರುವ ವರಿಷ್ಠರು ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಿದ್ದಾರೆ ಎಂದು ಹೇಳುತ್ತಾರೆ ಸ್ಥಳೀಯ ಮುಖಂಡರು.

ಕೊಂಚ ತಡ:ಮೈಸೂರು ಭಾಗದವರಿಗೆ ಕಾಂಗ್ರೆಸ್‌ನಲ್ಲಿ ಕಾರ್ಯಾಧ್ಯಕ್ಷ ಹುದ್ದೆ ನೀಡುತ್ತಿರುವುದು ಇದೇ ಮೊದಲು.ಈ ಹಿಂದೆ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಾಗಲೇ ಮೈಸೂರು ವಿಭಾಗಕ್ಕೆ ಧ್ರುವನಾರಾಯಣ ಅವರನ್ನು ನೇಮಕ ಮಾಡುವ ನಿರ್ಧಾರ ಆಗಿತ್ತು. ಆದರೆ, ಸ್ವಲ್ಪ ವಿಳಂಬವಾಗಿ ಹೈಕಮಾಂಡ್‌ ನೇಮಕ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿದೆ ದೊಡ್ಡ ಸವಾಲು

ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದು ಗುರುತಿಸಿಕೊಂಡಿದ್ದ ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಶಕ್ತಿ ದಿನೇ ದಿನೇ ಕುಂದುತ್ತಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಕಳೆದ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ತಿ.ನರಸೀಪುರ, ಗುಂಡ್ಲುಪೇಟೆ, ಕೊಳ್ಳೇಗಾಲ, ನಂಜನಗೂಡು ಸೇರಿದಂತೆ ಸೇರಿದಂತೆ ಹಲವು ಕ್ಷೇತ್ರಗಳು ಪಕ್ಷದ ಕೈಜಾರಿದೆ. ನಗರ ಸ್ಥಳೀಯ ಚುನಾವಣೆಗಳಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದೆ.

ಇದೆಲ್ಲವನ್ನೂ ಮೆಟ್ಟಿನಿಂತು, ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತೆ ಸಂಘಟಿಸುವ ಬಹುದೊಡ್ಡ ಸವಾಲು ಧ್ರುವನಾರಾಯಣ ಅವರ ಮುಂದಿದೆ.

ಸರ್ಕಾರದ ವೈಫಲ್ಯ ಜನರಿಗೆ ತಲುಪಿಸುವೆ: ಧ್ರುವ

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಧ್ರುವನಾರಾಯಣ ಅವರು, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು ಮೊದಲ ಗುರಿ. ಈಗಾಗಲೇ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ದೆಹಲಿಯ ರೈತರ ಹೋರಾಟ ಬೆಂಬಲಿಸಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಬೃಹತ್‌ ಪ್ರತಿಭಟನೆ ಮಾಡಿದ್ದೇವೆ. ಎರಡೂ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲೂ ಇಂತಹ ಹೋರಾಟ ಸಂಘಟಿಸಲಾಗುವುದು’ ಎಂದು ಹೇಳಿದರು.

‘ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು ಎರಡನೆಯ ಗುರಿ. ಕೇಡರ್‌ ಆಧರಿತವಾಗಿ ಪಕ್ಷವನ್ನು ಸಂಘಟಿಸುವ ತೀರ್ಮಾನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಾಡಿದ್ದಾರೆ. ಬೂತ್‌ ಮಟ್ಟದಿಂದಲೇ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಯೋಜನೆ ಹಾಕಿಕೊಂಡಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT