ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 7ಕ್ಕೆ ಭುವಿಯ ಅವಳಿ ಗ್ರಹ ಹತ್ತಿರ, ಕಾತುರ!  

ಬೆಳ್ಳಿ ಚುಕ್ಕಿಯ ಜಾಡು ಇಡಿದು ಸಾಗಿದ ಆದರ್ಶಾ ವಿದ್ಯಾರ್ಥಿಗಳ ಪಥ
Published 24 ಜೂನ್ 2023, 6:15 IST
Last Updated 24 ಜೂನ್ 2023, 6:15 IST
ಅಕ್ಷರ ಗಾತ್ರ

ನಾ.ಮಂಜುನಾಥಸ್ವಾಮಿ

ಯಳಂದೂರು: ಭೂಮಿಯ ಅವಳಿ ಗ್ರಹ ಎಂದೇ ಗುರುತಿಸಿಕೊಂಡಿರುವ ಶುಕ್ರ ಗ್ರಹ ಮೇ-ಆಗಸ್ಟ್ ನಡುವೆ ಇಳೆಯ ಸಮೀಪ ದರ್ಶನ ನೀಡಲಿದೆ. ಬರಿಗಣ್ಣಿಗೆ ಕಾಣುವ ಸುಂದರ ಹಾಗೂ ಹೆಚ್ಚು ಪ್ರಕಾಶಮಾನ ಗ್ರಹ ಎಂದು ಬಿಂಬಿತವಾದ ಶುಕ್ರನ ಚಲನ ವಲನಗಳ ಮೇಲೆ ಈಗ ವಿದ್ಯಾರ್ಥಿಗಳು ಕಣ್ಣಿಟ್ಟಿದ್ದು, ಜುಲೈ 7ರಂದು ಹೆಚ್ಚು ಹೊಳೆಯುವ ಶುಕ್ರನನ್ನು ಕಾಣುವ ಕಾತರದಲ್ಲಿ ಇದ್ದಾರೆ.

ತಾಲ್ಲೂಕಿನ ಮೆಲ್ಲಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮೇ ಮಾಸದಿಂದ ಶುಕ್ರ ಆಗಸದಲ್ಲಿ ಹಾದು ಹೋಗುವ ಸ್ಥಳಗಳನ್ನು ಪ್ರತಿದಿನ ಗುರುತು ಮಾಡುತ್ತಾರೆ. ರಾತ್ರಿ ಆಕಾಶದಲ್ಲಿ ಶುಕ್ರನು ಮಿನುಗುವ ಸಮಯ, ವೀಕ್ಷಿಸಿದ ದಿಕ್ಕನ್ನು ಶಾಲೆಯಲ್ಲಿ ಚರ್ಚಿಸುತ್ತಾರೆ. ಭುವಿಯತ್ತ ತಲೆಎತ್ತಿ ಆಗಸದ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ.    

ಶುಕ್ರ ಗ್ರಹವನ್ನು ಮಾನವ ವಿಸ್ಮಯದಿಂದ ನೋಡುತ್ತಲೇ ಬಂದಿದ್ದಾನೆ. ಪ್ರತಿ 19 ತಿಂಗಳಿಗೆ ಸಂಜೆಯ ಪಶ್ಚಿಮ ಆಕಾಶದಲ್ಲಿ ಶುಕ್ರ ರಾರಾಜಿಸುತ್ತಾನೆ. ಈ ಬಾರಿ ಮೇ 30 ರಿಂದ ಆಗಸ್ಟ್ 12ರ ತನಕ ಹೆಚ್ಚು ಹೊಳೆಯುವ ಶುಕ್ರನನ್ನು ಕಣ್ತುಂಬಿಕೊಳ್ಳಬಹುದು. ಆ. 8 ರಿಂದ 19 ರವರ ನಡುವೆ ನೇಸರನಿಗೆ ನೇರವಾಗಿ ಬಂದಾಗ ಶುಕ್ರ ಅಸ್ತವಾಗಿ, ಪೂರ್ವದ ದಿಗಂತದಲ್ಲಿ ಬೆಳಗಿನ ಜಾವ ಮೂಡುತ್ತದೆ. 

‘ವಿದ್ಯಾರ್ಥಿಗಳು ಜುಲೈ 7 ರಂದು ಅತಿ ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸುವ ಶುಕ್ರನನ್ನು  ವೀಕ್ಷಿಸಬಹುದು. ಗ್ರಹ ನಕ್ಷತ್ರಗಳ ವೀಕ್ಷಣೆಯಿಂದ ಮಕ್ಕಳು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬಹುದು. ಭೂಮಿ, ಸೂರ್ಯ, ನಕ್ಷತ್ರಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬಹುದು. ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಶುಕ್ರ ಗ್ರಹದ ಬಗ್ಗೆ ಚರ್ಚೆ, ಚಿತ್ರಕಲೆ, ಭಾಷಣ ಏರ್ಪಡಿಸಿ ಅವರಲ್ಲಿ ಚಿಂತನಾ ಮನೋಭಾವ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ವಿಜ್ಞಾನ ಶಿಕ್ಷಕ ಮುರಳೀಧರ ಎನ್‌. ಹೇಳಿದರು. 

‘ಶುಕ್ರ ಸದ್ಯ ಭೂಮಿಯಿಂದ 15 ಕೋಟಿ ಕಿ.ಮೀ ದೂರದಲ್ಲಿದೆ. ಆ.8ರಂದು 4 ಕೋಟಿ ಕಿ.ಮೀ.ಗೆ ಸಮೀಪಿಸಲಿದೆ. ಈ ಸಮಯದಲ್ಲಿ ಬುಧ ಗ್ರಹ ಸೂರ್ಯನಿಂದ ಸುಮಾರು 6 ಕೋಟಿ ಕಿ.ಮೀ. ದೂರ ಹಾಗೂ ಭೂಮಿ 15 ಕೋಟಿ ಕಿ,ಮೀ. ದೂರದಲ್ಲಿ ಇರುವುದು ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ’ ಎಂದು ಮುಖ್ಯ ಶಿಕ್ಷಕ ಗುರುಮೂರ್ತಿ ಹೇಳಿದರು. 

‘ಸೌರಮಂಡಲದಲ್ಲಿ ಭೂಮಿಗಿಂತ ಒಳಗಿರುವ ಬುಧ ಹಾಗೂ ಶುಕ್ರ ಗ್ರಹಗಳು ರಾತ್ರಿ ಇಡಿಯಾಗಿ ಕಾಣುವುದಿಲ್ಲ. ಆದರೆ ಅವು ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ದಿಗಂತದಲ್ಲಿ ಬೆಳಗಿನ ಜಾವ ಕಾಣುತ್ತವೆ. ಕೆಲ ಸಮಯ ಬೆಳಗಿನ ಜಾವದಲ್ಲಿ ಸೂರ್ಯೋದಯಕ್ಕಿಂತ ಮೊದಲು ಪ್ರಕಾಶಮಾನವಾಗಿ ಕಾಣುತ್ತದೆ’ ಎಂದು ಹೇಳುತ್ತಾರೆ ವಿದ್ಯಾರ್ಥಿಗಳಾದ ಮಹೇಶ್ ಮತ್ತು ಶೋಭಿತಾ.

ಭುವಿಯ ಅವಳಿ ಗ್ರಹ  

ಬರಿಗಣ್ಣಿಗೆ ಕಾಣುವ ಶುಕ್ರ ಹೆಚ್ಚು ಚಂದವಾದ ಗ್ರಹ. ಗಾತ್ರ ಮತ್ತು ಸಾಂಧ್ರತೆಯಲ್ಲಿ ಭೂಮಿಯನ್ನು ಹೋಲುತ್ತದೆ. ಹಾಗಾಗಿ ಭುವಿಯ ಅವಳಿ ಗ್ರಹ ಎಂದೂ ಕರೆಯಲಾಗುತ್ತದೆ. ತನ್ನ ಒಡಲಲ್ಲಿ ಶೇ 95ರಷ್ಟು ಇಂಗಾಲದ ಆಕ್ಸೈಡ್  ಹಾಗೂ ಸ್ವಲ್ಪ ರಂಜಕದ ಡೈಆಕ್ಸೈಡ್ ಹೊಂದಿರುವ ಶುಕ್ರ ಅತಿ ಹೆಚ್ಚಿನ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಸೂರ್ಯನಿಂದ ಶುಕ್ರ 11 ಕೋಟಿ ಕಿ.ಮೀ ದೂರದಲ್ಲಿದೆ. ಆದರೆ ಭೂಮಿಯಿಂದ ಒಂದೇ ದೂರದಲ್ಲಿ ಯಾವಾಗಲೂ ಇರುವುದಿಲ್ಲ. ಅತಿ ಸಮೀಪ ಅಂದರೆ ಆ.13ರಂದು  4 ಕೋಟಿ ಕಿ.ಮೀ ಹಾಗೂ 2025ರ ಜನವರಿಯಲ್ಲಿ ಅತ್ಯಂತ ದೂರ ಎಂದರೆ 26 ಕೋಟಿ ಕಿ.ಮೀ. ದೂರಕ್ಕೆ ಸಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT