ಶನಿವಾರ, ಮೇ 21, 2022
20 °C
ಮಸೀದಿಯಲ್ಲಿನ ಕುಸರಿ ಕೆಲಸ ಮಾಡುವ ಹಿಂದೂ ಕುಶಲ ಕರ್ಮಿಗಳು

ಹಿಂದೂಗಳ ನೈಪುಣ್ಯ; ಮಸೀದಿ ಮಿನಾರ್‌ಗೆ ಶೃಂಗಾರ!

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

ಯಳಂದೂರು: ಜಾತಿ–ಮತಗಳ ನಡುವೆ ಅಪಸ್ವರ ಸೂಸುತ್ತಿರುವ ಇಂದಿನ ದಿನಗಳಲ್ಲಿ ಸೌಹಾರ್ದ ತಾಣಗಳು ನೆಮ್ಮದಿ ಮೂಡಿಸುತ್ತವೆ. ಕಾಯಕ ಸೇವೆ ಮತ್ತು ಸಕ್ಕರೆ ಸೇವೆ ಮಾಡುವಲ್ಲಿ ಹಿಂದೂಗಳು ಈಗಲೂ ಮಸೀದಿಗಳತ್ತ ನೋಡಿದರೆ; ದರ್ಗಾ, ಮಿನಾರ್ ನಿರ್ಮಾಣ ಸಂದರ್ಭದಲ್ಲಿ ಮುಸ್ಲಿಮರು ಹಿಂದೂಗಳ ಸಹಾಯ ಕೋರುತ್ತಾರೆ. ಈ ಮೂಲಕ, ಹಿಂದೂ-ಮುಸ್ಲಿಂ ಬಾಂಧವ್ಯದ ಬೆಸುಗೆಗೆ ಸಾಕ್ಷಿಯಾಗುತ್ತದೆ ಈದ್‌ ಉಲ್‌ ಫಿತ್ರ್‌ ಹಬ್ಬದ ಕ್ಷಣಗಳು.

ತಾಲ್ಲೂಕಿನಲ್ಲಿ ರಂಜಾನ್ ಮಾಸ ಆರಂಭವಾಯಿತೆಂದರೆ, ಮಸೀದಿಯ ಕೆಲಸಗಳ ಆರಂಭ ಕಳೆಗಟ್ಟುತ್ತದೆ. ಗೋಡೆ ನಿರ್ಮಾಣ, ಮಿನಾರುಗಳ ಶೃಂಗಾರ, ಅಲಂಕರಿಸುವ ಕೆಲಸಗಳು ಶುರುವಾಗುತ್ತವೆ. ಹಿಂದೂ ಸಮುದಾಯದ ಕುಶಲ ಶ್ರಮಿಕರು ಲಗುಬಗೆಯಿಂದ ಮಸೀದಿ ಅಂಗಳದಲ್ಲಿ ತಮ್ಮ ಕಾಯಕದ ಮುದ್ರೆ ಒತ್ತುತ್ತಾರೆ. ಈ ಸಮಯದಲ್ಲಿ ಮಸೀದಿ ಮೇಲೆ ಏರಿ ನೈಪುಣ್ಯದಿಂದ ಗಾರೆ, ಗಚ್ಚು ಬಳಿದು, ಬಣ್ಣ ತುಂಬಿ ನಿಗದಿತ ಸಮಯಕ್ಕೆ ಕೆಲಸ ಮುಗಿಸುತ್ತಾರೆ. ಹಬ್ಬದಂದು ಮುಸ್ಲಿಮರ ಮನೆಗಳಿಗೆ ತೆರಳಿ ಶುಭಾಶಯ ಕೋರುವ
ಪರಂಪರೆ ಭಾವೈಕ್ಯತೆಗೆ ಹಿಡಿದ ಕೈಗನ್ನಡಿ.

‘ಕೋವಿಡ್ ಕಾರಣದಿಂದ ಹಬ್ಬ ಎರಡು ವರ್ಷಗಳಿಂದ ಕೇವಲ ಆಚರಣೆಗೆ ಸೀಮಿತವಾಗಿತ್ತು. ಈ ವರ್ಷ ವಿವಿಧೆಡೆ ವಲಸೆ ಹೋದವರು ಜೊತೆಯಾಗಿದ್ದಾರೆ. ಮಸೀದಿಗಳು ಬಣ್ಣದ ಬಲ್ಬ್‌ಗಳ ಬೆಳಕಿನಲ್ಲಿ ಮಿನುಗುತ್ತಿವೆ. ಉಪವಾಸ ಮುಕ್ತಾಯದ ದಿನ ಹಿಂದೂ-ಮುಸ್ಲಿಮರು  ಒಟ್ಟಾಗಿ ಕಲೆತು ಊಟೋಪಚಾರದಲ್ಲಿ ಭಾಗವಹಿಸುತ್ತಾರೆ. ಮಸೀದಿಗಳಲ್ಲಿ ದುಡಿಯುವ ಶ್ರಮಿಕರಿಗೂ ವಿಶೇಷವಾಗಿ ಗೌರವಿಸಲಾಗುತ್ತದೆ. ಇದು ನೂರಾರು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಬದುಕಿದ್ದರ ಫಲ. ಕಷ್ಟ ಸುಖಗಳಲ್ಲೂ ಒಟ್ಟಾಗಿ ಸಾಗಬೇಕಿದೆ’ ಎಂದು ಜಾಮಿಯಾ ಮಸೀದಿ ಕಾರ್ಯದರ್ಶಿ ಮುನಾವರ್‌ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು. 

‘ದೇವಸ್ಥಾನದ ಸೇವೆಗಳಂತೆ ಮಸೀದಿಗಳನ್ನು ಶೃಂಗರಿಸುವ, ಶುದ್ಧಗೊಳಿಸುವ ಕೌಶಲವೂ ಸಿದ್ಧಿಸಿದೆ. ಕೆಲವು ಕಾರ್ಮಿಕರು ಎಷ್ಟೇ ಕಷ್ಟವಾದರೂ, ಕೆಲಸ ನಿಲ್ಲಿಸುವುದಿಲ್ಲ. ಮಸೀದಿಯನ್ನು ಎತ್ತರಿಸುವ, ಕುರಾನ್ ಅಕ್ಷರಗಳನ್ನು ಅಂಟಿಸುವ, ಅಂಗಳಗಳನ್ನು ಚಂದಗಾಣಿಸುವ ಕಲೆಗಳನ್ನು ಮಾಡುತ್ತಾರೆ. ಶ್ರಮ ಪ್ರಧಾನ ಕೆಲಸಗಳಲ್ಲಿ ನಿಷ್ಠೆ ಇದೆ. ಇದರಿಂದ ಸರ್ವಧರ್ಮ ಸಮನ್ವಯತೆ ಒಡಮೂಡುತ್ತದೆ. ಸಮಾಜದಲ್ಲಿ ಗೌರವವೂ ಇಮ್ಮಡಿಸುತ್ತದೆ. ನೆರೆ ಹೊರೆಯವರ ಸಹಕಾರದ ಅಗತ್ಯವನ್ನು ಇಂತಹ ಗಳಿಗೆಗಳು ಮನಗಾಣಿಸುತ್ತವೆ’ ಎಂದು ಶ್ರಮಿಕ ಇರಸವಾಡಿ ನಂಜುಂಡಸ್ವಾಮಿ ಹೇಳಿದರು.

ಬಸವ ಜಯಂತಿ, ಈದ್‌ ಒಂದೇ ದಿನ

ಈ ಬಾರಿ ಈದ್ ಉಲ್ ಫಿತ್ರ್ ಮತ್ತು ಬಸವ ಜಯಂತಿ ಒಂದೇ ದಿನ ಬಂದಿವೆ. ಭಾನುವಾರ ಚಂದ್ರ ದರ್ಶನ ಆಗದ ಕಾರಣ ಮಂಗಳವಾರ ಈದ್‌ ಆಚರಿಸಲಾಗುತ್ತದೆ. ಮುಂಜಾನೆ 8 ಗಂಟೆಯೊಳಗೆ ಮುಸ್ಲಿಮರು ಹಬ್ಬ ಆಚರಿಸಿ, ಮಧ್ಯಾಹ್ನ ನಡೆಯುವ ಬಸವ ಜಯಂತಿ ಉತ್ಸವದಲ್ಲೂ ಪಾಲ್ಗೊಳ್ಳುತ್ತಾರೆ.

‘ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ, ದಾನ, ಧರ್ಮ ಮಾಡುವ ಪವಿತ್ರ ತಿಂಗಳು ರಂಜಾನ್. ನೋಟ,
ಅಭ್ಯಾಸ, ಜೀವನ ಕ್ರಮಗಳು ಸನ್ಮಾರ್ಗದತ್ತ ಇರಬೇಕು. ಫಿತ್ರ್‌ದ ಮೂಲಕ ದಾನ ಮಾಡಿ
ಎಲ್ಲರನ್ನೂ ಸಹೋದರರಂತೆ ಕಾಣುತ್ತೇವೆ’ ಎಂದು ಮಾಂಬಳ್ಳಿ ಶಕೀಲ್ ಅಹ್ಮದ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು