ಶನಿವಾರ, ಮೇ 28, 2022
25 °C
ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ‌ಸೋಮಣ್ಣ ಮೊದಲ ಸಭೆ

ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯಕ್ಕೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರದಲ್ಲೇ ವಾಸ್ತವ್ಯ ಹೂಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬುಧವಾರ ಇಲ್ಲಿ ತಾಕೀತು ಮಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಕೋವಿಡ್‌ ನಿಯಂತ್ರಣ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು. 

‘ಜಿಲ್ಲೆಯಲ್ಲಿ ಈ ಹಿಂದೆಯೂ ನಾನು ಉಸ್ತುವಾರಿ ಸಚಿವನಾಗಿದ್ದೆ. ಇಲ್ಲಿನ ಅಧಿಕಾರಿಗಳಲ್ಲಿ ಬಹುತೇಕರು ಮೈಸೂರಿನಲ್ಲಿ ವಾಸವಿದ್ದಾರೆ ಎಂಬುದು ಗೊತ್ತಿದೆ. ಇಲ್ಲಿನ ಸರ್ಕಾರಿ ವಸತಿ ಗೃಹಗಳನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಇದೆಲ್ಲವೂ ಇನ್ನು ನಿಲ್ಲಬೇಕು. ಮುಂದಿನ 4 ಮತ್ತು 5ರಂದು ಜಿಲ್ಲೆಗೆ ಮತ್ತೆ ಬಂದು ಸಭೆ ನಡೆಸುತ್ತೇನೆ. ಅಷ್ಟರೊಳಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಇಲ್ಲಿಯೇ ವಾಸ್ತವ್ಯ ಹೂಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಗಳ ದುರಸ್ತಿ ಅಥವಾ ಬೇರೆ ವಿಷಯಗಳಿದ್ದರೆ ಗಮನಕ್ಕೆ ತನ್ನಿ ಸರಿಪಡಿಸೋಣ’ ಎಂದರು.

ಪ್ರತಿ ಇಲಾಖೆಗಳ ಮುಖ್ಯಸ್ಥರ ಪರಿಚಯ ಮಾಡಿಕೊಂಡ ಸಚಿವರು, ‘ಎಲ್ಲಿ ವಾಸ ಇದ್ದೀರಿ?’ ಎಂದು ಪ್ರತಿಯೊಬ್ಬರನ್ನೂ ಕೇಳಿದರು. ಕೆಲವು ಅಧಿಕಾರಿಗಳು, ಇಲ್ಲೇ ವಾಸವಿರುವುದಾಗಿ ಹೇಳಿದರೆ, ಇನ್ನೂ ಕೆಲವರು ‘ಮೈಸೂರಿನಲ್ಲಿ ಇದ್ದೇವೆ’ ಎಂದು ಹೇಳಿದರು. 

‘ಇಲ್ಲಿನ ಅಧಿಕಾರಿಯಾಗಿದ್ದುಕೊಂಡು ಮೈಸೂರಿನಲ್ಲಿ ವಾಸ ಇರುವುದಕ್ಕೆ ಅವಕಾಶ ಇಲ್ಲ. ಕಡ್ಡಾಯವಾಗಿ ಇಲ್ಲೇ ವಾಸವಿರಬೇಕು. ಈ ಬಗ್ಗೆ ಗಮನ ಹರಿಸಿ, ಎಲ್ಲರೂ ಇಲ್ಲಿಯೇ ವಾಸ್ತವ್ಯ ಹೂಡುವಂತೆ ನೋಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಸೂಚಿಸಿದರು.

ಅಭಿವೃದ್ಧಿಗೆ ಕ್ರಮ ವಹಿಸಿ: ‘ಫೆ.4, 5ರಂದು ನಾನು ಜಿಲ್ಲೆಯಲ್ಲಿರುತ್ತೇನೆ. ಎಲ್ಲರೂ ಕೂಡಿ ಚರ್ಚೆ ಮಾಡೋಣ. ಅಭಿವೃದ್ಧಿ ಮಾಡಬೇಕಾದ ಆದ್ಯತಾ ವಲಯಗಳನ್ನು ಗುರುತಿಸೋಣ’ ಎಂದು ಸೋಮಣ್ಣ ಹೇಳಿದರು.

‘ಇನ್ನು ಒಂದು ವರ್ಷ ನಾನು ರಾಜಕೀಯ ಮಾತನಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಗಮನ ನೀಡುತ್ತೇನೆ. ಅಧಿಕಾರಿಗಳು ಸರ್ಕಾರದ ಯೋಜನೆಗಳು ಹಾಗೂ ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕು. ರಸ್ತೆಗಳೆಲ್ಲ ದುರಸ್ತಿಯಾಗಬೇಕು. ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ಜನರಿಗೆ ಮೂಲಸೌಕರ್ಯ ಒದಗಿಸಲು ಕ್ರಮವಹಿಸಬೇಕು. ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಶ್ರಮ ವಹಿಸಬೇಕು’ ಎಂದು ಸೂಚಿಸಿದರು. 

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲೇ ಅಧಿಕಾರಿಗಳು ಇರಬೇಕು ಎಂದು ಸುತ್ತೋಲೆ ಹೊರಡಿಸಲಾಗುವುದು. ನೀವು ನೀಡಿದ ಸಲಹೆಗಳನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದರು. 

ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಇದಕ್ಕೂ ಮೊದಲು ಜಿಲ್ಲೆಯಲ್ಲಿನ ಕೋವಿಡ್‌ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ‘ಕೋವಿಡ್ ಮೂರನೇ ಅಲೆಯ ಆತಂಕ ಇನ್ನೂ ದೂರವಾಗಿಲ್ಲ. ಕೋವಿಡ್ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ಸೌಲಭ್ಯಗಳಿಗೆ ಕೊರತೆಯಾಗಬಾರದು. ಆಂಬುಲೆನ್ಸ್, ಆಮ್ಲಜನಕ ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ನಿಲ್ಲಬಾರದು’ ಎಂದು ಸೂಚಿಸಿದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಜಿಲ್ಲೆಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣ ವರದಿಯಾಗುತ್ತಿವೆ ಎಂದು ಜನರನ್ನು ಹೆದರಿಸುವ ಕೆಲಸ ಆಗಬಾರದು. ಮೂರನೇ ಅಲೆ ಅಷ್ಟೊಂದು ತೀವ್ರವಾಗಿಲ್ಲ. ಯಾವುದೇ ಕಾರಣಕ್ಕೂ ಶಾಲೆ ಮುಚ್ಚಬಾರದು. ಶಾಲೆ ಸ್ಥಗಿತಗೊಂಡರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ’ ಎಂದರು. 

ಶಾಸಕ ಎನ್.ಮಹೇಶ್ ಮಾತನಾಡಿ, ‘ಮೂರನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಉನ್ನತ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಕಾಳಜಿ ತೋರುತ್ತಿದ್ದಾರೆ. ಎರಡನೇ ಅಲೆಯ ಸಂದರ್ಭದಲ್ಲಿ ಶಾಸಕರ ಅನುದಾನದಿಂದ ಆಂಬುಲೆನ್ಸ್‌ ಸೇರಿದಂತೆ ಇತರೆ ಸಲಕರಣೆಗಳಿಗಾಗಿ ₹ 50 ಲಕ್ಷ ನೀಡಲಾಗಿತ್ತು. ಒಂದು ವರ್ಷ ಆಗುತ್ತಾ ಬಂದರೂ ಆಂಬುಲೆನ್ಸ್‌ ಬಂದಿಲ್ಲ. ಇದಕ್ಕೆ ಕಾರಣ ಏನು? ನನ್ನ ಕ್ಷೇತ್ರದ ಮೂರು ಕಡೆ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಅವುಗಳಿಗೆ ಜನರೇಟರ್‌ ವ್ಯವಸ್ಥೆ ಆಗಬೇಕು’ ಎಂದು ಹೇಳಿದರು.

‘ಆಂಬುಲೆನ್ಸ್‌ಗಳು ಇನ್ನು ವಾರದಲ್ಲಿ ಬರಲಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಉತ್ತರಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಸಿ.ಎಂ.‌ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಇದ್ದರು.

--

ಹಳೆ ಕಲ್ಲು, ಹೊಸ ಬಿಲ್ಲು, ಜನರಿಂದ ದುಡ್ಡು ವಸೂಲಿ ಇಂತಹದ್ದನ್ನೆಲ್ಲ ಬಿಟ್ಟುಬಿಡಿ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ
ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು