ಬಂಡೀಪುರ: ಮಳೆಗೆ ಕೆರೆಕಟ್ಟೆಗಳಿಗೆ ಕಳೆ–13 ವಲಯಗಳ ಜಲಮೂಲಗಳಲ್ಲಿ ಭರಪೂರ ನೀರು

ಗುಂಡ್ಲುಪೇಟೆ: ತಾಲ್ಲೂಕು ಸೇರಿದಂತೆ ಕೇರಳ ಮತ್ತು ತಮಿಳುನಾಡಿನ ಗಡಿಭಾಗದ ಕಾಡಂಚಿನ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರ ಪರಿಣಾಮ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಹುತೇಕ ಕೆರೆ ಕಟ್ಟೆಗಳು ತುಂಬಿವೆ. ಇದರಿಂದಾಗಿ ಮುಂದಿನ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಉದ್ಭವಿಸದು ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮದುಮಲೆ, ಕೇರಳದ ವಯನಾಡು ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ. ಮೂರ್ನಾಲ್ಕು ವಾರಗಳಿಂದ ಈ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿದೆ. ಇದರಿಂದ ಅರಣ್ಯದಲ್ಲಿರುವ ಜಲಮೂಲಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ 350 ಕೆರೆಗಳಿವೆ. ಮಳೆಗಾಲದಲ್ಲಿ ಜಲಮೂಲಗಳಿಂದ ತುಂಬುವ ಕೆರೆ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುತ್ತದೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಬತ್ತಿ ಹೋದ ಸಂದರ್ಭದಲ್ಲಿ ಸೋಲಾರ್ ಪಂಪ್‌ಗಳ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತದೆ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
ಉತ್ತಮವಾಗಿ ಮಳೆಯಾಗಿರುವುದರಿಂದ ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳಿಕಟ್ಟೆ, ತಾವರಗಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರುಕಟ್ಟೆ, ದೇವರ ಮಾಡು, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿ ಕೆರೆ ಕೊಳಚೆಕಟ್ಟೆ, ಹಗ್ಗದಹಳ್ಳದ ಕಟ್ಟೆ ಮುಂತಾದ ಕೆರೆಗಳಿಗೆ ನೀರು ತುಂಬಿದೆ.
ಮೂರ್ನಾಲ್ಕು ದಿನಗಳಲ್ಲಿ ಗೋಪಾಲಸ್ವಾಮಿ ಬೆಟ್ಟ, ಬೊಳಗುಡ್ಡ, ಟೈಗರ್ ರೋಡ್ ಭಾಗದಲ್ಲಿ ಜೋರು ಮಳೆಯಾಗಿ ಕೆರೆಗಳಿಗೆ ಹೆಚ್ಚಿನ ನೀರು ಹರಿದು ಬಂದಿದೆ.
‘ಎಲ್ಲ ವಲಯಗಳಲ್ಲಿ ಮಳೆಯಾಗಿರುವುದರಿಂದ ಹಸಿರು ಉತ್ತಮವಾಗಿದ್ದು, ಮೇವು ಸಮೃದ್ಧವಾಗಿದೆ. ನುಗು, ಯಡಿಯಾಲ, ಓಂಕಾರ, ಮೊಳೆಯೂರು ವಲಯಗಳ ಭಾಗದಲ್ಲಿರುವ ಕೆರೆಗಳೂ ತುಂಬಿವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಡಿನಲ್ಲಿ ಮಳೆ ಕಡಿಮೆ ಆಗಿ ಕೆರೆ ಕಟ್ಟೆಗಳು ತುಂಬದಿದ್ದರೆ ಕಾಡಂಚಿನ ಗ್ರಾಮಗಳ ಜಮೀನು ಮತ್ತು ಗ್ರಾಮಗಳಿಗೆ ದಾಳಿ ಮಾಡುತ್ತವೆ. ಇದರಿಂದಾಗಿ ಕಾಡಂಚಿನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಸಂಘರ್ಷವೂ ಏರ್ಪಡುತ್ತದೆ. ಮುಂದಿನ ಬೇಸಿಗೆಯಲ್ಲಿ ಈ ಪರಿಸ್ಥಿತಿ ಉದ್ಭವಿಸದು ಎಂದು ಹೇಳುತ್ತಾರೆ ಅಧಿಕಾರಿಗಳು.
‘ಬೇಸಿಗೆಯಲ್ಲಿ ಸಮಸ್ಯೆಯಾಗದು’
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರು, ‘ಅರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಹಸಿರು ಮೈದಳೆದು ನಿಂತಿದೆ. ಸಫಾರಿ ವಲಯದಲ್ಲೂ ಹೆಚ್ಚು ಪ್ರಾಣಿಗಳು ಕಾಣ ಸಿಗುತ್ತಿವೆ. ಇದರಿಂದಾಗಿ ಸಫಾರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಮಳೆಯ ಕಾರಣಕ್ಕೆ ಎಲ್ಲ ವಲಯದಲ್ಲಿರುವ ದೊಡ್ಡ ಕೆರೆಗಳು ಭರ್ತಿಯಾಗಿವೆ. ಮುಂದಿನ ಬೇಸಿಗೆಯಲ್ಲಿ ಪ್ರಾಣಿಗಳಿಗೆ ಸಮಸ್ಯೆಯಾಗದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.