ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

ಮಧ್ಯಸ್ಥಿಕೆ ವಹಿಸಿ ಮನವೊಲಿಸುವಲ್ಲಿ ಯಶಸ್ವಿಯಾದ ಶಾಸಕ ಕೃಷ್ಣಮೂರ್ತಿ
Published 30 ಜೂನ್ 2023, 15:30 IST
Last Updated 30 ಜೂನ್ 2023, 15:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೆರೆ, ಕಾಲುವೆಗಳ ಒತ್ತುವರಿ ತೆರವು ಮಾಡಬೇಕು ಎಂದು ತಾಲ್ಲೂಕು ಗುಂಡಾಲ್ ಜಲಾಶಯದ ಹಳೇ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದವರು ಕಳೆದ 11 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮಧ್ಯಸ್ಥಿಕೆ ವಹಿಸಿ ಭರವಸೆ ನೀಡಿದ ಪರಿಣಾಮ ಗುರುವಾರ ಮೊಟಕುಗೊಳಿಸಿದರು.

ನಗರದ ಕಾವೇರಿ ನೀರಾವರಿ ನಿಗಮ ಇಲಾಖೆಯ ಮುಂಭಾಗದಲ್ಲಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ರೈತರನ್ನು ಮನವೊಲಿಸಿ ಪ್ರತಿಭಟನೆ ಕೈ ಬಿಡಿಸುವಲ್ಲಿ ಯಶಸ್ವಿಯಾದರು.

ಬಳಿಕ ಮಾತನಾಡಿದ ಶಾಸಕರು, ‘ರಾಜ್ಯಾದ್ಯಂತ ಪ್ರತಿಯೊಂದು ತಾಲ್ಲೂಕಿನಲ್ಲೂ ಸಹ ಕೆರೆಗಳ ಒತ್ತುವರಿ ಸಂಖ್ಯೆ ಹೆಚ್ಚಾಗಿದೆ. ಇದು ನಿಲ್ಲಬೇಕು. ನಮ್ಮ ರೈತರು ಕೆರೆಗಳ ಉಳಿವಿಗಾಗಿ ಕಳೆದ 11 ದಿನಗಳಿಂದಲೂ ಅಹೋರಾತ್ರಿ ಧರಣಿ ಮಾಡಿದ್ದಾರೆ. ಈಗಾಗಲೇ ಚಿಕ್ಕರಂಗನಾಥನಕೆರೆ ಹಾಗೂ ಕೊಂಗಳಕೆರೆಗಳು ಮೇಲ್ನೋಟಕ್ಕೆ ಒತ್ತುವರಿಯಾಗಿರುವುದು ಸಾಬೀತಾಗಿದೆ. ಹಾಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈಗಾಗಲೇ ಒತ್ತುವರಿ ತೆರವು ಮಾಡಿಸುವಲ್ಲಿ ಮುಂದಾಗಿದ್ದಾರೆ. ನಮ್ಮ ರೈತರು ಎಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಹೇಳುತ್ತಾರೋ ಅಲ್ಲಿ ಕಬಿನಿ ಇಲಾಖೆಯವರು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು’ ಎಂದರು

ಇಷ್ಟರಲ್ಲಿಯೇ ತಾಲ್ಲೂಕು ಸಮಸ್ಯೆ ಬಗೆಹರಿಸಲು ಕರೆದಿರುವ ಕೆಡಿಪಿ ಸಭೆಯಲ್ಲಿ ಈ ಸಮಸ್ಯೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸತ್ಯಾಗ್ರಹ ಹೂಡಿದ್ದ ರೈತರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಹನೂರು ಶಾಸಕ ಮಂಜುನಾಥ್ ಅವರಿಗೆ ಕರೆ ಮಾಡಿದ ಶಾಸಕರು, ‘ಈ ಸಮಸ್ಯೆ ನಮ್ಮ ಎರಡು ತಾಲ್ಲೂಕು ಸಂಬಂಧ ಪಡುವುದರಿಂದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಇವರ ಬೇಡಿಕೆ ಈಡೇರಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸೋಣ. ನಾನು ಧರಣಿ ನಿರತರ ಹತ್ತಿರ ಮಾತನಾಡಿ ನಮ್ಮಿಬ್ಬರ ಪರವಾಗಿ ಭರವಸೆ ಕೊಟ್ಟಿದ್ದೇನೆ. ಇವರ ಭರವಸೆ ಈಡೇರಲು ರೈತರ ಪರವಾಗಿ ಕ್ರಮಕೈಗೊಳ್ಳಲು ಮುಂದಾಗೋಣ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್ ಅವರು ನನ್ನ ಸಂಪೂರ್ಣ ಬೆಂಬಲವಿದೆ ಎಂದು ದೂರವಾಣಿಯಲ್ಲಿ ತಿಳಿಸಿದರು.

ಇಬ್ಬರ ಶಾಸಕರ ಮಾತಿನ ಮೇಲೆ ಭರವಸೆ ಇಟ್ಟು ನಮ್ಮ ಚಳುವಳಿಯನ್ನು ಕೈಬಿಡುವುದಾಗಿ ಚಳುವಳಿ ನೇತೃತ್ವ ವಹಿಸಿದ್ದ ದಶರಥ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಪ್ರಧಾನ ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಸದಸ್ಯರು ಶಾಂತರಾಜು, ಮಂಜುನಾಥ್, ಮುಖಂಡರಾದ ಶಾಂತರಾಜು ಮುಡಿಗುಂಡ, ನಾಗರಾಜು, ಅನ್ಸರ್, ರಾಜಶೇಖರ ಮೂರ್ತಿ, ಅಶ್ವಥ್, ರೈತರಾದ ದಶರಥ, ನರಸಿಂಹ, ಷಣ್ಮುಗಸ್ವಾಮಿ, ರಾಮಕೃಷ್ಣ, ನಾಗರಾಜು ‌ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT