ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಅಭಿವೃದ್ಧಿಗೆ ಡಿಪಿಆರ್‌: ಸಲ್ಲಿಕೆಗೆ ತಿಂಗಳ ಗಡುವು: ಸೋಮಣ್ಣ

ಜಿಲ್ಲೆಯ ಎಲ್ಲ ಕೆರೆಗಳ ಸಮಗ್ರ ಅಭಿವೃದ್ದಿ: ಅಧಿಕಾರಿಗಳೊಂದಿಗೆ ಸಚಿವರ ಸಭೆ
Last Updated 14 ಆಗಸ್ಟ್ 2022, 16:25 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸಿ ಸಮಗ್ರವಾಗಿ ಅಭಿವೃದ್ದಿ ಪಡಿಸುವ ಯೋಜನೆಗೆ ವಿಸೃತ ಯೋಜನಾ ವರದಿಯನ್ನು (ಡಿ.ಪಿ.ಆರ್) ಒಂದು ತಿಂಗಳೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭಾನುವಾರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಪ್ರಕೃತಿ ವಿಕೋಪ ಹಾನಿ, ಪರಿಹಾರ ಹಾಗೂ ಇನ್ನಿತರ ಜಿಲ್ಲೆಯ ಅಭಿವೃದ್ದಿ ವಿಷಯಗಳ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ನೀರಾವರಿ ಅಭಿವೃದ್ದಿ ಯೋಜನೆಗಳ ಕೈಗೊಳ್ಳಲು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವರದಿ ತಯಾರಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕೆರೆಗಳನ್ನು ತುಂಬಿಸಲು ಹಾಗೂ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕಾವೇರಿ ನೀರಾವರಿ ನಿಗಮ ಹಾಗೂ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ವಿಸೃತ ಯೋಜನಾ ವರದಿಯನ್ನು ಒಂದು ತಿಂಗಳೊಳಗೆ ಸಿದ್ಧಪಡಿಸಿ ಸಲ್ಲಿಸಬೇಕು. ವರದಿ ಸಿದ್ಧಪಡಿಸುವ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಭಾಗದ ಶಾಸಕರೊಂದಿಗೆ ಸಮಾಲೋಚಿಸಿ ಚರ್ಚಿಸಿ ಅವರಿಂದಲೂ ಒಪ್ಪಿಗೆ ಪಡೆದು ವರದಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಮಳೆಯಿಂದ ಹಾನಿಗೀಡಾಗಿರುವ ಕೃಷಿ, ತೋಟಗಾರಿಕೆ ಇನ್ನಿತರ ಬೆಳೆ ಮತ್ತು ಮಳೆಹಾನಿ ಕುರಿತು ಪರಿಶೀಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 130 ರೈತರ 83 ಹೆಕ್ಟೇರ್ ಬೆಳೆಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಕಳೆದೆ ಮೇ ಅಂತ್ಯದ ವೇಳೆಗೆ ₹1.64 ಕೋಟಿಗಳಷ್ಟು ಕೃಷಿ ಬೆಳೆ ಪರಿಹಾರ ನೀಡಲಾಗಿದೆ. ಜೂನ್‌ನಿಂದ ಈವರೆಗೆ ಆಗಿರುವ ಎಲ್ಲ ಬೆಳೆಗಳ ಹಾನಿ ಪ್ರಮಾಣದ ವರದಿ ಪಡೆಯಲಾಗುತ್ತಿದ್ದು ಅಗತ್ಯವಿರುವ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

‘ಮಳೆ ಇನ್ನಿತರ ಕಾರಣದಿಂದ 200ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಸೋರುತ್ತಿದ್ದು, ಈ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿಸುವ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಈಗಾಗಲೇ ಕಟ್ಟಡ ದುರಸ್ತಿಗೆ ₹1.32 ಕೋಟಿ ಶಿಕ್ಷಣ ಇಲಾಖೆಗೆ ಬಿಡುಗಡೆಯಾಗಿದೆ. ಒಟ್ಟು ₹6 ಕೋಟಿ ಅಗತ್ಯವಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿವರ ನೀಡಿದ್ದು ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಸೋಮಣ್ಣ ತಿಳಿಸಿದರು.

‘ಮಳೆ, ಅತಿವೃಷ್ಟಿಯಿಂದಾಗಿ ಉಂಟಾಗುವ ಬೆಳೆ, ಮನೆ ಹಾನಿಗೆ ನೀಡಲಾಗುವ ಪರಿಹಾರವನ್ನು ಹೆಚ್ಚಳ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಥಿಲವಾಗಿರುವ ಮನೆಗಳನ್ನು ಗುರುತಿಸಿ ನಿರ್ಮಾಣ ಮಾಡಿಕೊಡುವ ಸಂಬಂಧ ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಹಿರಿಯ ಅಧಿಕಾರಿಗಳೇ ಖುದ್ದು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ’ ಎಂದು ಸಚಿವರು ತಿಳಿಸಿದರು.

ಶಾಸಕ ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್ ಇತರರು ಇದ್ದರು.

‘ಹೆದ್ದಾರಿಗಳ ಉನ್ನತೀಕರಣ’

‘ಭಾರತ್ ಮಾಲ ಯೋಜನೆಯಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ದಿ ಪಡಿಸುವ ಸಂಬಂಧ ಲೋಕಸಭಾ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣವಾಗಲಿದ್ದು, ಬೆಂಗಳೂರು ಹಾಗೂ ಜಿಲ್ಲೆಯ ರಸ್ತೆಗಳನ್ನು ಸಂಪರ್ಕಿಸುವ ಅವಧಿಯು ಇನ್ನಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸಗಳಿಗೆ ಚಾಲನೆ ಕೊಟ್ಟು ವೇಗವಾಗಿ ಕೆಲಸಗಳು ಪೂರ್ಣವಾಗಲು ಲೋಕಸಭಾ ಸದಸ್ಯರು ಎಲ್ಲಾ ಶಾಸಕರೊಂದಿಗೆ ಒಡಗೂಡಿ ಶ್ರಮಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT