ಸೋಮವಾರ, ಫೆಬ್ರವರಿ 17, 2020
27 °C
ರೋಗರುಜಿನ ಹರಡುವ ಭೀತಿಯಲ್ಲಿ ಅಂಬೇಡ್ಕರ್‌ ಹೊಸ ಬಡಾವಣೆ ನಿವಾಸಿಗಳು

ಚಾಮರಾಜನಗರ: ಹಳ್ಳದಲ್ಲಿ ಕೊಳಚೆ ನೀರು: ದುರ್ವಾಸನೆಗೆ ಜನ ಹೈರಾಣ

ರವಿ ಎನ್‌ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸುಸಜ್ಜಿತವಾದ ಡಾಂಬರು ರಸ್ತೆ ಇದೆ. ಪಕ್ಕದಲ್ಲಿ ವ್ಯವಸ್ಥಿತ ಚರಂಡಿ ಕೂಡ ಇದೆ. ಆದರೆ, ಕೊಳಚೆ ನೀರು ಚರಂಡಿಯಲ್ಲಿ ಹರಿಯುವುದಿಲ್ಲ. ಪಕ್ಕದಲ್ಲಿರುವ ಹಳ್ಳದಲ್ಲಿ ಸಂಗ್ರಹಗೊಂಡಿದೆ! 

ಇದು ನಗರದ ಅಂಬೇಡ್ಕರ್‌ ಹೊಸ ಬಡಾವಣೆಯ ಶಂಕನ ಹಳ್ಳದ ಸ್ಥಿತಿ. ಶೌಚ ನೀರು ತುಂಬಿಕೊಂಡಿರುವುದರಿಂದ ಸಮೀಪದ ನಿವಾಸಿಗಳು ದುರ್ವಾಸನೆ ತಾಳಲಾರದೆ ಸಂಕಟ ಪಡುತ್ತಿದ್ದಾರೆ.  

ಈ ಪ್ರದೇಶ ಕರಿನಂಜನಪುರ ರಸ್ತೆಯಲ್ಲಿರುವ ಭಾರತ್‌ ಗ್ಯಾಸ್‌ ದಾಸ್ತಾನು ಕೊಠಡಿಯ ಹಿಂಭಾಗದಲ್ಲಿದೆ. ಶಂಕನಹಳ್ಳದ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಮನೆಗಳಿವೆ. ಎಲ್ಲ ನಿವಾಸಿಗಳು ಪ್ರತಿನಿತ್ಯ ಇಲ್ಲಿಂದ ಹೊರಬರುವ ದುರ್ವಾಸನೆಯ ಜೊತೆಗೆ ಸೊಳ್ಳೆಕಾಟದಲ್ಲೇ ದಿನದೂಡುತ್ತಿದ್ದಾರೆ.

‘8 ತಿಂಗಳ ಹಿಂದೆ ದೊಡ್ಡ ಒಳಚರಂಡಿ ಹಾಗೂ ರಸ್ತೆ ಅಕ್ಕಪಕ್ಕ ಚರಂಡಿ ವ್ಯವಸ್ಥೆ ಮಾಡಲಾಗಿದೆ. ವೈಜ್ಞಾನಿಕ ಚರಂಡಿ ನಿರ್ಮಿಸಿಲ್ಲ. ಹೊಸ ಬಡಾವಣೆಯಲ್ಲಿ ವಾಸ ಮಾಡುವವರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಕರಿನಂಜನಪುರ, ಸೋಮವಾರಪೇಟೆ, ಗಾಳೀಪುರ ಸೇರಿದಂತೆ ಅನೇಕ ಬಡಾವಣೆಗಳ ಕೊಳಚೆ ಮತ್ತು ಶೌಚ ಮಾಡಿದ ನೀರು ಇಲ್ಲಿಗೆ ಬಂದು ಸೇರುತ್ತದೆ’ ಎಂದು ನಿವಾಸಿ ಚಿನ್ನಸ್ವಾಮಿ ‘ಪ್ರಜಾವಾಣಿ’ಗೆ ಹೇಳಿದರು.

‘ಚರಂಡಿ ಇದ್ದರೂ ಕೊಳಚೆ ನೀರು ಹರಿದು ಹೋಗುತ್ತಿಲ್ಲ. ಇಲ್ಲಿ ಒಳಚರಂಡಿಗೆ ಅಳವಡಿಸಲಾದ ಪೈಪ್‌ಗಳು ಒಡೆದು ನೀರು ಹೊರ ಬರುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಾಗಿದೆ. ಶೌಚ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒಳಚರಂಡಿ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದ ಎಂಜಿನಿಯರ್‌ ರಮೇಶ್‌ ಅವರಿಗೆ ದೂರು ನೀಡಿದೆವು. ಇದು ನಮ್ಮದಲ್ಲ ಎಂದು ಅವರು ಹೇಳುತ್ತಾರೆ’ ಎಂದು ಅವರು ದೂರಿದರು.

‘9ನೇ ಹಾಗೂ 15ನೇ ವಾರ್ಡ್‌ನ ಅಂತಿಮ ರಸ್ತೆ ಈ ಶಂಕನ ಹಳ್ಳಕ್ಕೆ ಸೇರುತ್ತದೆ. ನ್ಯಾಯಾಲಯದ ಎದುರಿನ ರಸ್ತೆ ಆಗಿರುವುದರಿಂದ ಇಲ್ಲಿಗೆ ಸಮೀಪವಿರುವ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ನಗರಕ್ಕೆ ಪ್ರತಿನಿತ್ಯ ಜನರು ಓಡಾಡುತ್ತಾರೆ. ಕೆಲ ಅಧಿಕಾರಿಗಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ ಸ್ವಚ್ಛತೆಗೆ ಮಾತ್ರ ಕ್ರಮವಹಿಸುವುದಿಲ್ಲ’ ಎಂದು ನಿವಾಸಿಯೊಬ್ಬರು ಹೇಳಿದರು.

ಶೀಘ್ರ ಕ್ರಮ: ‘ಸಮಸ್ಯೆ ಇರುವ ಬಗ್ಗೆ ನಿವಾಸಿಗಳು ದೂರು ನೀಡಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ. ಶಂಕನ ಹಳ್ಳ ಸ್ಥಳವನ್ನು ನೋಡಿ ಶೀಘ್ರವೇ ಕಳೆಗಿಡ ತೆರವುಗೊಳಿಸಿ ಸರಾಗವಾಗಿ ದೊಡ್ಡ ಚರಂಡಿ ಮೂಲಕ ಕೊಳಚೆ ನೀರು ಹರಿಯುವಂತೆ ಮಾಡಲು ಕ್ರಮವಹಿಸುತ್ತೇನೆ’ ಎಂದು ನಗರಸಭೆ ಆಯುಕ್ತ ಎಂ. ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಫಸಲು ಕೊಳೆಯುತ್ತಿದೆ
‘ಇಲ್ಲಿಗೆ ಸಮೀಪದಲ್ಲೇ ನನಗೆ ಎರಡು ಎಕರೆ ಜಮೀನು ಇದೆ. 1 ಎಕರೆ 18 ಗುಂಟೆಯಲ್ಲಿ ಜೋಳ ಬೆಳೆದಿದ್ದೆ. ಇಲ್ಲಿನ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಜಮೀನಿಗೆ ನೀರು ನುಗ್ಗಿ ಫಸಲು ಕೊಳೆಯುತ್ತಿದೆ. ಕೂಡಲೇ, ಸಂಬಂಧಪಟ್ಟವರು ವೈಜ್ಞಾನಿಕ ಚರಂಡಿ ವ್ಯವಸ್ಥೆ ಹಾಗೂ ಕೊಳಚೆ ನೀರು ಹರಿದು ಹೋಗುವಂತೆ ಮಾಡಲು ಕ್ರಮವಹಿಸಬೇಕು’ ಎಂದು ನಿವಾಸಿ ಬಸವಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ಕಳೆಗಿಡ ತೆರವುಗೊಳಿಸಬೇಕು: ‘ಕೆಲವು ತಿಂಗಳ ಹಿಂದೆಯಷ್ಟೇ ಚರಂಡಿ ಮಾಡಲಾಗಿದೆ. ಗಾಳಿಪುರ, ಸೋಮವಾರಪೇಟೆ ಭಾಗದ ಕೊಳಚೆ ನೀರು ಇಲ್ಲಿ ಹರಿಯುತ್ತದೆ. ಆದರೆ, ಚರಂಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳೆಗಿಡಗಳು ಬೆಳೆದು ಕೊಳಚೆ ನೀರು ಪೂರ್ಣ ಪ್ರಮಾಣದಲ್ಲಿ ಹರಿದುಹೋಗಲು ಸಾಧ್ಯವಾಗದೆ ಸಂಗ್ರಹಗೊಂಡಿರುವ ಪರಿಣಾಮ ದುರ್ವಾಸನೆ ಹೆಚ್ಚಾಗಿದೆ. ನಗರಸಭೆ ಕಳೆಗಿಡ ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದು ನಿವಾಸಿ ಚಿನ್ನಸ್ವಾಮಿ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು