ಶುಕ್ರವಾರ, ಜೂನ್ 18, 2021
27 °C
ರೈತರ ಸಮಸ್ಯೆಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ –ಆರೋಪ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹ

ಸುರೇಶ್‌ ಕುಮಾರ್‌ಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ: ರೈತರು ವಶಕ್ಕೆ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲೆಯ ರೈತರ ಅಳಲು ಕೇಳುತ್ತಿಲ್ಲ ಎಂದು ಆರೋಪಿಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾ‍ಪಸ್‌ ಪಡೆಯಬೇಕು ಎಂದು ಆಗ್ರಹಿಸಿ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದ  ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರನ್ನು ಪೊಲೀಸರು ನಗರದಲ್ಲಿ ಶನಿವಾರ ವಶಕ್ಕೆ ಪಡೆದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಕ್ತಾಯದ ನಂತರ ರೈತ ಮುಖಂಡರನ್ನು ಪೊಲೀಸರು ಬಿಡುಗಡೆ ಮಾಡಿದರು. 

ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಇತ್ತೀಚೆಗೆ ನಡೆಸಿದ್ದ ಸಭೆಯಲ್ಲಿ ರೈತ ಮುಖಂಡರು ತೀರ್ಮಾನಿಸಿದ್ದರು. 

ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ಇತ್ತ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಬಳಿಯಲ್ಲಿ ಗುಂ‍ಪಾಗಿ ಸಾಗುತ್ತಿದ್ದ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ತಡೆದರು. 

‘ಕಾರ್ಯಕ್ರಮಕ್ಕೆ ಗುಂಪಾಗಿ ಹೋಗಬೇಡಿ, ಒ‌ಬ್ಬೊಬ್ಬರಾಗಿ ಹೋಗಿ’ ಎಂದು ಪೊಲೀಸರು ಸಲಹೆ ನೀಡಿದರು. ಇದನ್ನು ಒಪ್ಪದ ರೈತರು, ‘ಒಟ್ಟಾಗಿ ಹೋಗುತ್ತೇವೆ’ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತರು. ಮಾತಿಗೆ ಬಗ್ಗದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. 

ವಿವಿಧ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದೆ ಎಂದು ರೈತ ಮುಖಂಡರು ಆರೋಪಿಸಿದರು. 

ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕಾರ್ಯಕ್ರಮದಿಂದ ತೆರಳಿದ ಬಳಿಕ ಪೊಲೀಸರು ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿದರು. 

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಹೊನ್ನೂರು ಬಸವಣ್ಣ, ಶಿವಮೂರ್ತಿ, ಮಧು ಕಾಳನಹುಂಡಿ, ಕಲ್ಪುರ ನಗೇಂದ್ರ, ಕಲ್ಪುರ ಜಗದೀಶ್, ಬದನಗುಪ್ಪೆ ರಮೇಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು