ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿ ಕೆರೆ ಸಂಪೂರ್ಣವಾಗಿ ಬರಿದಾಗಿದೆ
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿರುವ ಕೆರೆಯಲ್ಲಿ ನೀರು ತಳ ಮುಟ್ಟಿದೆ
‘ಮಳೆ ನೀರು ಸಂಗ್ರಹಕ್ಕೆ ಒತ್ತುಕೊಡಿ’
ಅಂತರ್ಜಲ ಸ್ಥಿತಿಗತಿ ಬಗ್ಗೆ ಪ್ರತಿಕ್ರಿಯಿಸಿದ ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಕಚೇರಿಯ ಹಿರಿಯ ಭೂ ವಿಜ್ಞಾನಿ ಆರ್.ಧನಲಕ್ಷ್ಮಿ ‘ಬರ ಪರಿಸ್ಥಿತಿ ಇರುವುದರಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ. ಐದು ತಾಲ್ಲೂಕುಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಹೆಚ್ಚು ಕುಸಿದಿದೆ. ನಂತರದ ಸ್ಥಾನದಲ್ಲಿ ಚಾಮರಾಜನಗರ ತಾಲ್ಲೂಕು ಇದೆ. ಹನೂರು ಭಾಗದಲ್ಲೂ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿದಿದೆ. 2014–15ರ ಮೊದಲು ಇಂತಹ ಪರಿಸ್ಥಿತಿ ಉದ್ಭವವಾಗಿತ್ತು. ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಂಡ ನಂತರ ಆ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳ ವ್ಯಾಪ್ತಿಯಲ್ಲಿ ನಾವು ಅಧ್ಯಯನ ಕೈಗೊಂಡಿದ್ದೆವು. ಆ ಭಾಗದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ 1.5–2 ಇಂಚಿನಿಂದ 2.5–3 ಇಂಚುಗಳಷ್ಟು ಏರಿಕೆಯಾಗಿತ್ತು’ ಎಂದು ವಿವರಿಸಿದರು. ‘ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚು ಕುಸಿದಿಲ್ಲ. ರೈತರು ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ನೀರು ಇಂಗಿಸಲು ಕ್ರಮ ಕೈಗೊಳ್ಳಬೇಕು. ಜಮೀನಿನ ಖಾಲಿ ಜಾಗದಲ್ಲಿ ಗುಂಡಿಗಳನ್ನು ನಿರ್ಮಿಸುವುದು ತೊಟ್ಟಿ ನಿರ್ಮಾಣ ಕೆರೆಗಳ ನಿರ್ಮಾಣದಂತಹ ಕೆಲಸಗಳನ್ನು ಕೈಗೊಂಡು ಮಳೆಗಾಲದಲ್ಲಿ ಅವುಗಳಲ್ಲಿ ನೀರು ಸಂಗ್ರಹವಾಗುವಂತೆ ಮಾಡಬೇಕು. ಇಂತಹ ಪ್ರಯತ್ನಗಳು ಭವಿಷ್ಯದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲಿವೆ’ ಎಂದು ಹೇಳಿದರು.