ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಕಟ್ಟೆಗಳಲ್ಲಿ ಮೀನಿಗೆ ಬರ, ಕ್ಯಾಟ್ ಫಿಶ್ ಅಬ್ಬರ

ಸುಡು ಬಿಸಿಲು, ತಳ ಮುಟ್ಟಿದ ಕೆರಗಳಲ್ಲಿ ಮತ್ಸ್ಯಕ್ಷಾಮದ ತಳಮಳ
ನಾ.ಮಂಜುನಾಥಸ್ವಾಮಿ
Published 16 ಮಾರ್ಚ್ 2024, 5:59 IST
Last Updated 16 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ಯಳಂದೂರು: ಒಂದೆಡೆ ನೆತ್ತಿ ಸುಡುವ ಬಿಸಿಲು. ಮತ್ತೊಂದೆಡೆ ಬರಿದಾಗುತ್ತಿರುವ ಕೆರೆ ಕಟ್ಟೆಗಳ ಒಡಲು. ತಳ ಸೇರಿದ ಜೀವಜಲ. ಮೀನು ನಂಬಿ ಬದುಕು ಕಟ್ಟಿಕೊಂಡವರ ಮುಖದಲ್ಲಿ ಈಗ ಹರ್ಷ ಕಾಣುತ್ತಿಲ್ಲ. ಮೀನುಗಾರಿಕಾ ಋತುವಿನಲ್ಲೂ ಮೀನಿನ ಬರದ ಬಿಸಿ ಸಾಕಣೆದಾರರಿಗೆ ತಟ್ಟಿದೆ.

ತಾಲ್ಲೂಕಿನ ಹೆಚ್ಚಿನ ಕೆರೆಗಳಲ್ಲಿ ಜನವರಿ ಮತ್ತು ಜೂನ್ ನಡುವೆ ಮೀನಿನ ಸುಗ್ಗಿ ಕಾಲ. ಮಾರ್ಚ್– ಏಪ್ರಿಲ್‌ನಲ್ಲಿ ಭರ್ಜರಿ ಮೀನಿನ ಇಳುವರಿ ಸಿಗುತ್ತಿತ್ತು. ಈ ವರ್ಷ 10ಕ್ಕೂ ಹೆಚ್ಚಿನ ದೊಡ್ಡ ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೆಲವು ಕೆರೆಕಟ್ಟೆಗಳು ಬತ್ತಿ ಹೋಗಿವೆ. ಕೆಲವು ಜಲಾವರಗಳಲ್ಲಿ ಕಳೆಗಿಡ ಮತ್ತು ಹೂಳು ಆವರಿಸಿದ್ದು, ಜಲಕೃಷಿಗೆ ಹಿನ್ನಡೆ ಉಂಟು ಮಾಡಿದೆ. 

‘ತಾಲ್ಲೂಕಿನಲ್ಲಿ ಮೀನುಗಾರಿಕೆ ನಂಬಿರುವ ನೂರಾರು ಕುಟುಂಬಗಳು ಮೀನು ಸಾಕಣೆಗೆ ಕೆರೆ ನೀರು ಆಶ್ರಯಿಸಿವೆ. ಕಳೆದ ವರ್ಷ ಕೆರೆಗೆ ನೀರು ತುಂಬಿಸಿ, ಸಾಗುವಳಿ ಮತ್ತು ಜಲಕೃಷಿಗೆ ನೆರವು ಕಲ್ಪಿಸಲಾಗಿತ್ತು. ಈ ಬಾರಿ ಕಾಲುವೆ, ನದಿ ಮೂಲಗಳ ನೀರು ಬಹುತೇಕ ಸ್ಥಗಿತವಾಗಿದ್ದು, ಅಳಿದುಳಿದ ನೀರಿನಲ್ಲಿ ಮೀನು ಸಾಕಬೇಕಿದೆ. ಮುಂಗಾರು ಹಂಗಾಮಿನಲ್ಲಿ ಸಮೃದ್ಧವಾಗಿ ಮೀನು ಸಿಗುವ ಸಮಯದಲ್ಲಿ ಮೀನು ಬೆಳವಣಿಗೆ ತಗ್ಗಿದೆ. ಮೀನು ಉದ್ಯಮ ನಂಬಿದವರ ಬದುಕು ಅತಂತ್ರವಾಗಿದೆ’ ಎಂದು ಯರಿಯೂರು ಸಿದ್ದಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಮೀಣ ಅರೆ ಕುಶಲ ಕಾರ್ಮಿಕರು ವರ್ಷದ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆಸಿ ಆದಾಯ ಪಡೆಯುತ್ತಿದ್ದರು. ಆದರೆ, ಈ ವರ್ಷ ಮೀನುಗಾರಿಕೆ ವೃತ್ತಿ ಆಶಾದಾಯಕವಾಗಿಲ್ಲ. ಹಾಕಿದ ಬಂಡವಾಳ ಕೈಸೇರದೆ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅವರು ಹೇಳಿದರು.

ಕ್ಯಾಟ್ ಫಿಶ್ ಅಬ್ಬರ: ಕೆರೆ ಕಟ್ಟೆಗಳಲ್ಲಿ ನೀರು ಇಳಿಯುತ್ತಿದ್ದಂತೆ ಕ್ಯಾಟ್ ಫೀಶ್ (ಆನೆ ಮೀನು) ಅಬ್ಬರ ಹೆಚ್ಚಾಗಿದೆ. 5 ರಿಂದ 10 ಕೆಜಿ ತೂಗುವ ಇವು ಸಾಕಣೆ ಮಾಡಿದ ಇತರ ಮೀನುಗಳನ್ನು ಭಕ್ಷಿಸುತ್ತವೆ. ಇದರಿಂದ ಮೀನುಗಾರರಿಗೆ ನಷ್ಟ ಹೆಚ್ಚಾಗುತ್ತಿದೆ.

‘ಆನೆ ಮೀನು ನೀರಿನ ಕೊರತೆ ನಡುವೆಯೂ ಬದುಕಿ ಉಳಿಯುತ್ತವೆ. ಚರಂಡಿ, ರಾಜಕಾಲುವೆ, ಹೊಲ ಗದ್ದೆಗಳ ನೀರಿನ ಮೂಲಗಳಲ್ಲಿ ಸೇರಿಕೊಂಡು ಮಳೆಗಾಲದಲ್ಲಿ ಮತ್ತೆ ಕೆರೆ ಆಶ್ರಯಿಸುತ್ತವೆ. ಈಚಿನ ದಶಕಗಳಲ್ಲಿ ಇವುಗಳ ಉಪಟಳ ಮಿತಿಮೀರಿದ್ದು ಮೀನು ಇಳುವರಿಯನ್ನು ತಗ್ಗಿಸಿದೆ. ಬರ ಇರುವುದರಿಂದ ಇಲಾಖೆಯು ಎರಡು ವರ್ಷಗಳ ಅವಧಿಗೆ ಪಾವತಿಸಿರುವ ₹60 ಸಾವಿರ ಶುಲ್ಕವನ್ನು ಮುಂದಿನ ವರ್ಷಕ್ಕೆ ಬಳಸಿಕೊಂಡು ಮೀನುಗಾರರ ಹಿತ ಕಾಯಬೇಕು’ ಎಂದು ಕಂದಹಳ್ಳಿ ಮೀನುಗಾರಿಕಾ ಸಂಘದ ಕಾರ್ಯದರ್ಶಿ ಬಸವಣ್ಣ ಒತ್ತಾಯಿಸಿದರು.

ಹತ್ತಾರು ಕೆಜಿ ತೂಗುವ ಕ್ಯಾಟ್ ಫಿಶ್ ಒಳನಾಡು ಮೀನುಗಾರರಿಗೆ ಹೆಚ್ಚು ನಷ್ಟ ಉಂಟು ಮಾಡುತ್ತಿವೆ   
ಹತ್ತಾರು ಕೆಜಿ ತೂಗುವ ಕ್ಯಾಟ್ ಫಿಶ್ ಒಳನಾಡು ಮೀನುಗಾರರಿಗೆ ಹೆಚ್ಚು ನಷ್ಟ ಉಂಟು ಮಾಡುತ್ತಿವೆ   

ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಕುಸಿತ ಆನೆ ಮೀನುಗಳ ಹಾವಳಿ ಹೆಚ್ಚಳ ಮೀನಿನ ಕೃಷಿಗೆ ಭಾರಿ ಹಿನ್ನಡೆ

ಮೀನಿನ ಬಿತ್ತನೆ ಕುಂಠಿತ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿವೇಕ ಎಸ್‌ ‘ತಾಲ್ಲೂಕಿನ 18 ಕೆರೆಗಳಲ್ಲಿ ಮೀನು ಸಾಕಣೆ ನಡೆಯುತ್ತಿತ್ತು. ಸದ್ಯ 7 ಕೆರೆಗಳಲ್ಲಿ 6.3 ಲಕ್ಷ ಮರಿಗಳನ್ನು ಸಾಕಣೆ ಮಾಡಲಾಗಿದೆ. 1500 ಮಂದಿ ಜಲ ಕೃಷಿಯಲ್ಲಿ ತೊಡಗಿದ್ದಾರೆ. ಜನವರಿ ನಂತರ ಕಾಟ್ಲ ಕಾಮನ್ ಮತ್ತು ಗ್ರಾಸ್ ಕಾರ್ಪ್ ತಳಿಗಳ ಬಿತ್ತನೆ ಕುಸಿದಿದೆ. ಕಳೆದ ವರ್ಷ ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯವೂ ಮೀನಿನ ಇಳುವರಿ ತಗ್ಗಲು ಕಾರಣವಾಗಿದೆ. ಒಳನಾಡಿನಲ್ಲಿ ಮೀನು ಮಾರಾಟ ತಗ್ಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT