ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಬಂದವರ ಮೇಲೆ ನಿಗಾ

ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ ಆಶಾ ಕಾರ್ಯಕರ್ತೆಯರು
Last Updated 26 ಮಾರ್ಚ್ 2020, 15:27 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೊರೊನಾ ವೈರಸ್‌ ಸೋಂಕು ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತಯು ಈಗ ಗ್ರಾಮೀಣ ಭಾಗಗಳಿಗೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದಿರುವವರ ಮೇಲೆಯೂ ನೀಗಾ ಇಟ್ಟಿದೆ.

ಯುಗಾದಿ ಹಬ್ಬದ ಆಚರಣೆಗಾಗಿ ಜಿಲ್ಲೆಯಾದ್ಯಂತ ದೂರದ ಊರುಗಳಿಂದ ತಮ್ಮ ಊರಿಗೆ ಬಂದಿದ್ದು, ಅವರನ್ನು ಗುರುತಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ.

ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಬೇರೆ ಊರಿನಿಂದ ಬಂದವರ ಬಗ್ಗೆ ಹಾಗೂ ದೂರದ ಊರುಗಳ ಬಗ್ಗೆ ಹೋಗಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆರೋಗ್ಯದ ಮಾಹಿತಿ: ಆಶಾ ಕಾರ್ಯಕರ್ತೆಯರು ಭೇಟಿ ಮಾಡುತ್ತ ಸಾರ್ವಜನಿಕರಿಗೆ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.ಮನೆಯಿಂದ ಹೊರಗೆ ಬರಬೇಡಿ, ಯಾವುದೇ ವಸ್ತುಗಳನ್ನು ಮುಟ್ಟಿದರೆ ತಕ್ಷಣ ಸಾಬೂನಿನಿಂದ ಕೈ ಚೆನ್ನಾಗಿ ತೊಳೆಯಿರಿ, ಸ್ವಚ್ಛತೆಯನ್ನು ಪಾಲಿಸುವುದರಿಂದ ಕೊರೊನಾ ಸೋಂಕನ್ನು ತಡೆಬಹುದು ಎಂದು ಹೇಳುತ್ತಿದ್ದಾರೆ.

ನಾಲ್ಕು ಕಡೆ ಆರೋಗ್ಯ ಇಲಾಖೆ ತಪಾಸಣೆ: ತಾಲ್ಲೂಕಿನ ಗಡಿ ಭಾಗಗಳಾದ ಕೆಕ್ಕನಹಳ್ಳ, ಮದ್ದೂರು, ಹಿರಿಕಾಟಿ, ಕುರುಬರಹುಂಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಇಲ್ಲಿ ಸಂಚರಿಸುವವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

‘ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಜನರ ಸಹಕಾರ ಅತಿ ಮುಖ್ಯ. ಸರ್ಕಾರದ ಆದೇಶವನ್ನು ಪಾಲನೆ ಮಾಡಿದರೆ ಮಾತ್ರ ಶೀಘ್ರವಾಗಿ ಈ ಸೋಂಕಿನ ಭೀತಿಯಿಂದ ಹೊರಬರಲು ಸಾಧ್ಯ’ ಎಂದು ಆರೋಗ್ಯ ಇಲಾಖೆಯ ನಿರೀಕ್ಷಕ ಅಂಕಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಇಒ ಜಿಲ್ಲಾ ನೋಡೆಲ್‌ ಅಧಿಕಾರಿ

ಚಾಮರಾಜನಗರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮಗಳಿಗೆ ವಿದೇಶ, ಹೊರರಾಜ್ಯ, ಹೊರಜಿಲ್ಲೆಗಳಿಂದ ಬಂದಿರುವ ಹಾಗೂ ಬರುತ್ತಿರುವ ಮೇಲೆ ನಿಗಾ ವಹಿಸಿ, ಅವಶ್ಯಕತೆ ಇದ್ದಲ್ಲಿ ಆರೋಗ್ಯ ತಪಾಸಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಕಾರ್ಯಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ ಹರ್ಷಲ್‌ ನಾರಾಯಣರಾವ್‌ ಅವರನ್ನು ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

‘ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದೇಶ, ಹೊರರಾಜ್ಯ, ಹೊರಜಿಲ್ಲೆಗಳಿಂದ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಬಂದಿರುವ ಹಾಗೂ ಬರುತ್ತಿರುವವರ ಮೇಲೆ ತೀವ್ರ ನಿಗಾ ವಹಿಸಿ ಅವರ ವಿವರ ಪಡೆದು ಅವಶ್ಯಕತೆ ಇದ್ದಲ್ಲಿ ಆರೋಗ್ಯ ತಪಾಸಣೆ ಮಾಡಿಸುವ ಮತ್ತು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸುವ ಸಲುವಾಗಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳು (ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರ) ಹಾಗೂ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿಕೊಳ್ಳಬೇಕು. ಈ ತಂಡಗಳ ಕೆಲಸದ ಮೇಲ್ವಿಚಾರಣೆ ಮಾಡಿ ವರದಿ ಸಲ್ಲಿಸುವ ಸಲುವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಜಿಲ್ಲಾ ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT