ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಬಾಲಕಿ ಅನುಮಾನಾಸ್ಪದ ಸಾವು: ಪೊಲೀಸರ ಗಮನಕ್ಕೆ ತಾರದೇ ಅಂತ್ಯಕ್ರಿಯೆ

10 ದಿನಗಳ ಹಿಂದೆ ನಡೆದ ಘಟನೆ, ಪೊಲೀಸರ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ
Last Updated 29 ಏಪ್ರಿಲ್ 2022, 2:27 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕಾಗಲವಾಡಿ ಮೋಳೆಯಲ್ಲಿ 16 ವರ್ಷದ ಬಾಲಕಿಯೊಬ್ಬಳು ಅನುಮಾಸ್ಪದವಾಗಿ ಮೃತಪಟ್ಟಿರುವ ಘಟನೆ 10 ದಿನಗಳ ಹಿಂದೆ ನಡೆದಿದೆ.

ಸುಮಿತ್ರಾ (16) ಎಂಬ ಬಾಲಕಿ ಮೃತಪಟ್ಟಿದ್ದು, ಆಕೆಯ ಪೋಷಕರು ಹಾಗೂ ಊರಿನವರು ಪೊಲೀಸರ ಗಮನಕ್ಕೆ ತರದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಪ್ರಕರಣ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಊರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಬಾಲಕಿಯ ತಂದೆ ಗೋವಿಂದ ಶೆಟ್ಟಿ ಹಾಗೂ ತಾಯಿ ಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಮಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಹಾಗೂ ಊರಿನ ಮುಖಂಡರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಆದರೆ, ಸುಮಿತ್ರಾಳ ಮೃತದೇಹವನ್ನು ಸುಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

‘ಊರಿನವರೇ ಆದ ಸೋಮೇಶ್‌ ಎಂಬುವವರನ್ನು ಸುಮಿತ್ರಾ ಪ್ರೀತಿಸಿದ್ದಳು. ಇದು ಹುಡುಗಿಯ ಪೋಷಕರಿಗೆ ಇಷ್ಟ ಇರಲಿಲ್ಲ. ವಿರೋಧ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ನಮಗೆ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಯತ್ನ: ಹುಡುಗಿ ಸಾವಿಗೆ ಸೋಮೇಶ್‌ ಕಾರಣ ಎಂಬ ಕಾರಣಕ್ಕೆ ಊರಿನಲ್ಲಿ ಯಜಮಾನರು ಸೋಮೇಶ್‌ ಕುಟುಂಬಕ್ಕೆ ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು, ಅವರು ಯಳಂದೂರು ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಅವರು ಸದ್ಯ ಚಾಮರಾಜನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು, ‘ನಮಗೆ ಬಂದ ಮಾಹಿತಿ ಪ್ರಕಾರ, ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಹಾಗೂ ಊರಿನ ಮುಖಂಡರು ನಮ್ಮ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ ಮಾಡಿರುವುದರಿಂದ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ಯುವಕನ ಆತ್ಮಹತ್ಯೆ ಯತ್ನದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ, ‘ಆತ್ಮಹತ್ಯೆ ಯತ್ನದ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ಬಂದರೆ ಕ್ರಮ ವಹಿಸುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT