ಚಾಮರಾಜನಗರ: ಕಾವೇರಿ ವನ್ಯಧಾಮದ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ (ಇಎಸ್‌ಝಡ್) ಸಭೆಯು ಮೈಸೂರು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ (ಆ.3) ನಡೆಯಲಿದ್ದು, ಸಭೆಯ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಲಾಗಿರುವ ಹಲವು ಅಂಶಗಳಿಗೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವನ್ಯಧಾಮದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ, ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಹೋಬಳಿಯ ಮುಗ್ಗೂರು ಫಾರೆಸ್ಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಪರಿಸರ ಪ್ರವಾಸೋದ್ಯಮದ (ಇಕೊ ಟೂರಿಸಂ) ಉದ್ದೇಶಕ್ಕೆ ಭೂಪರಿವರ್ತನೆಗಾಗಿ ಅನುಮತಿ ಕೋರಿರುವ ವಿಚಾರ ಗುರುವಾರದ ಸಭೆಯಲ್ಲಿ ಚರ್ಚೆಗೆ ಬರಲಿದೆ.
‘ಸರ್ಕಾರದ ಅಧಿಸೂಚನೆ ಪ್ರಕಾರ, ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಕ್ಕೆ ಅವಕಾಶ ಇಲ್ಲ. ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಪರಿವರ್ತನೆಗೆ ಅವಕಾಶ ನೀಡಬಾರದು ಎಂದು 2013ರಲ್ಲಿ ಹೈಕೋರ್ಟ್ ಕೂಡ ಹೇಳಿದೆ. ಹೀಗಾಗಿ, ಭೂ ಪರಿವರ್ತನೆಗೆ ಅವಕಾಶ ನೀಡಬಾರದು’ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಕಾವೇರಿ ವನ್ಯಧಾಮದ ಪರಿಸರ ಸೂಕ್ಷ್ಮ ವಲಯ ನಿಗದಿ ಪಡಿಸಿ 2017ರ ಆಗಸ್ಟ್ 22ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ.
ಗುರುವಾರ ನಡೆಯಲಿರುವ ಇಎಸ್‌ಝಡ್ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲು ಒಟ್ಟು 20 ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಈ ಪೈಕಿ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಮುನ್ನೂರು ಫಾರೆಸ್ಟ್ ಗ್ರಾಮದ ಸರ್ವೆ ನಂ.5ರಲ್ಲಿ 12 ಎಕರೆ 13 ಗುಂಟೆ ಜಮೀನು, ಸರ್ವೆ ನಂ.3ರಲ್ಲಿ 8 ಎಕರೆ 20 ಗುಂಟೆ ಜಮೀನು, ಸರ್ವೆ ನಂ.2/1ರಲ್ಲಿ 5 ಎಕರೆ 24 ಗುಂಟೆ ಜಮೀನು, ಸರ್ವೆ ನಂ.2/2ರಲ್ಲಿ 4 ಎಕರೆ 15 ಗುಂಟೆ ಜಮೀನು, ಉಯ್ಯಂಬಳ್ಳಿ ಹೋಬಳಿ ಚಿಕ್ಕಮುದುಡೆ ಗ್ರಾಮದ ಸರ್ವೆ ನಂ.100/2 ರಲ್ಲಿ 1 ಎಕರೆ ಜಮೀನನ್ನು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಾಗಿ ಭೂಪರಿರ್ತನೆ ಮಾಡಲು ಮನವಿ ಸಲ್ಲಿಸಿರುವ ವಿಷಯಗಳು ಸೇರಿವೆ.
ಇದಲ್ಲದೇ, ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ, ಬಿಎಸ್‌ಎನ್‌ಎಲ್ ಟವರ್ ಅಳವಡಿಸಲು ಅನುಮತಿ ನೀಡುವುದು ಸೇರಿದಂತೆ ವಿವಿಧ ವಿಷಯಗಳು ಕಾರ್ಯಸೂಚಿಯಲ್ಲಿವೆ.
ಪ್ರತಿಕ್ರಿಯೆ ಪಡೆಯಲು ಕಾವೇರಿ ವನ್ಯಧಾಮದ ಪ್ರಭಾರ ಡಿಸಿಎಫ್ ಜಿ.ಸಂತೋಷ್‌ಕುಮಾರ್ ಅವರಿಕೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಅನುಮತಿಗೆ ಅವಕಾಶ ಇಲ್ಲ ನೀಡಲೂಬಾರದು
‘ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಕೇಂದ್ರ ಅರಣ್ಯ ಸಚಿವಾಲಯದ ಅಧಿಸೂಚನೆಯಲ್ಲಿ ಸ್ಪಷ್ಟವಾಗಿದೆ. ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಎಕರೆಗಟ್ಟಲೆ ಜಮೀನನ್ನು ಭೂಪರಿವರ್ತನೆ ಮಾಡಲು ಮನವಿ ಸಲ್ಲಿಸಲಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಭೂಪರಿವರ್ತನೆ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲ. 2013ರ ಹೈಕೋರ್ಟ್‌ನ ತೀರ್ಪಿನಲ್ಲೂ ಈ ಅಂಶ ಸ್ಪಷ್ಟವಾಗಿದೆ. ಹಾಗಾಗಿ ಅನುಮತಿ ಕೊಡಲು ಅವಕಾಶವೇ ಇಲ್ಲ. ಈ ಪ್ರಕರಣದಲ್ಲಿ ಆಡಳಿತದಲ್ಲಿರುವ ಪ್ರಭಾವಿಗಳ ಒತ್ತಡ ಇರುವ ಸಾಧ್ಯತೆಯೂ ಇದೆ. ಒಂದು ವೇಳೆ ಇದ್ದರೂ ಅಧಿಕಾರಿಗಳು ಅದಕ್ಕೆ ಮಣಿಯಬಾರದು. ಯಾವುದೇ ಕಾರಣಕ್ಕೂ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಅನುಮತಿ ಕೊಡಬಾರದು’ ಎಂದು ಪರಿಸರವಾದಿ ಜೋಸೆಫ್ ಹೂವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಆರ್‌ಟಿ ಇಎಸ್‌ಝಡ್ ಸಭೆ ಇಂದು
ಕಾವೇರಿ ವನ್ಯಧಾಮದ ಸಭೆಯ ನಂತರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಬಿಳಿಗಿರಿರಂಗನಬೆಟ್ಟದಲ್ಲಿರುವ ಕಾರ್ಯಾಚರಿಸುತ್ತಿರುವ ಅಕ್ರಮ ರೆಸಾರ್ಟ್ ಹೋಂ ಸ್ಟೇ ವಸತಿಗೃಹ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.