ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಯತ್ತ ಮುಖ ಮಾಡಿದ ಮಹಿಳೆಯರು

ಕೊರೊನಾ: ಉತ್ತುವಳ್ಳಿ, ತಿ.ನರಸೀಪುರದ ಗಾರ್ಮೆಂಟ್ಸ್‌ಗಳು ಬಂದ್‌
Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೊರೊನಾ ವೈರಸ್‌ ನಿಯಂತ್ರಿಸುವ ಉದ್ದೇಶದಿಂದ ಗಾರ್ಮೆಂಟ್ಸ್‌ಗಳನ್ನು ಮುಚ್ಚಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಈ ಭಾಗದ ಮಹಿಳೆಯರು ಈಗ ಕೂಲಿ ಕೆಲಸದತ್ತ ಮುಖ ಮಾಡಿದ್ದಾರೆ.

ಚಾಮರಾಜನಗರ ಬಳಿ ಇರುವ ಉತ್ತುವಳ್ಳಿ ಹಾಗೂ ತಿ.ನರಸೀಪುರದ ಖಾಸಗಿ ಗಾರ್ಮೆಂಟ್ಸ್‌ಗಳಿಗೆ ಸಂತೇಮರಹಳ್ಳಿ ಹೋಬಳಿಗೆ ಸೇರಿದ ಗ್ರಾಮಗಳ ಮಹಿಳೆಯರು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು.ಏಪ್ರಿಲ್ 14ರವರೆಗೂ ದೇಶದಾದ್ಯಂತ ದಿಗ್ಬಂಧನ ಹೇರಿರುವುದರಿಂದ ಸದ್ಯಕ್ಕೆ ಇವರಿಗೆ ಕೆಲಸ ಇಲ್ಲದಂತೆ ಆಗಿದೆ. ದಿಗ್ಬಂಧನ ಇನ್ನೆಷ್ಟು ದಿನ ಇರುವುದೋ, ಗಾರ್ಮೆಂಟ್ಸ್‌ ಮತ್ತೆ ಯಾವಾಗ ತೆರೆಯುವುದೋ ಎಂಬ ಆತಂಕದ ನಡುವೆ ಕೂಳಿನ ಸಂಪಾದನೆಗಾಗಿಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಾರೆ.

ಗಾರ್ಮೆಂಟ್ಸ್‌ಗಳಲ್ಲಿಮಹಿಳೆಯರು ಪ್ರತಿದಿನ ₹300ರಿಂದ ₹350ರವರೆಗೆ ದುಡಿಯುತ್ತಿದ್ದರು.ಇದೀಗ ಪ್ರತಿದಿನ ₹100ರಿಂದ ₹120 ಸಿಗುವ ಕೂಲಿಗೆ ತೆರಳುತ್ತಿದ್ದಾರೆ.ಕೂಲಿ ಕೆಲಸ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ ಕಾರಣ ಹೆಚ್ಚು ವೇತನ ನಿರೀಕ್ಷಿಸುವ ಹಾಗಿಲ್ಲ. ಬೇಸಿಗೆ ಇರುವುದರಿಂದ ಜಮೀನುಗಳಲ್ಲಿ ವ್ಯವಸಾಯವಿಲ್ಲದೇ ಕೆಲವು ಮಹಿಳೆಯರಿಗೆ ಕೂಲಿ ಕೆಲಸವು ಸಿಗುತ್ತಿಲ್ಲ.

‘ಟೊಮೆಟೊ ಬಿಡಿಸುವುದು, ಬೀನ್ಸ್ ಬಿಡಿಸುವುದು, ಕಳೆ ಕೀಳುವುದು, ಕೆಲವು ಕಡೆಗಳಲ್ಲಿ ಹೂ ಬಿಡಿಸುವುದು ಸೇರಿದಂತೆ ಕೂಲಿ ಕೆಲಸ ಸಿಗುತ್ತಿದೆ. ಬೇಸಿಗೆ ಕಾಲವಾಗಿರುವುದರಿಂದ ಹೆಚ್ಚಿನ ಕೂಲಿ ಕೆಲಸ ಸಿಗುತ್ತಿಲ್ಲ. ಮಳೆ ಬಿದ್ದಾಗ ಬಿತ್ತನೆ ಸೇರಿದಂತೆ ಕೂಲಿ ಕೆಲಸ ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಕೂಲಿಗಾಗಿ ತೆರಳಬೇಕಾಗಿದೆ’ ಎಂದು ಕೆಲವು ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ.

ಮಹಿಳಾ ಸ್ವಸಹಾಯ ಸಂಘಗಳ ಸಾಲವನ್ನು ಕಟ್ಟಲು ಬಿಡುವು ಮಾಡಿಕೊಟ್ಟಿದ್ದಾರೆ. ಆದರೆ, ಮನೆಯ ದಿನಬಳಕೆ ವಸ್ತುಗಳನ್ನು ಖರೀದಿಸಲು ಹಣ ಬೇಕಾಗಿದೆ. ಹೀಗಾಗಿ ಬಂದಷ್ಟು ಕೂಲಿಗಾಗಿ ಹೋಗಬೇಕಾಗಿದೆ ಎಂದು ಹೆಸರು ಹೇಳಲು ಬಯಸದ ಮಹಿಳೆಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT