ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಗಿರಿಜನ ಮಕ್ಕಳು

ಎಸ್‌ಎಸ್‌ಎಲ್‌ಸಿ: ಸವಾಲಿನ ನಡುವೆ ಇಬ್ಬರನ್ನು ದಡ ಸೇರಿಸಲು ಜಿಲ್ಲಾಡಳಿತ ಯಶಸ್ವಿ
ಸೂರ್ಯನಾರಾಯಣ ವಿ.
Published 11 ಮೇ 2024, 6:05 IST
Last Updated 11 ಮೇ 2024, 6:05 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರೌಢ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟ ಗಿರಿಜನ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೇರ್ಗಡೆಯಾಗಬೇಕು ಎಂಬ ಜಿಲ್ಲಾಡಳಿತದ ಅಧಿಕಾರಿಗಳ ಮಹತ್ವಾಕಾಂಕ್ಷೆಯ ಯತ್ನಕ್ಕೆ ಈ ಸಾಲಿನಲ್ಲಿ ದೊಡ್ಡ ಮಟ್ಟಿನ ಯಶಸ್ಸು ಸಿಗದೇ ಇದ್ದರೂ, ಗಿರಿಜನ ಮಕ್ಕಳು ಕೂಡ ಶಿಕ್ಷಣ ಪಡೆಯಬೇಕು ಎಂಬ ತಮ್ಮ ಗುರಿಯನ್ನು ಅಧಿಕಾರಿಗಳು ಬಿಟ್ಟಿಲ್ಲ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಮತ್ತೆ ಪರೀಕ್ಷೆ ಬರೆಯುವಂತೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇಟ್ಟ ಹೆಜ್ಜೆಯನ್ನು ಹಿಂದೆ ಇಡದೆ, ಆದಿವಾಸಿ ಮಕ್ಕಳನ್ನು ಮತ್ತು ಅವರ ಪೋಷಕರಿಗೆ ಮತ್ತೆ ಮನವರಿಕೆ ಮಾಡಿ ಪರೀಕ್ಷೆಗೆ ಕಟ್ಟಿಸಲಿದ್ದಾರೆ.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ವಿಶೇಷ ಕಾಳಜಿ ವಹಿಸಿ, ಎಸ್‌ಎಸ್‌ಎಲ್‌ಸಿಯಲ್ಲಿ ಶಿಕ್ಷಣ ಮೊಟಕು ಗೊಳಿಸಿದ   ಸೋಲಿಗ, ಜೇನುಕುರುಬ, ಬೆಟ್ಟಕುರುಬ ಸಮುದಾಯದ ಮಕ್ಕಳನ್ನು ಗುರುತಿಸಿ ಮೈಸೂರಿನ ರೋಟರಿ ಪಂಚಶೀಲ ಸಹಯೋಗದಲ್ಲಿ ವಿಶೇಷ ಪುನಶ್ಚೇತನಾ ತರಬೇತಿ ಕೊಡಿಸಿದ್ದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆಗಳೂ ಈ ಪ್ರಯತ್ನಕ್ಕೆ ಕೈಜೋಡಿಸಿದ್ದವು. ಹರದನಹಳ್ಳಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮೂರು ತಿಂಗಳುಗಳ ಕಾಲ ಇರಿಸಿಕೊಂಡು ಅವರಿಗೆ ಬೋಧನೆ ಮಾಡಲಾಗಿತ್ತು. 30 ಗಿರಿಜನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.‌

ಈ ಪೈಕಿ 29 ಮಕ್ಕಳು 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ಇಬ್ಬರು ಮಾತ್ರ ತೇರ್ಗಡೆಯಾಗಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ  ರಂಗಸಂದ್ರ ಬೂದಿಪಡಗ ಹಾಡಿಯ ರಾಜೇಶ್‌ ಮತ್ತು ಹನೂರು ತಾಲ್ಲೂಕಿನ ಕಾನುಮಳೆದೊಡ್ಡಿ ಪ್ರಶಾಂತ್‌ ಅವರು ಉತ್ತೀರ್ಣರಾಗಿದ್ದಾರೆ. ಉಳಿದ 27 ಮಂದಿ ಅನುತ್ತೀರ್ಣರಾಗಿದ್ದಾರೆ. ಕನ್ನಡ ಸೇರಿದಂತೆ ಒಂದೆರಡು ವಿಷಯಗಳಲ್ಲಿ ತೇರ್ಗಡೆ ಅಂಕಗಳಿಸಿರುವ ಅವರು ಕೋರ್‌ ವಿಷಯಗಳಲ್ಲಿ ಸ್ವಲ್ಪ ಕಡಿಮೆ ಅಂಕಗಳಿಸಿದ್ದಾರೆ. 

ಸವಾಲಿನ ಕೆಲಸ: ಪರೀಕ್ಷೆಗೆ ಬರೆದಿದ್ದ ಎಲ್ಲ ಮಕ್ಕಳು ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಶಿಕ್ಷಣ ಮೊಟಕು ಗೊಳಿಸಿದವರು. ಅವರನ್ನು ಮತ್ತೆ ಪರೀಕ್ಷೆಗೆ ತಯಾರಿ ಮಾಡುವುದು ಸುಲಭವಾಗಿರಲಿಲ್ಲ. ಅದು ಬಹುದೊಡ್ಡ ಸವಾಲು ಎಂಬುದರ ಅರಿವಿದ್ದರೂ, ಜಿಲ್ಲಾಡಳಿತದ ಅಧಿಕಾರಿಗಳು ಈ ಪ್ರಯತ್ನ ನಡೆಸಿದ್ದರು.

‘ಫಲಿತಾಂಶವನ್ನು ಮೇಲ್ನೋಟಕ್ಕೆ ನೋಡಿದರೆ ಪ್ರಯತ್ನ ನಿರೀಕ್ಷಿತ ಫಲ ನೀಡಿಲ್ಲ ಎಂದು ಕಾಣುತ್ತಿದೆಯಾದರೂ, ಈ ಬಾರಿ ಪರೀಕ್ಷೆಯ ವೇಳೆ ಅನುಸರಿಸಲಾಗಿದ್ದ ಕಟ್ಟುನಿಟ್ಟಿನ ನಿಯಮಗಳನ್ನು ನೋಡಿದರೆ, ಇಬ್ಬರು ತೇರ್ಗಡೆಯಾಗಿರುವುದು ನಮ್ಮ ಪ್ರಯತ್ನದ ಯಶಸ್ಸೇ ಎಂದು ಹೇಳಬಹುದು’ ಎಂದು ಹೇಳುತ್ತಾರೆ ಅಧಿಕಾರಿಗಳು.

‘ವರ್ಷದಿಂದಲೂ ಹೆಚ್ಚು ಸಮಯದಿಂದ ಮಕ್ಕಳು ಪಠ್ಯದಿಂದ ದೂರವಾಗಿದ್ದರು. ಅವರಿಗೆ ಓದಲು ಆಸಕ್ತಿಯೂ ಇರಲಿಲ್ಲ. ಇಡೀ ವರ್ಷದ ಪಠ್ಯವನ್ನು ಅವರು ಮೂರು ತಿಂಗಳಲ್ಲಿ ಮುಗಿಸಬೇಕಿತ್ತು. ವರ್ಷ ಪೂರ್ತಿ ಓದಿದ ಮಕ್ಕಳೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿಲ್ಲ. ಹೀಗಿರುವಾಗ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದ ಗಿರಿಜನ ಮಕ್ಕಳು ತೇರ್ಗಡೆಯಾಗುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ, ಮಕ್ಕಳು ಮೂರು ತಿಂಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದರು. ಧೈರ್ಯವಾಗಿ ಪರೀಕ್ಷೆ ಬರೆದಿದ್ದರು’ ಎಂದು ಹೇಳುತ್ತಾರೆ ಅವರಿಗೆ ಬೋಧಿಸಿದ ಶಿಕ್ಷಕರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಲಭ್ಯರಾಗಲಿಲ್ಲ.

ಮಂಜುಳಾ
ಮಂಜುಳಾ
ಪ್ರಶಾಂತ್‌
ಪ್ರಶಾಂತ್‌
ರಾಜೇಶ್
ರಾಜೇಶ್

ಗಿರಿಜನ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ. ಮತ್ತೆ ಅವರು ಪರೀಕ್ಷೆ ಬರೆಯುವಂತೆ ಮಾಡಲಿದ್ದೇವೆ

-ಮಂಜುಳಾ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ

ಪಾಸಾಗಿರುವುದು ತುಂಬಾ ಖುಷಿ ನೀಡಿದೆ. ಮತ್ತೆ ಶಾಲೆಗೆ ಹೋಗುವ ಭರವಸೆ ಇರಲಿಲ್ಲ. ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಂದಾಗಿ ಇದು ಸಾಧ್ಯವಾಗಿದೆ

-ಪ್ರಶಾಂತ್‌ ಮಳೆಕಾನುದೊಡ್ಡಿ

ಅನಿವಾರ್ಯ ಪರಿಸ್ಥಿತಿಯಲ್ಲಿ ಶಾಲೆ ಬಿಡಬೇಕಾಯಿತು. ಅಧಿಕಾರಿಗಳ ಪ್ರೋತ್ಸಾಹದಿಂದ ಪಾಸಾಗಿದ್ದೇನೆ. ಖುಷಿಯಾಗಿದೆ. ಮುಂದೆ ಚೆನ್ನಾಗಿ ಓದುವೆ

- ರಾಜೇಶ್‌ ರಂಗಸಂದ್ರ ಬೂದಿಪಡಗ

‘ಪಿಯುಸಿಗೆ ಸೇರಿಸಲು ವ್ಯವಸ್ಥೆ’ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಾ ‘ತೇರ್ಗಡೆಯಾದ ಇಬ್ಬರಿಗೂ ಉನ್ನತ ಶಿಕ್ಷಣ ಪಡೆಯುವ ಆಸೆ ಇದೆ. ಇಬ್ಬರೊಂದಿಗೂ ಮಾತನಾಡಿದ್ದೇನೆ. ಕೊಳ್ಳೇಗಾಲದ ಕಾಲೇಜೊಂದರಲ್ಲಿ ಇಬ್ಬರನ್ನು ಪಿಯು ಶಿಕ್ಷಣಕ್ಕೆ ದಾಖಲಿಸಲಾಗುವುದು. ಉಚಿತ ಶಿಕ್ಷಣ ನೀಡಲು ಕಾಲೇಜು ಒಪ್ಪಿಕೊಂಡಿದೆ’ ಎಂದು ಹೇಳಿದರು. ‘ಉಳಿದ ಮಕ್ಕಳು ಹಾಗೂ ಪೋಷಕರೊಂದಿಗೆ ನಾವು ಮಾತನಾಡುತ್ತೇವೆ. ಮತ್ತೆ ಅವರನ್ನು ಪರೀಕ್ಷೆಗೆ ಬರೆಯುವಂತೆ ಮಾಡುತ್ತೇವೆ. ಈಗಷ್ಟೆ ತರಬೇತಿ ಪಡೆದಿದ್ದಾರೆ. ಪಠ್ಯವನ್ನು ಓದಿಕೊಂಡಿದ್ದಾರೆ. ಇನ್ನೂ ಸ್ವಲ್ಪ ಓದಿದರೆ ಉತ್ತೀರ್ಣರಾಗಲು ಅವಕಾಶ ಇದೆ’ ಎಂದು ಅವರು ಹೇಳಿದರು.

ಸಾಧಕರ ಪೋಷಕರ ಸಂಭ್ರಮ ಅರ್ಧದಲ್ಲೇ ಶಾಲೆಯನ್ನು ಬಿಟ್ಟಿದ್ದ ತಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೇರ್ಗಡೆಯಾಗಿರುವುದು ಇಬ್ಬರೂ ಸಾಧಕರ ಪೋಷಕರಲ್ಲಿ ಸಂಭ್ರಮ ಉಂಟು ಮಾಡಿದೆ.  ಬೈಲೂರಿನ ಕಾನುಮಳೆದೊಡ್ಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ರಂಗಸಂಗ್ರ ಬೂದಿಪಡಗ ಹಾಡಿಗಳಲ್ಲಿ ಗಿರಿಜನರು ಕೂಡ ಪಾಸಾದ ವಿಷಯ ಕೇಳಿ ಖುಷಿ ಪಟ್ಟಿದ್ದಾರೆ. 284 ಅಂಕಗಳಿಸಿರುವ ಪ್ರಶಾಂತ್‌ 2016ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಅನುತ್ತೀರ್ಣರಾದ ಬಳಿಕ ಮತ್ತೆ ಪರೀಕ್ಷೆ ಬರೆದಿಲ್ಲ. ಶಿಕ್ಷಣದ ಆಸೆಯನ್ನು ಅವರು ಬಿಟ್ಟಿದ್ದರು. 2016ರಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಎಂಟನೇ ತರಗತಿಯನ್ನು ಅರ್ಧದಲ್ಲೇ ಬಿಟ್ಟಿದ್ದ ರಾಜೇಶ್‌ ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಜಿಲ್ಲಾಡಳಿತ ಪುನಶ್ಚೇತನ ತರಬೇತಿ ಶಿಬಿರ ಮಾಡದಿದ್ದರೆ ಇವರಿಬ್ಬರೂ ಶಿಕ್ಷಣ ಪಡೆಯುವ ಆಸೆಯನ್ನು ಶಾಶ್ವತವಾಗಿ ಬಿಡಬೇಕಿತ್ತು. ಆದರೆ ಜಿಲ್ಲಾಡಳಿತದ ಈ ಪ್ರಯತ್ನ ಇಬ್ಬರಲ್ಲೂ ಮತ್ತೆ ಶಿಕ್ಷಣ ಪಡೆಯುವ ಆಸೆಯನ್ನು ಬಿತ್ತಿದೆ. ಪಿಯುಸಿಗೆ ಸೇರಲು ಇಬ್ಬರೂ ತುದಿಗಾಲಿನಲ್ಲಿ ನಿಂತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT