ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ರಾತ್ರಿ ಸಂಚಾರ ಅವಧಿ ಪರಿಷ್ಕರಣೆಯ ಕೂಗು

ಬಂಡೀಪುರ: ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ನಿಗದಿಗೆ ಪರಿಸರ ಪ್ರೇಮಿಗಳ ಒತ್ತಾಯ
Last Updated 15 ಡಿಸೆಂಬರ್ 2022, 6:51 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರ ಮದ್ದೂರು ವಲಯದಲ್ಲಿ ಮಂಗಳವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಮೃತಪಟ್ಟಿರುವ ಪ್ರಕರಣ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅರಣ್ಯ ಪ್ರದೇಶದಲ್ಲಿ ಅಜಾಗರೂಕತೆ, ಅತಿ ವೇಗದಿಂದ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕುವುದಕ್ಕಾಗಿ ರಾತ್ರಿ ಸಂಚಾರ ನಿಷೇಧ ಅವಧಿಯನ್ನು ಪರಿಷ್ಕರಿಸಬೇಕು ಎಂಬ ಕೂಗು ಪರಿಸರವಾದಿಗಳಿಂದ ಕೇಳಿ ಬಂದಿದ್ದು, ಈಗಿನ ಸಮಯ ರಾತ್ರಿ 9ರಿಂದ ಬೆಳಿಗ್ಗೆ 6ರ ಬದಲಾಗಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ವಾಹನಗಳಿಗೆ ಆಗದಿದ್ದರೂ, ಸರಕು ಸಾಗಿಸುವ ಭಾರಿ ವಾಹನಗಳಿಗೆ ಹೊಸ ಸಮಯ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಂಡೀಪುರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಸುಲ್ತಾನ್‌ ಬತ್ತೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 766 ಸಂಪರ್ಕ ಕಲ್ಪಿಸುತ್ತದೆ.

ಹುಲಿ ಸೇರಿದಂತೆ ಇತರ ವನ್ಯಜೀವಿ ಗಳ ರಕ್ಷಣೆ ಹಾಗೂಮಾನವ ವನ್ಯ ಜೀವಿ ಸಂಘರ್ಷ ಉದ್ದೇಶದಿಂದ ರಾಜ್ಯ ಸರ್ಕಾರ 2009ರಲ್ಲಿ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿಷೇಧಿಸಿತ್ತು. ಸಾರಿಗೆ ಬಸ್‌ಗಳು ಹಾಗೂ ಆಂಬುಲೆನ್ಸ್‌ ಸೇರಿದಂತೆ ಇತರೆ ತುರ್ತು ವಾಹನಗಳನ್ನು ಬಿಟ್ಟು ಉಳಿದ ವಾಹನಗಳು ಸಂಚರಿಸುವುದಕ್ಕೆ ಅವಕಾಶ ಇಲ್ಲ. ಈ ನಿರ್ಧಾರ ಫಲಪ‍್ರದ ವಾಗಿದ್ದು, ಆ ಬಳಿಕ ದೊಡ್ಡ ಪ್ರಾಣಿಗಳು ವಾಹನಗಳು ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣ ವರದಿಯಾಗಿಲ್ಲ.

2019ರಲ್ಲಿ ಮೇಲುಕಾಮನಹಳ್ಳಿಯ ಬಳಿ ಹುಲಿಯ ಮೃತದೇಹವೊಂದು ಪತ್ತೆಯಾಗಿತ್ತು. ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂಬ ವದಂತಿ ಹರಡಿತ್ತಾದರೂ, ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿಲ್ಲ.

ರಾತ್ರಿ ಸಂಚಾರ ನಿಷೇಧಕ್ಕೆ ತಮಿಳುನಾಡು ಬೆಂಬಲ ವ್ಯಕ್ತಪಡಿಸಿದರೆ, ಕೇರಳ ವಿರೋಧಿಸುತ್ತಿದೆ. ಸುಪ್ರೀಂ ಕೋರ್ಟ್‌ವರೆಗೂ ಅದು ಹೋಗಿದೆ. ವಯನಾಡು ಸೇರಿದಂತೆ ಇತರ ಕಡೆಗಳಲ್ಲಿ ನಿಷೇಧ ತೆಗೆಯಬೇಕು ಎಂದು ಪ್ರತಿಭಟನೆಗಳೂ ನಡೆದಿವೆ. ವಯನಾಡು ಸಂಸದ ರಾಹುಲ್‌ ಗಾಂಧಿ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಕರ್ನಾಟಕವು ಅಂದಿನಿಂದಲೂ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ.

ಈಗ ಆನೆ ಮೃತಪಟ್ಟಿರುವುದು ರಾತ್ರಿ ಹೊತ್ತಿನಲ್ಲಿ ಅರಣ್ಯದ ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಆನೆ ರಸ್ತೆಯಲ್ಲಿ ಇರುವುದು ಕಂಡಿಲ್ಲ ಎಂದರೆ, ಚಾಲಕರಿಗೆ ಇನ್ನು ಹುಲಿ, ಚಿರತೆ ಅಥವಾ ಇತರೆ ಸಣ್ಣ ಪ್ರಾಣಿಗಳು ಇರುವುದು ಕಾಣಿಸುತ್ತವೆಯೇ? ಆನೆಯಂತಹ ದೊಡ್ಡ ಪ್ರಾಣಿ ಸ್ಥಳದಲ್ಲೇ ಸಾಯಬೇಕು ಎಂದರೆ ಚಾಲಕ ಅದೆಷ್ಟು ವೇಗದಲ್ಲಿ ಲಾರಿ ಚಲಾಯಿಸಿರಬಹುದು’ ಎಂದು ಪ್ರಶ್ನಿಸುತ್ತಾರೆ ಪರಿಸರವಾದಿ ಜೋಸೆಫ್‌ ಹೂವರ್‌. ರಾತ್ರಿ ಹೊತ್ತಿನಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕ ಬೇಕು ಎಂಬುದು ಅವರ ಪ್ರತಿಪಾದನೆ.

‘ಹಿಂದೆ ಎರಡು ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಜಿಂಕೆ, ಹಂದಿಗಳು ವಾಹನಗಳಿಗೆ ಸಿಕ್ಕು ಸಾವಿಗೀಡಾಗುತ್ತಿದ್ದವು. ಆನೆಯಂತಹ ದೊಡ್ಡ ಪ್ರಾಣಿಗಳು ಮೃತಪಟ್ಟ ಉದಾಹರಣೆಗಳಿಲ್ಲ. ರಾತ್ರಿ ಸಂಚಾರ ನಿರ್ಬಂಧಿಸುವುದಕ್ಕೂ ಮೊದಲು ಇದೇ ರಸ್ತೆಯಲ್ಲಿ ಆನೆಗೆ ವಾಹನ ಡಿಕ್ಕಿ ಹೊಡೆಯಲಾಗಿತ್ತು. ಅದೇ ಪ್ರಕರಣವನ್ನು ಮುಂದಿಟ್ಟು ರಾತ್ರಿ ಸಂಚಾರ ಬಂದ್ ಮಾಡಲಾಗಿತ್ತು’ ಎಂದು ಪರಿಸರವಾದಿ ಆಗಸ್ಟಿನ್ ಪಿಂಟೊ ಸ್ಮರಿಸಿದರು.

ಈಗ ಇರುವ ಸಂಚಾರ ನಿಷೇಧ ಸಮಯವನ್ನು ಇನ್ನಷ್ಟು ವಿಸ್ತರಿಸಬೇಕು ಎಂಬುದು ಅವರ ಒತ್ತಾಯ.

ಅಗಲ ರಸ್ತೆ, ದಿಬ್ಬಗಳು ಹೆಚ್ಚಿಲ್ಲ

ಬಂಡೀಪುರದಲ್ಲಿ ಸಾಗುವ ಊಟಿ ರಸ್ತೆಗೆ ಹೋಲಿಸಿದರೆ ಕೇರಳದ ಕಡೆಗೆ ಹೋಗುವ ರಸ್ತೆ ಅಗಲವಾಗಿದೆ. ಇಲ್ಲಿ ಉಬ್ಬುಗಳೂ ಕಡಿಮೆ ಇವೆ. ಹೀಗಾಗಿ ವಾಹನಗಳು ಹೆಚ್ಚು ವೇಗದಲ್ಲಿ ಸಾಗುತ್ತವೆ.

ಮದ್ದೂರು ಚೆಕ್‌ಪೋಸ್ಟ್‌ನಿಂದ ಕೇರಳದ ಗಡಿಯಲ್ಲಿರುವ ಮೂಲೆಹೊಳೆ ಚೆಕ್‌ಪೋಸ್ಟ್‌ವರೆಗೆ 18 ಕಿ.ಮೀ ದೂರ ಇದ್ದು, 30ರಷ್ಟು ಉಬ್ಬುಗಳಿವೆ. ಊಟಿ ರಸ್ತೆಯಲ್ಲಿ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ವರೆಗೆ 13 ಕಿ.ಮೀ ಇದ್ದು, 50ಕ್ಕೂ ಹೆಚ್ಚು ಉಬ್ಬುಗಳಿವೆ.

‘ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳಿಗೆ ಸಂಚಾರ ನಿಷೇಧ ಹೇರಬೇಕು ಎಂಬ ಪ್ರಸ್ತಾವವೇ ಆರಂಭದಲ್ಲಿತ್ತು. ಆದರೆ, ಜನರಿಗೆ ತೀವ್ರ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ರಾತ್ರಿ 9ರಿಂದ ಎಂದು ಮಾಡಲಾಯಿತು. ಆದರೆ, ಈ ಬಗ್ಗೆ ಯೋಚಿಸಲು ಇದು ಸುಸಮಯ. ಅಲ್ಲದೇ, ಮದ್ದೂರು ಹಾಗೂ ಮೂಲೆಹೊಳೆ ಚೆಕ್‌ಪೋಸ್ಟ್‌ ನಡುವೆ ವಾಹನಗಳು ವೇಗವಾಗಿ ಸಾಗುತ್ತಿದ್ದು, ಇನ್ನಷ್ಟು ಹೆಚ್ಚು ಉಬ್ಬುಗಳನ್ನು ಹಾಕಬೇಕು’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್‌.ಕೆ.ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಕ್ಕೆ ಪತ್ರ ಬರೆಯುವೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ‘ವೇಗದ ಚಾಲನೆಯಿಂದ ಇಂತಹ ಘಟನೆ ನಡೆಯುತ್ತಿವೆ. ನಮ್ಮ ಅರಣ್ಯದಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇದರ ಸಾಧಕ ಬಾಧಕಗಳನ್ನು ಸರ್ಕಾರಕ್ಕೆ ತಿಳಿಸುತ್ತೇವೆ. ಕನಿಷ್ಠ ಪಕ್ಷ ಭಾರಿ ವಾಹನಗಳಿಗೆ ನಿರ್ಬಂಧ ವಿಧಿಸಿದರೂ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT