ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮೀಣ ಮಕ್ಕಳಿಗೂ ಡಿಜಿಟಲ್‌ ಶಿಕ್ಷಣ ಅಗತ್ಯ:.ಡಿ.ಸಿ

50 ಶಾಲೆಗಳಿಗೆ ₹5.75 ಕೋಟಿ ವೆಚ್ಚದ ಸ್ಮಾರ್ಟ್ ಟಿ.ವಿ ಹಾಗೂ ಟ್ಯಾಬ್ ವಿತರಣೆ
Published 19 ಮಾರ್ಚ್ 2024, 2:57 IST
Last Updated 19 ಮಾರ್ಚ್ 2024, 2:57 IST
ಅಕ್ಷರ ಗಾತ್ರ

ಚಾಮರಾಜನಗರ: 'ಜಿಲ್ಲೆಯು ಸಮಗ್ರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಪಾತ್ರ ಬಹಳ ಮುಖ್ಯ. ನಗರದ ಪ್ರದೇಶದ ಮಕ್ಕಳಿಗೆ ಸೀಮಿತವಾಗಿರುವ ಡಿಟಿಟಲ್‌ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ವಿಸ್ತರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಸೋಮವಾರ ತಿಳಿಸಿದರು. 

ತಾಲೂಕಿನ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಇನ್ಫೋಸಿಸ್ ಹಾಗೂ ಪಂಚಶೀಲ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಜಿಲ್ಲೆಯ 50 ಸರ್ಕಾರಿ ಶಾಲೆಗಳಿಗೆ ಸಿಎಸ್‌ಆರ್ ನೆರವಿನಡಿ ಇನ್ಫೊಸಿಸ್, ಪಂಚಶೀಲ ರೋಟರಿ ಸಂಸ್ಥೆಗಳು ಕೊಡುಗೆಯಾಗಿ ನೀಡಿರುವ ₹5.75 ಕೋಟಿ ವೆಚ್ಚದ ಸ್ಮಾರ್ಟ್ ಟಿ.ವಿ ಹಾಗೂ ಟ್ಯಾಬ್ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳನ್ನು ಸ್ಪರ್ಧಾ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಡಿಜಿಟಲ್ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿಯೂ ನೀಡಲಾಗುತ್ತಿದೆ. ಪರೀಕ್ಷೆಗಳಲ್ಲಿ ಮಾತ್ರ ಶೇ 100ರಷ್ಟು ಫಲಿತಾಂಶ ಬರುವುದಲ್ಲದೇ, ಮಕ್ಕಳು ಕೌಶಲ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ಗುರಿ ಜಿಲ್ಲಾಡಳಿತ ಹೊಂದಿದೆ’ ಎಂದರು.  

ಪ್ರತಿಯೊಬ್ಬರು ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತೀ ಮುಖ್ಯವಾಗಿದೆ. ಜಿಲ್ಲೆಯ ಮಕ್ಕಳು ಬುದ್ದಿವಂತರಿದ್ದಾರೆ. ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಎಲ್ಲರೂ ಶಿಕ್ಷಿತರಾಗಬೇಕು. ಈ ನಿಟ್ಟಿನಲ್ಲಿ ಇನ್ಪೋಸಿಸ್‌ ಮತ್ತು ಪಂಚಶೀಲ ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗದ 50 ಸರ್ಕಾರಿ ಶಾಲೆಗಳಿಗೆ 50 ಸ್ಮಾರ್ಟ್ ಟಿವಿ ಹಾಗೂ 100 ಶಿಕ್ಷಕರಿಗೆ ಟ್ಯಾಬ್ ವಿತರಣೆ ಮಾಡಿ, ಡಿಜಿಟಲ್‌ ಶಿಕ್ಷಣದ ನೀಡಲು ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳನ್ನು ಡಿಜಿಟಲ್ ಶಿಕ್ಷಣಕ್ಕೆ ಪರಿಗಣಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು. 

ಇನ್ಫೋಸಿಸ್‌ನ ಕೆ.ಎಸ್.ಸುಂದರ್ ಮಾತನಾಡಿ, ‘ಸ್ಮಾರ್ಟ್ ಕ್ಲಾಸ್ ಕಲಿಕೆಗೆ ವಾರದಲ್ಲಿ ಒಂದು ದಿನವನ್ನು ಸಂಪೂರ್ಣವಾಗಿ ಮೀಸಲಿಡಬೇಕು. ಇದರ ಸದುಪಯೋಗವನ್ನು ಮಕ್ಕಳು ಸಂಪೂರ್ಣವಾಗಿ ಪಡೆದುಕೊಂಡು, ಸರ್ವತೋಮುಖ ಅಭಿವೃದ್ಧಿಗೆ ಹೋಗಬೇಕು. ಪಠ್ಯದ ಜೊತೆಗೆ ಈ ಸ್ಮಾರ್ಟ್ ಕ್ಲಾಸ್ ಕಲಿಕೆಯೂ ನಿರಂತರವಾಗಿ ಇರಬೇಕು. ಅಂದಾಜು ₹5.75 ಕೋಟಿ ಈ ಸ್ಮಾರ್ಟ್ ಟಿವಿ ಹಾಗೂ ಟ್ಯಾಬ್‌ಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದರು.

ಇದೇ ವೇಳೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಟಿವಿ ಹಾಗೂ ಟ್ಯಾಬ್‌ಗಳನ್ನು ವಿತರಣೆ ಮಾಡಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪಂಚಶೀಲ ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ರಾಜೇಂದ್ರ ಪ್ರಸಾದ್, ಆನಂದ್, ಇನ್ಫೋಸಿಸ್ ಸಂಸ್ಥೆಯ ಸತೀಶ್, ಬಿಳಿರಂಗ, ಆನಂದ್, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಸಿದ್ದರಾಜು, ಮುಖ್ಯಶಿಕ್ಷಕಿ ನಾಗರತ್ನಮ್ಮ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT