ಚಾಮರಾಜನಗರ: ಬೆಂಬಲ ಬೆಲೆ; ಭತ್ತ, ರಾಗಿ ಮಾರಾಟಕ್ಕೆ ನಿರಾಸಕ್ತಿ

ಚಾಮರಾಜನಗರ: 2022–23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಭತ್ತ ಮತ್ತು ರಾಗಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಕ್ತಾಯಗೊಂಡಿದ್ದು, ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಕೆಲವು ರೈತರಾದರೂ ಮುಂದೆ ಬಂದಿದ್ದು, ಭತ್ತ ಮಾರಾಟಕ್ಕೆ ಕೇವಲ 19 ಮಂದಿ ಒಲವು ತೋರಿದ್ದಾರೆ.
ಈ ಬಾರಿ ಸರ್ಕಾರವು ಪ್ರತಿ ಕ್ವಿಂಟಲ್ ಭತ್ತಕ್ಕೆ ಬೆಲೆ ₹2,040 (ಸಾಮಾನ್ಯ) ಮತ್ತು ₹2,060 (ಉತ್ತಮ ದರ್ಜೆ) ಹಾಗೂ ಪ್ರತಿ ಕ್ವಿಂಟಲ್ ರಾಗಿಗೆ
₹3,578 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿತ್ತು.
ಜಿಲ್ಲೆಯ ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಅವರಣದಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. 2022ರ ಡಿಸೆಂಬರ್ 15ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ಜನವರಿ 31ರವರೆಗೂ ನೋಂದಣಿ ಮಾಡಿಕೊಳ್ಳಲಾಗಿದ್ದು, ಖರೀದಿ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.
ಕಳೆದ ಸಾಲಿನ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ 12,490 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 12,661 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಬಹುತೇಕ ಎಲ್ಲ ಕಡೆಗಳಲ್ಲಿ ಈಗ ಕಟಾವು ಮುಗಿದಿದೆ. ಪೈರು ಕಟ್ಟುವುದು ವಿಳಂಬವಾದ ಪ್ರದೇಶಗಳಲ್ಲಿ ಕೊಯ್ಲು ನಡೆಯುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲೆಯಲ್ಲಿ ಖರೀದಿ ಏಜೆನ್ಸಿಯಾಗಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನೀಡಿರುವ ಅಂಕಿ ಅಂಶಗಳ ಪ್ರಕಾರ, 19 ಮಂದಿ ರೈತರು 587 ಕ್ವಿಂಟಲ್ ಭತ್ತ ಮಾರಾಟ ಮಾಡಲು ನೋಂದಣಿ
ಮಾಡಿಕೊಂಡಿದ್ದಾರೆ. 329 ರಾಗಿ ಬೆಳೆಗಾರರು 5,095 ಕ್ವಿಂಟಲ್ ರಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ. ಇವರಲ್ಲಿ 264 ಮಂದಿ ರಾಗಿ ಹೆಚ್ಚು ಬೆಳೆಯುವ ಹನೂರು ತಾಲ್ಲೂಕಿನವರೇ ಆಗಿದ್ದಾರೆ.
ನಿರಾಸಕ್ತಿ ಏಕೆ?: ಜಿಲ್ಲೆಯಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಮಾರಾಟಕ್ಕೆ ಉತ್ಸಾಹ ತೋರದೇ ಇರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಇದೇ ರೀತಿ ಇರುತ್ತದೆ.
ಕಳೆದ ವರ್ಷ 59 ರೈತರು 2,093.89 ಕ್ವಿಂಟಲ್ ಭತ್ತ ಮಾರಾಟ ಮಾಡಿದ್ದರು. 341 ರೈತರು 5,210.6 ಕ್ವಿಂಟಲ್‌ಗಳಷ್ಟು ಮಾರಾಟ ಮಾಡಿದ್ದರು.
ಭತ್ತ, ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡದಿರಲು ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ ರೈತರು.
‘ಖರೀದಿ ಕೇಂದ್ರಗಳಲ್ಲಿ ನೋಂದಣಿ, ಮಾರಾಟ ದೊಡ್ಡ ಪ್ರಕ್ರಿಯೆ. ಅದಕ್ಕೆ ಆರ್‌ಟಿಸಿ ಸೇರಿದಂತೆ ಹಲವು ದಾಖಲೆಗಳು ಬೇಕು. ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚು ಗುಣಮಟ್ಟವನ್ನು ಕೇಳುತ್ತಾರೆ. ಖರೀದಿ ಕೇಂದ್ರ ಅಥವಾ ಅಕ್ಕಿ ಗಿರಣಿಗೆ ನಾವೇ ತೆಗೆದುಕೊಂಡು ಹೋಗಬೇಕು. ಖರೀದಿ ಮಿತಿಯೂ ಇದೆ. ಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಬೆಲೆ ಹೊರಗಡೆ ಸಿಗುತ್ತಿದೆ. ಅಕ್ಕಿ ಗಿರಣಿಯವರು, ವ್ಯಾಪಾರಿಗಳು, ದಲ್ಲಾಳಿಗಳು ಹೊಲದ ಬಳಿಗೇ ಬಂದು ತಕ್ಷಣವೇ ಖರೀದಿಸುತ್ತಾರೆ. ದುಡ್ಡು ಅಲ್ಲೇ ಪಾವತಿ ಮಾಡುತ್ತಾರೆ. ಬೆಳೆಯನ್ನು ಮನೆಗೆ ತೆಗೆದುಕೊಂಡು ಹೋಗುವ, ಒಣಗಿಸುವ, ಸಂಗ್ರಹಿಸಿಡುವ ಪ್ರಮೇಯವೇ ಇಲ್ಲ. ಆ ವೆಚ್ಚವೆಲ್ಲವೂ ಉಳಿಯುತ್ತದೆ’ ಎಂದು ಹೇಳುತ್ತಾರೆ ಬೆಳೆಗಾರರು.
ಈ ಬಾರಿ ಹೊರಗಡೆ ಭತ್ತಕ್ಕೆ ಕ್ವಿಂಟಲ್‌ಗೆ ₹2,400 ರಿಂದ ₹2,500ರವರೆಗೆ ಬೆಲೆ ಇದೆ. ರಾಗಿ ₹3,700ರಿಂದ ₹3,900ರವರೆಗೂ ಇದೆ. ಅಂದರೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚೇ ರೈತರಿಗೆ ಸಿಗುತ್ತಿದೆ.
‘ಬೆಂಬಲ ಬೆಲೆಯ ಯೋಜನೆ ಉದ್ದೇಶ ಬೆಳೆ ಖರೀದಿ ಒಂದೇ ಅಲ್ಲ. ಮಾರುಕಟ್ಟೆಯಲ್ಲಿ ಭತ್ತ, ರಾಗಿಯ ಬೆಲೆ ಸ್ಥಿರತೆ ಇರುವಂತೆ ನೋಡಿಕೊಳ್ಳುವ ಉದ್ದೇಶವೂ ಇದೆ. ಖರೀದಿ ಕೇಂದ್ರ ಆರಂಭಿಸುತ್ತಿದ್ದಂತೆಯೇ ಕನಿಷ್ಠ ಬೆಂಬಲಗಿಂತ ಕಡಿಮೆ ಬೆಲೆಗೆ ಹೊರಗಿನವರು ಖರೀದಿ ಮಾಡುವುದಿಲ್ಲ. ಅದಕ್ಕಿಂತ ಹೆಚ್ಚೇ ಬೆಲೆ ಕೊಡುತ್ತಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ರೈತರು ಏನಂತಾರೆ?
ತಕ್ಷಣ ಹಣ ಸಿಗುವುದಿಲ್ಲ
ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಅಥವಾ ರಾಗಿ ಮಾರಾಟ ಮಾಡಿದರೆ ತಕ್ಷಣಕ್ಕೆ ಹಣ ಸಿಗುವುದಿಲ್ಲ. ಅದಕ್ಕೆ ಕಾಯಬೇಕು. ಆದರೆ, ಹೊರಗಡೆ ಅಕ್ಕಿ ಗಿರಣಿಯವರು, ವ್ಯಾಪಾರಿಗಳು ಇಲ್ಲವೇ ದಲ್ಲಾಳಿಗಳು ಜಮೀನಿನ ಬಳಿಗೆ ಬಂದೇ ಖರೀದಿ ಮಾಡುತ್ತಾರೆ. ತಕ್ಷಣವೇ ಹಣವನ್ನೂ ಪಾವತಿಸುತ್ತಾರೆ. ಹಾಗಾಗಿ, ರೈತರು ಹೊರಗಡೆಯೇ ಮಾರಾಟ ಮಾಡುತ್ತಿದ್ದಾರೆ
ಅಶೋಕ,ಸರಗೂರು, ಕೊಳ್ಳೇಗಾಲ ತಾಲ್ಲೂಕು
ಬೆಂಬಲ ಬೆಲೆ ಹೆಚ್ಚಿಸಬೇಕು
ಬೇಸಾಯಗಾರರು ಮಳೆಯಿಂದ ಈ ಬಾರಿ ತತ್ತರಿಸಿದ್ದಾರೆ. ಖರೀದಿ ಕೇಂದ್ರಕ್ಕೆ ನೀಡಬೇಕಿದ್ದಲ್ಲಿ ನೋಂದಣಿ ಸಮಯದಲ್ಲಿ ಆರ್‌ಟಿಸಿ ಮತ್ತಿತರ ದಾಖಲೆಗಳನ್ನು ನೀಡಬೇಕು. ಬಹಳಷ್ಟು ರೈತರು ಇವುಗಳನ್ನು ಹೊಂದಿಸುವಲ್ಲಿ ಪರದಾಡುತ್ತಾರೆ. ಸರ್ಕಾರ ನಿಗದಿಪಡಿಸಿದ ದರವು ಕಡಿಮೆ ಇದೆ. ಹಾಗಾಗಿ ಭತ್ತ ಮತ್ತು ರಾಗಿಯನ್ನು ಕಟಾವು ಮಾಡಿದ ತಕ್ಷಣ ಗದ್ದೆಯಲ್ಲಿ ಮಾರಾಟ ಮಾಡಿ ವ್ಯವಸಾಯದ ನಿರ್ವಹಣೆಗೆ ಸ್ಥಳದಲ್ಲಿ ಹಣವನ್ನು ಪಡೆಯುತ್ತಾರೆ. ಸರ್ಕಾರ ರೈತರಿಗೆ ನೋಂದಣಿ ತಕ್ಷಣವೇ ಮುಕ್ತ ಮಾರುಕಟ್ಟೆಯಲ್ಲಿ ನೀಡುವ ಧಾರಣೆಯನ್ನು ನೀಡಲು ಮುಂದಾಗಬೇಕು.
ಎಚ್.ಬಿ.ಬಸವಣ್ಣ, ಹೊನ್ನೂರು, ಯಳಂದೂರು ತಾಲ್ಲೂಕು
ಬೆಂಬಲ ಬೆಲೆ ಕಡಿಮೆ
ಬಹಳಷ್ಟು ಕೃಷಿಕರು ಸಾಲಸೋಲ ಮಾಡಿಕೊಂಡು ಬೆಳೆ ತೆಗೆಯುತ್ತಾರೆ. ಇವರ ಬಳಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಇರುವುದಿಲ್ಲ. ಇಂತಹ ರೈತರು ತಕ್ಷಣವೇ ರಾಗಿ ಇಲ್ಲವೇ ಭತ್ತವನ್ನು ಮಾರಾಟ ಮಾಡಲು ಇಚ್ಚಿಸುತ್ತಾರೆ. ಮನೆ ಖರ್ಚಿಗೆ ಹಾಗೂ ಹಿಡುವಳಿ ಅಭಿವೃದ್ಧಿಗೆ ತಕ್ಷಣ ಮಾಡಬೇಕಾದ ಖರ್ಚನ್ನು ಹೊಂದಿಸಬೇಕಿದೆ. ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹2,040 ನಿಗದಿಪಡಿಸಿದ್ದು, ಹೊರಗಡೆ ಹೆಚ್ಚು ಬೆಲೆ ಇದೆ. ಹಾಗಾಗಿ, ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಮುಂದಾಗಿಲ್ಲ.
ನಾಗರಾಜು, ಆಲ್ಕೆರೆ,ಯಳಂದೂರು ತಾಲ್ಲೂಕು.
ಖರೀದಿ ಕೇಂದ್ರ ಇಲ್ಲ
ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಯಾವುದೇ ಖರೀದಿ ಕೇಂದ್ರಗಳು ಇಲ್ಲ. ರಾಗಿ, ತೊಗರಿ ಮುಂತಾದ ಬೆಳೆಗಳನ್ನು ಸಂತೆ ಮತ್ತು ದಲ್ಲಾಳಿಗಳ ಮುಖಾಂತರ ಮಾರಾಟ ಮಾಡುತ್ತಿದ್ದೇವೆ.
ಸಂಪತ್ತು, ಕುಂದುಕೆರೆ, ಗುಂಡ್ಲುಪೇಟೆ ತಾಲ್ಲೂಕು
ವಿಳಂಬವಾಗಿ ಆರಂಭ
ರೈತರು ಫಸಲು ಕಟಾವು ಮಾಡಿದ ನಂತರ ಖರೀದಿ ಕೇಂದ್ರವನ್ನು ಆರಂಭಿಸುತ್ತದೆ. ಮುಂಚಿತವಾಗಿ ತೆರೆದರೆ ಕೊಂಚ ಅನುಕೂಲವಾಗುತ್ತದೆ. ಗಿರಣಿ ಮಾಲೀಕರು ಮುಂಚಿತವಾಗಿ ಬಂದು ಮುಂಗಡ ನೀಡಿ ಹೋಗುತ್ತಾರೆ. ಖರೀದಿ ಕೇಂದ್ರದ ಬಗ್ಗೆ ಅರಿವು ಮೂಡಿಸಬೇಕು. ಖಾಸಗಿಗಿಂತ ಸರ್ಕಾರ ಬೆಲೆ ಹೆಚ್ಚಳ ಮಾಡಬೇಕು.
ರೇವಣ್ಣ, ಕಮರವಾಡಿ, ಚಾಮರಾಜನಗರ ತಾಲ್ಲೂಕು
––
ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ರಾಗಿ ಮಾರಾಟಕ್ಕೆ ಹೆಚ್ಚಿನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದೇ 8 ರಿಂದ ಖರೀದಿ ಆರಂಭವಾಗಲಿದೆ
ಯೋಗಾನಂದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ
**
ನಿರ್ವಹಣೆ: ಸೂರ್ಯನಾರಾಯಣ ವಿ.
ಪೂರಕ ಮಾಹಿತಿ:
ಮಹದೇವ್ ಹೆಗ್ಗವಾಡಿಪುರ, ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ., ಮಲ್ಲೇಶ ಎಂ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.