ಶನಿವಾರ, ಆಗಸ್ಟ್ 13, 2022
27 °C
ನೆಲದ ಸಂಸ್ಕೃತಿ ಸಾರಲು ಸಜ್ಜಾಗುತ್ತಿದೆ ಪೂರ್ಣಯ್ಯ ಬಂಗಲೆ

ಮಹಾವೀರನಿಗೆ ಎದ್ದು ನಿಲ್ಲುವ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಸಾವಿರಾರು ವರ್ಷಗಳಿಂದ ಮಣ್ಣಿನಲ್ಲಿ ಸೇರಿದ್ದ ಮಹಾವೀರನಿಗೆ ಎದ್ದು ನಿಲ್ಲುವ ಯೋಗ. ದ್ವಾರ ಪಾಲಕರಿಗೆ ಮತ್ತೆ ಅದೇ ಚಾಕರಿ. ದ್ವಾರದ ಬಳಿ ನಿಂತ ಆನೆಗೆ ದಸರಾಕ್ಕೆ ಹೊರಡುವ ಕಾತರ...

ಇದು ಇಲ್ಲಿನ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದಲ್ಲಿ ಕಂಡು ಬರುವ ದೃಶ್ಯ.

ಪ್ರವಾಸಿಗರಿಗೆ ಇಲ್ಲಿನ ನೆಲದ ಸಾಂಸ್ಕೃತಿಕ ಇತಿಹಾಸವನ್ನು ಪರಿಚಯಿಸುವ ಸಲುವಾಗಿ, ಜಿಲ್ಲೆಯ ಪ್ರಥಮ ವಸ್ತು ಸಂಗ್ರಹಾಲಯವನ್ನಾಗಿ ದಿವಾನ್ ಪೂರ್ಣಯ್ಯ ಬಂಗಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಲಭಿಸುವ ಶಾಸನ, ಶಿಲೆ, ಭಿತ್ತಿಚಿತ್ರ, ಚಿತ್ರಕಲೆ, ತಾಳೆಗರಿ ಮತ್ತು ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವುಗಳ ಪ್ರದರ್ಶನಕ್ಕೆ ವಸ್ತು ಸಂಗ್ರಹಾಲಯ ಭರದಿಂದ ಸಜ್ಜಾಗುತ್ತಿದೆ.

ಐತಿಹಾಸಿಕ ಬಂಗಲೆಯ ಆಕರ್ಷಣೆ ಹೆಚ್ಚಿಸಲು ಪ್ರವೇಶ ದ್ವಾರದಲ್ಲಿ ಶಿಲ್ಪ ಕಲ್ಪಗಳನ್ನು ನಿಲ್ಲಿಸಲಾಗಿದೆ. ಮಹಾವೀರ, ದ್ವಾರಪಾಲಕರ ಬೃಹತ್ ಶಿಲೆಗಳನ್ನು ಸಿಮೆಂಟ್ ಪ್ಲಾಸ್ಟರ್ ಬಳಸಿ ನಿಲ್ಲಿಸುವ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಬಂಗಲೆಯನ್ನು ಸಾಗುವಾನಿ ಮರ ಬಳಸಿ ನಿರ್ಮಿಸಲಾಗಿದ್ದು, ಮೂರು ಅಂತಸ್ತುಗಳನ್ನು ಹೊಂದಿದೆ. ಸುಂದರ ಮರದ ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಅಂದಿನ ಮದ್ರಾಸ್ ಎಂಜಿನಿಯರ್ ತಂತ್ರಜ್ಞಾನವನ್ನು , ಬದಲಾಗುತ್ತಿರುವ ನಾಗರಿಕತೆಯ ಹತ್ತು ಹಲವಾರು ಚಿತ್ರಗಳನ್ನು ಅಂದಿನ ಕಟ್ಟಡ ನಿರ್ಮಾಪಕರು ಇಲ್ಲಿನ ಗೋಡೆಗಳಲ್ಲಿ ಪರಿಚಯಿಸಿರುವುದನ್ನು ಕಾಣಬಹುದು ಎನ್ನುತ್ತಾರೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು.

'ಜಿಲ್ಲೆಯ ವಿವಿಧ ಭಾಗಗಳಲ್ಲಿ ಜೈನ ಪರಂಪರೆ, ಚೋಳ, ಗಂಗಾ, ಹೊಯ್ಸಳ, ಪಾಳೆಗಾರ ಮತ್ತು ವಿಜಯನಗರದ ಅರಸರ ಕಾಲದ ಕುರುಹುಗಳನ್ನು ಎಲ್ಲೆಡೆ ಕಾಣಬಹುದು. ವೀರಗಲ್ಲು, ಮಾಸ್ತಿಗಲ್ಲು ಸೇರಿದಂತೆ ನೂರಾರು ಬಹು ವಿನ್ಯಾಸದ ಪುರಾತನ ಶಿಲೆಗಳು ಇನ್ನೂ ಉಳಿದಿವೆ. ಇವೆಲ್ಲವನ್ನು ಒಂದೆಡೆ ಸಂಗ್ರಹಿಸಿ, ನಾಡಿನ ಶಿಲ್ಪಕಲಾ ವೈವಿಧ್ಯತೆ ಹಾಗೂ ಕಲಾ ಪ್ರಾಕಾರಗಳನ್ನು ಪರಿಚಯಿಸುವ ಉದ್ಧೇಶ ಇದೆ. ಚಾರಿತ್ರಿಕ ಮಹತ್ವದ ಮತ್ತು ಅವಸಾನದ ಅಂಚಿನಲ್ಲಿ ಇರುವ ವಾಸ್ತುಶಿಲ್ಪ ಮತ್ತು ಲಿಖಿತ ದಾಖಲೆಗಳು ಕಂಡುಬಂದರೆ ಮಾಹಿತಿ ನೀಡಬಹುದು' ಎನ್ನುತ್ತಾರೆ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ಸುನಿಲ್ ಕುಮಾರ್.

ವಿನೂತನ ಬಂಗಲೆಗೆ ಕೊಡುಗೆ ನೀಡಿ: ಪೂರ್ಣಯ್ಯ ಅವರ ಜೀವನಕ್ಕೆ ಸಂಬಂಧಿಸಿದ ವಸ್ತುಗಳು, ನಂತರದ ಪೀಳಿಗೆಯವರ ಯಾವುದೇ ದಾಖಲೆಗಳನ್ನು ಇಲ್ಲಿ ಕಾಪಿಡುವ ಉದ್ದೇಶ ಇದೆ. ಹಳೆಯ ಬರಹದ ದಾಖಲೆ, ಚಿತ್ರಕಲೆ ಇಲ್ಲವೇ ಜನಪದಕ್ಕೆ ಸಂಬಂಧಪಟ್ಟ ಮರಮಟ್ಟುಗಳಿದ್ದರೆ ಇಲ್ಲಿಗೆ ಸಾರ್ವಜನಿಕರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು