ಶನಿವಾರ, ಸೆಪ್ಟೆಂಬರ್ 25, 2021
30 °C

ಚಾಮರಾಜನಗರ: ಪಟ್ಟು ಸಡಿಸಲಿದ ರೈತರು; ಮುಂದುವರಿದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ಸಂಘಟನೆಗಳನ್ನು ಅವಹೇಳನ ಮಾಡಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ರಾಜ್ಯದಿಂದ ವರ್ಗಾವಣೆ ಮಾಡಬೇಕು ಎಂಬ ತಮ್ಮ ಪಟ್ಟನ್ನು ಸಡಿಲಿಸದ ರೈತ ಸಂಘಟನೆಗಳ ಮುಖಂಡರು ಎರಡನೇ ದಿನವಾದ ಮಂಗಳವಾರವೂ ಪ್ರತಿಭಟನೆ ಮುಂದುವರಿಸಿದರು. 

ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಬೆಳಿಗ್ಗೆಯಿಂದಲೇ ಧರಣಿ ಕುಳಿತಿದ್ದ ರೈತ ಮುಖಂಡರು, ಮಂಗಳವಾರ ಸಂಜೆಯವರೆಗೂ ಜಿಲ್ಲಾಡಳಿತದಿಂದ ಸಕಾರಾತ್ಮಕ ಬಾರದೇ ಇದ್ದಾಗ. ದಿಢೀರ್‌ ಆಗಿ ಸಂತೇಮರಹಳ್ಳಿ ರಸ್ತೆಯ ಜಾಲಹಳ್ಳಿಹುಂಡಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ತಡೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಆಗಸ್ಟ್‌ 10ರಂದು ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ವರ್ಗಾವಣೆ ಮಾಡುವುದಾಗಿ ಕಂಪೆನಿ ಆಡಳಿತ ಒಪ್ಪಿಕೊಂಡು, 15 ದಿನಗಳ ಕಾಲಾವಕಾಶ ಕೇಳಿತ್ತು. ಆದರೆ ಒಂದು ತಿಂಗಳು ಆದರೂ ವರ್ಗಾವಣೆ ಮಾಡಿಲ್ಲ. ಸಭೆಯಲ್ಲಿ ಕೈಗೊಂಡಿರುವ ನಿರ್ಧಾರವನ್ನು ಜಾರಿಗೆ ತರುವಂತೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ. ಸಕ್ಕರೆ ಕಾರ್ಖಾನೆಯ ಆಡಳಿತವನ್ನು ನಿಯಂತ್ರಿಸುವಲ್ಲಿ ಅದು ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಅವರು, ‘ಜನಸಾಮಾನ್ಯರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ರಸ್ತೆ ತಡೆ ನಡೆಸುತ್ತಿಲ್ಲ. ರೈತ ಸಂಘಟನೆಗಳು ಹಾಗೂ ರೈತ ಮುಖಂಡರ ಬಗ್ಗೆ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಆಡಳಿತ ಅವಹೇಳನಕಾರಿಯಾಗಿ ಮಾತನಾಡಿದೆ. ಇದನ್ನು ಖಂಡಿಸಿ ನಾವು ಈ ಹಿಂದೆ ಹೋರಾಟ ಮಾಡಿದ್ದೆವು. ಅವಹೇಳನಕಾರಿ ಹೇಳಿಕೆ ನೀಡಿದ ಉಪಾಧ್ಯಕ್ಷ ಶರವಣ ಅವರನ್ನು 15 ದಿನಗಳಲ್ಲಿ ಅವರ ವರ್ಗಾವಣೆ ಮಾಡುವ ಭರವಸೆಯನ್ನು ಕಂಪನಿ ಆಡಳಿತ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿತ್ತು. ಶರವಣ ಅವರ ವರ್ಗಾವಣೆ ಮಾಡುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ಪೊಲೀಸರು ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಸ್ಥಳದಲ್ಲಿದ್ದ ಪೊಲೀಸರು, ‘ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ’ ಎಂದು ಮನವಿ ಮಾಡಿದರೂ ಅವರು ಕೇಳಲಿಲ್ಲ. 

ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್‌ರಾಜ್‌ ಹಾಗೂ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ರೈತಮುಖಂಡರೊಂದಿಗೆ ಮಾತನಾಡಿ, ‘ಬುಧವಾರ ಬೆಳಿಗ್ಗೆಯ ಒಳಗಾಗಿ ವರ್ಗಾವಣೆ ಆದೇಶ ಹೊರಡಿಸುವಂತೆ ನೋಡಿಕೊಳ್ಳುತ್ತೇವೆ ಈಗ ಪ್ರತಿಭಟನೆ ಕೈಬಿಡಿ. ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದ ನಂತರ ಪ್ರತಿಭಟನಕಾರರು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರು. 

‘ಸಕ್ಕರೆ ಕಾರ್ಖಾನೆಯ ವಿರುದ್ಧ ಕಾನೂನು ಕ್ರಮಕೊಳ್ಳುವ ಸಂಬಂಧ ಕಾನೂನು ತಜ್ಞರ ಜೊತೆ ಮಾತನಾಡುವುದಾಗಿ ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ. ಹಾಗಿದ್ದರೂ, ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಬಳಿ ಧರಣಿ ಮುಂದುರಿಸಿದ್ದೇವೆ’ ಎಂದು ಭಾಗ್ಯರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು