ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 8.42 ಲಕ್ಷ ಮತದಾರರು

ಕರಡು ಪಟ್ಟಿ ಬಿಡುಗಡೆಯ ಬಳಿಕ ಹೊಸದಾಗಿ 7,624 ಮಂದಿಯ ಹೆಸರು ಸೇರ್ಪಡೆ
Last Updated 5 ಜನವರಿ 2023, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಗುರುವಾರ ಪ್ರಕಟಿಸಿದ್ದು, 8,42,496 ಮಂದಿ ಮತದಾರರಿದ್ದಾರೆ.

2022ರ ನವೆಂಬರ್‌ 9ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆಗ 8,34,872 ಮತದಾರರಿದ್ದರು. ಎರಡು ತಿಂಗಳ ಅವಧಿಯಲ್ಲಿ ಜಿಲ್ಲಾಡಳಿತ ಕೈಗೊಂಡಿದ್ದ ವಿಶೆಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಹೊಸದಾಗಿ 7,624 ಮಂದಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎರಡು ಮತಗಟ್ಟೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ಹಿಂದೆ 980 ಮತಗಟ್ಟೆಗಳಿದ್ದವು. ಅದೀಗ 982ಕ್ಕೆ ಹೆಚ್ಚಾಗಿದೆ.

ಅಂತಿಮ ಮತದಾರರ ಪಟ್ಟಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ‘ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವ ಮತದಾರರು ಹಾಗೂ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಯುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ’ ಎಂದರು.

‘ಪರಿಷ್ಕರಣೆ ಕಾರ್ಯ ನಿರಂತರವಾಗಿ ನಡೆಯಲಿದ್ದು, ಈ ಸಂದರ್ಭದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಸೇರಿಸಲಾಗುವುದು ಎಂದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಹಕಾರಿಯಾಗಲು ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಹನೂರಿನಲ್ಲಿ ಹೆಚ್ಚು ಸೇರ್ಪಡೆ: ಕರಡು ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂದರೆ 2,506 ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಗುಂಡ್ಲುಪೇಟೆಯಲ್ಲಿ 2,302, ಚಾಮರಾಜನಗರದಲ್ಲಿ 1,869 ಹಾಗೂ ಕೊಳ್ಳೇಗಾಲದಲ್ಲಿ 947 ಮಂದಿಯ ಹೆಸರು ಅಂತಿಮ ಪಟ್ಟಿಗೆ ಸೇರ್ಪಡೆಗೊಂಡಿದೆ.

‘ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೇ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು’ ಎಂದು ಕಾತ್ಯಾಯಿನಿದೇವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT