ಮಂಗಳವಾರ, ಸೆಪ್ಟೆಂಬರ್ 28, 2021
20 °C
ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳ ಆಕ್ರೋಶ

ಚಾಮರಾಜನಗರ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಬ್ಬಿಗೆ ವೈಜ್ಞಾನಿಕವಾಗಿ ನ್ಯಾಯ ಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿ ಪಡಿಸಬೇಕು ಎಂದು ಆಗ್ರಹಿಸಿ, ರೈತ ಕಾನೂನುಗಳು ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರುವ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. 

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರೇಷ್ಮೆ ಮಾರುಕಟ್ಟೆಯ ಬಳಿ ಸೇರಿದ ರೈತ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕುಳಿತು ವಾಹನಗಳ ಸಂಚಾರವನ್ನು ತಡೆದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ಕೇಂದ್ರ ಸರ್ಕಾರ ಕಬ್ಬಿನ ಎಫ್‌ಆರ್‌ಪಿಯನ್ನು ಕೆಜಿಗೆ ಕೇವಲ 5 ಪೈಸೆಯಷ್ಟು ಹೆಚ್ಚು ಮಾಡಿದೆ. ಆದರೆ, ಕ್ಚಿಂಟಲ್‌ಗೆ ₹290 ಹೆಚ್ಚು ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ವರ್ಷವೇ ಕ್ವಿಂಟಲ್‌ಗೆ ₹285 ಇತ್ತು. ಈ ಬಾರಿ ₹290 ಮಾಡಲಾಗಿದೆ. ಅಂದರೆ ಕ್ವಿಂಟಲ್‌ಗೆ ₹5 ಮಾತ್ರ ಜಾಸ್ತಿ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕಬ್ಬು ಬೆಳೆಗಾರನಿಗೆ ಬೆಳೆ ಬೆಳೆಯಲು ಎಷ್ಟು ವೆಚ್ಚವಾಗುತ್ತಿದೆ ಎಂಬುದನ್ನು ಸರ್ಕಾರ ನೋಡುತ್ತಿಲ್ಲ. ಬೆಲೆ ನಿಗದಿ ಮಾಡುವಾಗ ರೈತರನ್ನು ಮಾತನಾಡಿಸದೆ, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಲಂಚ ಪಡೆದು ಅವರಿಗೆ ಬೇಕಾದಂತಹ ಬೆಲೆಯನ್ನು ನಿಗದಿ ಮಾಡಿದೆ’ ಎಂದು ಆರೋಪಿಸಿದರು. 

‘ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ, ಬೆಳೆಗಾರರೊಂದಿಗೆ ಚರ್ಚಿಸಿ ಎಫ್‌ಆರ್‌ಪಿ ನಿಗದಿಪಡಿಸಬೇಕು. ಕ್ಚಿಂಟಲ್‌ಗೆ ₹350 ನೀಡಬೇಕು’ ಎಂದು ಒತ್ತಾಯಿಸಿದರು.  

‘ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆಯನ್ನು ಕೇಂದ್ರ ಸರ್ಕಾರ ದಿನೇ ದಿನೇ ಹೆಚ್ಚಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ’ ಎಂದು ದೂರಿದರು. 

ಮೂಲಸೌಕರ್ಯಕ್ಕೆ ಆಗ್ರಹ: ‘ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪೋಡುಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತುಳಸೀಕೆರೆಯಲ್ಲಿ ಮಕ್ಕಳು ಶಾಲೆಗಳಿಗೆ ಹೋಗಲು ಕಷ್ಟ ಪಡುತ್ತಿದ್ದಾರೆ. ಆನೆಗಳ ದಾಳಿಯ ಭಯದಲ್ಲೇ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಜಿಲ್ಲಾಡಳಿತ ಅವರಿಗೆ ವಾಹನಗಳ ವ್ಯವಸ್ಥೆ ಮಾಡಿಕೊಡಬೇಕು. ಬೆಟ್ಟದ ವ್ಯಾಪ್ತಿಯ ಅರಣ್ಯದಲ್ಲಿ ಬರುವ ಗ್ರಾಮಗಳ ಅಭಿವೃದ್ಧಿಗೆ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ಕ್ರಮ ಕೈಗೊಳ್ಳಬೇಕು’ ಎಂದು ಹೊನ್ನೂರು ಪ್ರಕಾಶ್‌ ಅವರು ಅಗ್ರಹಿಸಿದರು. 

ಅಧಿಕಾರಿಗಳು ಬರಲು ಪಟ್ಟು:  ರಸ್ತೆ ತಡೆದ ಪ್ರತಿಭಟನಕಾರರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಕಾರರನ್ನು ಮನವೊಲಿಸಲು ಯತ್ನಿಸಿದ ಪೊಲೀಸರು, ‘ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ನಿಮ್ಮ ಮನವಿ ಸ್ವೀಕರಿಸುತ್ತಾರೆ. ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ’ ಎಂದರು. ಇದಕ್ಕೆ ಸ್ಪಂದಿಸಿದ ರೈತರು, ವಾಹನಗಳ ಸಂಚಾರಕ್ಕೆ ಅನುವು ಮಾಡಿದರು. 

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್‌ರಾಜ್‌ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು. 

ಮಾಡ್ರಹಳ್ಳಿ ಮಹದೇವಪ್ಪ, ಮೇಲಾಜಿಪುರ ಕುಮಾರ್‌, ವಿಜಯ್‌ಕುಮಾರ್‌ ಹೆಗ್ಗೋಠಾರ, ಮಹೇಶ್‌, ಮಾದಪ್ಪ, ಚಂಗಡಿ ಕರಿಯಪ್ಪ, ಪೃಥ್ವಿ, ಶಿವಮೂರ್ತಿ, ರಘು, ಪಾಪು, ಮಹೇಶ್‌ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.