ಮಂಗಳವಾರ, ಜೂನ್ 22, 2021
23 °C
ಜಿಲ್ಲೆಯ ಹೂ ಬೆಳೆಗಾರರ ಮೇಲೆ ಕೋವಿಡ್‌ ಲಾಕ್‌ಡೌನ್‌ನ ಗದಾಪ್ರಹಾರ

ಕೋವಿಡ್‌ ಲಾಕ್‌ಡೌನ್‌ಗೆ ಬಾಡಿದ ಹೂಗಳು! ಕಂಗೆಟ್ಟ ಕೃಷಿಕರು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಕಾರಣದಿಂದ ಹೇರಲಾಗಿರುವ ಲಾಕ್‌ಡೌನ್‌ ಸತತ 2ನೇ ವರ್ಷವೂ ಜಿಲ್ಲೆಯ ಹೂ ಬೆಳೆಗಾರರ ಮೇಲೆ ಗದಾಪ್ರಹಾರ ನಡೆಸಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದನ್ನು ಕಂಡು ಹೂ ಬೆಳೆಗಾರರು ಕೈಚೆಲ್ಲಿ ಕೂತಿದ್ದಾರೆ. ಮುಂದೇನು ಎಂಬ ಪ್ರಶ್ನೆ ಅವರನ್ನು ಬೃಹದಾಕಾರವಾಗಿ ಕಾಡುತ್ತಿದೆ.

ಗಿಡದಲ್ಲಿ ಅರಳಿದ ಹೂಗಳು ಬಾಡಿ ಉದುರುತ್ತಿರುವುದನ್ನು ಕಂಡರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಹ ಅನುಭವವಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಬಂದಿದೆ ಎಂದು ಪುಷ್ಪ ಕೃಷಿಕರು ಅಳಲು ತೋಡಿಕೊಳ್ಳುತ್ತಾರೆ.

ತಾಲ್ಲೂಕಿನ ಚೆನ್ನಿಪುರದಮೋಳೆ ಹೂವಿನ ಮಾರುಕಟ್ಟೆಗೆ ಹೆಸರುವಾಸಿ. ಬಹುತೇಕ ಜಿಲ್ಲೆಯ ಹೂವಿನ ಕೃಷಿಕರು ಇದೇ ಮಾರುಕಟ್ಟೆಯ ಮೂಲಕವೇ ವಹಿವಾಟು ನಡೆಸುತ್ತಿದ್ದರು. ಆದರೆ, ಈಗ ಈ ಮಾರುಕಟ್ಟೆ ಭಣಗುಡುತ್ತಿದೆ.

ಕಳೆದ ವರ್ಷವೂ ಇದೇ ರೀತಿ ಲಾಕ್‌ಡೌನ್‌ ಹೇರಲಾಗಿತ್ತು. ಶುಭ ಸಮಾರಂಭಗಳು ಸಾಲು ಸಾಲಾಗಿ ನಡೆಯುವ ಈ ವಸಂತ ಮಾಸದಲ್ಲೇ ಕೊರೊನಾ ಸೋಂಕು ಮತ್ತೆ ದಾಂಗುಡಿ ಇಟ್ಟಿದೆ. ಶುಭ ಸಮಾರಂಭಗಳ ಮೇಲೆ ಕಳೆದೆರಡು ತಿಂಗಳುಗಳಿಂದಲೂ ನಿಯಂತ್ರಣವಿದ್ದು, ಇದೀಗ ಸಂ‍ಪೂರ್ಣ ಇಲ್ಲವಾಗಿದೆ. ದೇವಸ್ಥಾಗಳೂ ಭಕ್ತರ ದರ್ಶನದಿಂದ ದೂರ ಉಳಿದಿವೆ. ಉತ್ಸವಗಳೂ ನಡೆಯದೇ ಹೂವಿಗೆ ಬೇಡಿಕೆಯೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ.

ಕೊನೆಗೆ ಮೃತಪಟ್ಟವರ ಪಾರ್ಥಿವ ಶರೀರದ ಮೇಲೆ ಹೂವನಿರಿಸಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮೃತಪಟ್ಟವರ ಅಂತಿಮ ದರ್ಶನಕ್ಕೂ ಜನರು ಹೋಗುತ್ತಿಲ್ಲ. ಹೂವಿಗೆ ದೇವರ ಮುಡಿ ಇರಲಿ, ಕನಿಷ್ಠ ಮೃತಪಟ್ಟವರ ಶರೀರದ ಮೇಲೆಯೂ ಸ್ಥಾನ ಸಿಗುತ್ತಿಲ್ಲ. ಹೂವುಗಳು ಗಿಡದಲ್ಲೇ ಬಾಡಿ, ಬೀಳುತ್ತಿವೆ.

ಕಳೆದೊಂದು ವರ್ಷದಿಂದ ಇಲ್ಲಿಯವರೆಗೆ ಕೊಳ್ಳೇಗಾಲ ಭಾಗದಲ್ಲಿ ಬೆಳೆಯುತ್ತಿದ್ದ ಅಲಂಕಾರಿಕ ಹೂ ಜರ್‌ಬಾರ ಈ ಬಾರಿ ಕಡಿಮೆಯಾಗಿದೆ. ಸುಮಾರು ಶೇ 30ರಿಂದ 40ರಷ್ಟು ಮಂದಿ ಈ ಕೃಷಿಯಿಂದ ವಿಮುಖರಾಗಿದ್ದಾರೆ. ಇದರ ನಿರ್ವಹಣೆಗೆ ಹೆಚ್ಚಿನ ಹಣ ಬೇಕಿರುವುದರಿಂದ ಒಂದು ತಿಂಗಳು ಹೂಗಳು ಮಾರಾಟವಾಗದಿದ್ದರೆ ನಿರ್ವಹಣೆ ಕಷ್ಟವಾಗುತ್ತದೆ. ಇದರಿಂದ ಅನಿವಾರ್ಯವಾಗಿ ಇವರು ಈ ಬೇಸಾಯವನ್ನು ಕೈಬಿಡಬೇಕಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಸುಂದರ್, ‘ಲಕ್ಷಾಂತರ ರೂಪಾಯಿ ಹಣ ಈ  ಹೂವಿನ ಬೇಸಾಯಕ್ಕೆ ಬೇಕು. ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಇದರ ಮಾರಾಟವಾಗುತ್ತಿತ್ತು. ಅಲಂಕಾರಕ್ಕಾಗಿ ಬಳಸುವ ಈ ಹೂವಿಗೆ ಕಳೆದೊಂದು ವರ್ಷದಿಂದ ಬೇಡಿಕೆಯೇ ಇಲ್ಲವಾಗಿದೆ. ಸದ್ಯ, ನಮ್ಮೂರಿನಲ್ಲಿ 5 ಮಂದಿ ಈ ಬೇಸಾಯ ಮಾಡುತ್ತಿದ್ದಾರೆ’ ಎಂದು ತಿಳಿಸಿದರು,.

ಈಗಾಗಲೇ ಕೊಳ್ಳೇಗಾಲ ತಾಲ್ಲೂಕಿನ ಕೊತ್ತನೂರು, ಕಾಮಗೆರೆ, ಕುರುಬನಕಟ್ಟೆ, ಆಮಕೆರೆ, ತಿಮ್ಮರಾಜಿಪುರ ಇಲ್ಲೆಲ್ಲ ಒಂದು ವರ್ಷದಿಂದ ಈ ಬೆಳೆ ನಶಿಸಿದೆ. ಪಾಳ್ಯ ಗ್ರಾಮದಲ್ಲಿ 4 ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಈ ಹೂವಿನ ಬಿತ್ತನೆಯನ್ನು ಪುಣೆಯಿಂದ ತರಬೇಕು.  ಒಂದು ಎಕರೆಗೆ 25 ಸಾವಿರ ಪೈರು ಬೇಕು. 16ರಿಂದ 17 ಲಕ್ಷ 2 ಎಕರೆಗೆ ಖರ್ಚಾಗುತ್ತದೆ. ಇಷ್ಟು ಹಣ ವ್ಯಯಿಸಿ ನಷ್ಟವಾದರೆ ಬೆಳೆಗಾರರ ಗತಿ ಏನು ಎಂದು ಸುಂದರ್ ಪ್ರಶ್ನಿಸುತ್ತಾರೆ.

ಸುಮಾರು 400ಕ್ಕೂ ಅಧಿಕ ಮಂದಿ ಹೂ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ. ಕನಕಾಂಬರ, ಮಲ್ಲಿಗೆ, ಕಾಕಡ ಮೊದಲಾದ ಹೂಗಳನ್ನು ಇವರು ಬೆಳೆಯುತ್ತಿದ್ದಾರೆ. ಇವೆಲ್ಲವೂ ಬೆಂಗಳೂರಿಗೆ ಹೋಗುತ್ತಿತ್ತು. ಆದರೆ, ಈ ಬಾರಿ ಇವರೆಲ್ಲ ಅತೀವ ನಷ್ಟಕ್ಕೆ ಗುರಿಯಾಗಿದ್ದಾರೆ.

ಗಿಡದಲ್ಲೇ ಉದುರುತ್ತಿವೆ ಚೆಂಡು ಹೂ

ಕಾರ್ಖಾನೆ ನಂಬಿದ ಚೆಂಡು ಹೂ ಬೆಳೆಗಾರರಿಗೆ ನಷ್ಟವಾಗಿಲ್ಲದೇ ಹೋದರೂ ಕಾರ್ಖಾನೆಗಾಗಿ ಬೆಳೆಯದ ಹೂ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ.

‘₹ 4,500 ನೀಡಿ ಬೀಜ ತರಿಸಿ ಹಾಕಿದೆ. ಗೊಬ್ಬರ ಹಾಕಿ, ಕ್ರಿಮಿನಾಶಕ ಹಾಕಿ, ಒಂದೂವರೆ ಎಕರೆಯಷ್ಟು ಪ್ರದೇಶದಲ್ಲಿ ಒಳ್ಳೆಯ ಚೆಂಡು ಹೂ ಅರಳಿದೆ. ಲಾಕ್‌ಡೌನ್‌ಗೂ  ಮುನ್ನ ಚೆನ್ನಿಪುರದ ಮೋಳೆ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದೆ. ಈಗ ಇದು ನಿಂತಿದೆ’ ಎಂದು ಜ್ಯೋತಿಗೌಡನಪುರದ ಜಯಪ್ಪ ಹಾಗೂ ಸಂಪತ್‌ಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.

‘ಒಂದು ಎಕರೆ ಚೆಂಡು ಹೂ ಹಾಕಿದ್ದೆ. ತಿ.ನರಸೀಪುರಕ್ಕೆ ತೆಗೆದಕೊಂಡು ಹೋಗಿ ಮಾರಾಟ ಮಾಡುತ್ತಿದ್ದೆ. ಆದರೆ, ಈಗ ಲಾಕ್‌ಡೌನ್‌ನಿಂದ ಗಿಡದಲ್ಲೇ ಅರಳಿದ ಹೂಗಳು ಉದುರುತ್ತಿವೆ. ಸುಮಾರು ₹ 30 ಸಾವಿರಕ್ಕೂ ಹೆಚ್ಚು ಹಣ ನಷ್ಟವಾಗಿದೆ’ ಎಂದು ಚಾಮರಾಜನಗರ ತಾಲ್ಲೂಕಿನ ಮಸಗಾಪುರ ಗ್ರಾಮದ ಕುಮಾರ್ ಅಳಲು ತೋಡಿಕೊಂಡರು.

ಕಾರ್ಖಾನೆಯನ್ನು ನೆಚ್ಚಿಕೊಂಡು ಚೆಂಡು ಹೂ ಬೆಳೆದ ರೈತರು ತುಸು ಉಸಿರಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕು ಸೇರಿದಂತೆ ಹಲವೆಡೆ ಚೆಂಡು ಹೂ ಬೆಳೆಗಾರರು ಎವಿಟಿ ಥಾಮಸ್ ಕಾರ್ಖಾನೆ ಸೇರಿದಂತೆ ಇನ್ನಿತರ ಕಾರ್ಖಾನೆಗಳಿಗೆ ಹೂವನ್ನು ಸುಗಂಧದ್ರವ್ಯಕ್ಕಾಗಿ ಸರಬರಾಜು ಮಾಡುತ್ತಿದ್ದಾರೆ. ಇವರಿಗೆ ಸದ್ಯ ನಷ್ಟವಾಗಿಲ್ಲ.  2,500 ಎಕರೆಯಷ್ಟು ‍ಪ್ರದೇಶದಲ್ಲಿ ಈ ಕೃಷಿ ಇದ್ದು, ಇವರಿಗೆ ಲಾಕ್‌ಡೌನ್ ಪರಿಣಾಮ ತಟ್ಟಿಲ್ಲ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು