ಗುಂಡ್ಲುಪೇಟೆ: ನಾಡಹಬ್ಬ ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂರು ಆನೆಗಳು ಆಯ್ಕೆ ಆಗಿವೆ. ಗುರುವಾರ ಆನೆಗಳು ಮೈಸೂರಿನತ್ತ ಹೊರಡಲಿವೆ.
ಬಂಡೀಪುರ ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರದ ಗಂಡಾನೆಗಳಾದ ಪಾರ್ಥಸಾರಥಿ ಹಾಗೂ ರೋಹಿತ ಮತ್ತು ಹೆಣ್ಣಾನೆ ಹಿರಣ್ಯ ಈ ಬಾರಿಯ ಜಂಬೂಸವಾರಿಯಲ್ಲಿ ಭಾಗವಹಿಸಲಿವೆ.
ಮದ್ದೂರು ವಲಯದ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಗಜಪಯಣ ಕಾರ್ಯಕ್ರಮ ಹಮ್ಮಿಕೊಡಿದ್ದು, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಆನೆಗಳನ್ನು ಬೀಳ್ಕೊಡಲಿದ್ದಾರೆ.
ಅಧಿಕಾರ ಸ್ವೀಕಾರ: ಈ ಮಧ್ಯೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹುಲಿಯೋಜನೆ ನಿರ್ದೇಶಕರಾಗಿ ಪ್ರಭಾಕರನ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪಿ.ರಮೇಶಕುಮಾರ್ ಅವರನ್ನು ಮೈಸೂರಿನ ಯೋಜನಾ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸರ್ಕಾರ ಎರಡು ದಿನಗಳ ಹಿಂದೆ ವರ್ಗಾವಣೆ ಮಾಡಿತ್ತು.
ಅವರ ಜಾಗಕ್ಕೆ ಕರ್ನಾಟಕ 2011ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಪ್ರಭಾಕರನ್ ಅವರನ್ನು ನಿಯೋಜಿಸಲಾಗಿತ್ತು. ನೂತನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಕೆ.ಪರಮೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೂಗುಚ್ಛ ನೀಡಿ ಅಭಿನಂದಿಸಿದರು.
‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸರ್ವತೋಮುಖ ಬೆಳವಣಿಗೆ, ಅರಣ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಪ್ರಭಾಕರನ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.