ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಿಗಾಲದ ಕಾಲುವೆಗೆ ನೀರು ಹರಿಸಲು ಪ್ರತ್ಯೇಕ ಲೈನ್: ವಿ.ಸೋಮಣ್ಣ

ತಮ್ಮಡಹಳ್ಳಿ ಕೆರೆಗೆ ಸಚಿವ ಸೋಮಣ್ಣ ಭೇಟಿ, ರೈತರ ಕುಂದು ಕೊರತೆ ಸಭೆ
Last Updated 18 ನವೆಂಬರ್ 2022, 16:13 IST
ಅಕ್ಷರ ಗಾತ್ರ

ಚಾಮರಾಜನಗರ: ‘ಈಗ ರೂಪಿಸಿರುವ ಯೋಜನೆಯಂತೆತಾಲ್ಲೂಕಿನ ಆನೆ ಮಡುವಿನಕೆರೆಗೆ ತಮ್ಮಡಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮೂಲಕ ನೀರು ತುಂಬಿಸಲಾಗುವುದು. ಆದರೆ, ಉಡಿಗಾಲ ಭಾಗದ ರೈತರ ಬೇಡಿಕೆಯಂತೆ ಚಿಕ್ಕ ಮೋರಿ ಕಾಲುವೆಯಲ್ಲಿರುವ ಚೆಕ್‌ಡ್ಯಾಂಗಳಿಗೆ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಭರವಸೆ ನೀಡಿದರು.

ತಮ್ಮಡಹಳ್ಳಿ ಕೆರೆಗೆ ಭೇಟಿ ನೀಡಿ ಪಂಪ್‌ ಹೌಸ್‌ ವೀಕ್ಷಣೆ ಹಾಗೂ ಸ್ಥಳೀಯ ರೈತಮುಖಂಡರೊಂದಿಗೆ ಚರ್ಚಿಸಿದ ಬಳಿಕ ನಗರದಲ್ಲಿ ರೈತ ಮುಖಂಡರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ತಮ್ಮಡಹಳ್ಳಿ ಕೆರೆಯಿಂದ ಆನೆಮಡುವಿನಕೆರೆಗೆ ಪೈಪ್‌ಲೈನ್‌ ನಿರ್ಮಾಣ ಮಾಡುವುದಕ್ಕೂ ಮೊದಲೇ, ಚಿಕ್ಕ ಮೋರಿ ಕಾಲುವೆಯಲ್ಲಿರುವ ಎಂಟು ಚೆಕ್‌ಡ್ಯಾಂಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕಬ್ಬುಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ‘ಆನೆ ಮಡುವಿನ ಕೆರೆಗೆ ನೀರು ತುಂಬಿಸುವ ಕಾಮಗಾರಿಯು ಉಡಿಗಾಲ ಗ್ರಾಮದ ಅಚ್ಚುಕಟ್ಟು ಭಾಗದ ರೈತರ ಆಶಯದಂತೆ ಚಿಕ್ಕಮೋರಿ ಕಾಲುವೆ ಮೂಲಕವೇ ನಡೆಯಬೇಕು. ತಮ್ಮಡಹಳ್ಳಿ ಕೆರೆಯಿಂದ ನೀರು ಹರಿಸಲು ಪೈಪ್ ಲೈನ್ ಹಾಕಲು ಮುಂದಾದರೆ ರೈತರ ಶವದ ಮೇಲೆ ಪೈಪ್ ಲೈನ್ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಉಡಿಗಾಲದ ಕಾಮಗಾರಿಯನ್ನೇ ಮೊದಲು ಕೈಗತ್ತಿಕೊಳ್ಳಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದಾಗ ಮುಖಂಡರು ಅದನ್ನು ಸ್ವಾಗತಿಸಿದರು.

ಅರಣ್ಯ ಅಧಿಕಾರಿಗಳಿಗೆ ತರಾಟೆ: ಸಭೆಯಲ್ಲಿ ಮಾತನಾಡಿದ ಹಲವು ರೈತ ಮುಖಂಡರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮಹದೇಶ್ವರ ಬೆಟ್ಟದ ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿರುವ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಅಲ್ಲಿಗೆ ಸೌಲಭ್ಯ ಕಲ್ಪಿಸಲು ಅರಣ್ಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮಹದೇಶ್ವರ ಬೆಟ್ಟದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದಾಗ ಅಹವಾಲು ಆಲಿಸಲು ಸಂತೋಷ್‌ಕುಮಾರ್‌ ಬಂದಿಲ್ಲ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ಬೆಟ್ಟದ ವ್ಯಾಪ್ತಿಯ ಕುಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜ‌ನೆಗೆ ಸೇರ್ಪಡೆಗೊಳಿಸಬಾರದು’ ಎಂದು ಆಗ್ರಹಿಸಿದರು.

‘ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಲು ಬಿಡುವುದಿಲ್ಲ. ಘೋಷಣೆಯಾದರೆ ಜನರಿಗೆ ತೀವ್ರ ತೊಂದರೆಯಾಗುತ್ತದೆ’ ಎಂದು ಹೇಳಿದ ಅವರು ಸಂತೋಷ್‌ಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಅಡಚಣೆ ಮಾಡಬೇಡಿ. ಅರಣ್ಯ ಅಧಿಕಾರಿಯಾಗಿದ್ದುಕೊಂಡು ನಿಯಮಗಳನ್ನು ಪಾಲಿಸುವುದರ ಜೊತೆಗೆ ಜನರಿಗೆ ಅನುಕೂಲ ಕಲ್ಪಿಸಿಕೊಡಿ. ಇದು ನನ್ನ ನಿರ್ದೇಶನ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಡ್ಡಿಪಡಿಸುವುದಿಲ್ಲ ಎಂದಾದರೆ ಕೆಲಸ ಮಾಡಿ. ಇಲ್ಲ ರಜೆ ಮೇಲೆ ತೆರಳಿ’ ಎಂದು ಹೇಳಿದರು.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌ ವಿರುದ್ಧ ಆರೋಪಗಳನ್ನು ಮಾಡಿದಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ರೈತ ಮುಖಂಡ ಮಹದೇವಪ್ಪ, ‘ಹುಲಿ ಯೋಜನೆ ನಿರ್ದೇಶಕರು ₹25 ಲಕ್ಷ ವೆಚ್ಚಮಾಡಿ ತಮ್ಮ ಕಚೇರಿ ನವೀಕರಣ ಮಾಡಿದ್ದಾರೆ. ಟೆಂಡರ್‌ ಕರೆಯದೆ ಗಜೇಂದ್ರ ವಸತಿಗೃಹವನ್ನು ₹45 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ₹8 ಲಕ್ಷ ವೆಚ್ಚದಲ್ಲಿ 2000 ಜರ್ಕಿನ್‌ಗಳನ್ನು ಖರೀದಿಸಲಾಗಿದ್ದು, ಸಿಬ್ಬಂದಿಗೆ ಇದುವರೆಗೆ ಹಂಚಿಕೆ ಮಾಡಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆರೋಪಗಳು ನಿಜ ಇವೆ. ಇದಕ್ಕೆ ವಿವರಣೆ ನೀಡಬೇಕು ಎಂದು ರಮೇಶ್‌ಕುಮಾರ್‌ ಅವರಿಗೆ ಸೂಚಿಸಿದರು.

ಶಾಸಕ ಎನ್‌.ಮಹೇಶ್‌, ಕಾಡಾ ಅಧ್ಯಕ್ಷ ನಿಜಗುಣರಾಜು, ಕಾವೇರಿ ನೀರಾವಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್‌ಪಿ‌ ಟಿ.ಪಿ.ಶಿವಕುಮಾರ್‌, ಎಡಿಸಿ ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್‌.ಸುಂದರ್‌ರಾಜ್‌, ಬಿಆರ್‌ಟಿ ಡಿಸಿಎಫ್‌ ದೀಪ್‌ ಜೆ ಕಾಂಟ್ರ್ಯಾಕ್ಟರ್‌ ಇದ್ದರು.

ಗಣಿಗಾರಿಕೆ: ಚೆಕ್‌ಪೋಸ್ಟ್‌ಗೆ ಸ್ಥಾಪನೆಗೆ ಸೂಚನೆ

ಅಕ್ರಮ ಗಣಿಗಾರಿಕೆ, ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರದ ಕಲ್ಲುಗಳನ್ನು ಸಾಗಣೆ ಮಾಡಲಾಗುತ್ತಿದೆ. ಇವುಗಳ ಮೇಲೆ ನಿಗಾ ಇಡುವುದಕ್ಕೆ ಎಲ್ಲೂ ಚೆಕ್‌ಪೋಸ್ಟ್‌ಗಳಿಲ್ಲ ಎಂದು ರೈತ ಸಂಘದ ಗುರುಪ್ರಸಾದ್‌ ದೂರಿದರು.

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸೋಮಣ್ಣ, ‘ಎಲ್ಲವೂ ನನಗೆ ಗೊತ್ತು. ಕೋರ್ಟ್‌ ಮೂಲಕ ಗಣಿ್ಗಾರಿಕೆಗೆ ಅವಕಾಶ ಪಡೆದುಕೊಳ್ಳುವಂತೆ ಅಧಿಕಾರಿಗಳೇ ಗಣಿ ಮಾಲೀಕರಿಗೆ ಹೇಳಿಕೊಡುತ್ತಿದ್ದಾರೆ. ಇದು ನಿಲ್ಲಬೇಕು. ಲಾರಿಗಳ ಭಾರದ ಮೇಲೆ ನಿಗಾ ಇಡುವುದಕ್ಕೆ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಬೇಕು. ಅದಕ್ಕಾಗಿ ಎಎಸ್‌ಪಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಸೂಚನೆ ನೀಡಿದರು.

ಗಣಿ ಇಲಾಖೆ ಉಪನಿರ್ದೇಶಕ ನಂಜುಂಡಸ್ವಾಮಿ ವಿರುದ್ಧ ಹರಿಹಾಯ್ದ ಸಚಿವರು, ಅವರನ್ನು ಹುದ್ದೆಯಿಂದ ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ವಿದ್ಯುತ್‌ ಬಾಕಿ ಮನ್ನಾ

ಕರ ನಿರಾಕರಣೆ ಚಳವಳಿ ಸಂದರ್ಭದ ವಿದ್ಯುತ್‌ ಬಿಲ್‌ ಬಾಕಿ ಮನ್ನಾ ಮಾಡಬೇಕು ಎಂದು ರೈತ ಸಂಘದ ಮಹೇಶ್‌ ಪ್ರಭು, ಹೊನ್ನೂರು ಪ್ರಕಾಶ್‌ ಒತ್ತಾಯಿಸಿದರು.

ಸೋಮಣ್ಣ ಮಾತನಾಡಿ, ‘₹28 ಕೋಟಿ ಬಾಕಿ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದೇನೆ. ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ತರಲು ಕ್ರಮವಹಿಸಲಾಗುವುದು’ ಎಂದರು. ಕಬ್ಬಿಗೆ ಹೆಚ್ಚುವರಿಯಾಗಿ ₹500ಎಫ್‌ಆರ್‌ಪಿ ನೀಡಬೇಕು ಎಂಬ ಒತ್ತಾಯವನ್ನೂ ರೈತ ಮುಖಂಡರು ಮಾಡಿದರು. ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

ಎಪಿಎಂಸಿಯಲ್ಲಿ ಶೇ 10 ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎಂದು ಮಹೇಶ್‌ ಪ್ರಭು ದೂರಿದರು. ಸಹಾಯಕ ನಿರ್ದೇಶಕ ರವಿಚಂದ್ರನ್‌ ಅವರನ್ನು ಪ್ರಶ್ನಿಸಿದಾಗ, ಅವರು ಕಮಿಷನ್‌ ತೆಗೆದುಕೊಳ್ಳುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT