ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ದುರಂತ, ಸರ್ಕಾರದಿಂದಲೇ ತಪ್ಪಿತಸ್ಥರ ರಕ್ಷಣೆ: ಆರ್‌.ಧ್ರುವನಾರಾಯಣ ಆರೋಪ

Last Updated 10 ಜೂನ್ 2021, 11:10 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2ರಂದು ಸಂಭವಿಸಿದ ಆಮ್ಲಜನಕ ದುರಂತ ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ತಪ್ಪಿತಸ್ಥರಿಗೆ ರಕ್ಷಣೆ ನೀಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಗುರುವಾರ ಆರೋಪಿಸಿದರು.

ಸಂತೇಮರಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ದುರಂತಕ್ಕೆ ಸರ್ಕಾರವೇ ನೇರ ಕಾರಣ. ಅದು ತಪ್ಪಿತಸ್ಥ ಪರ ನಿಂತಿದೆ. ಪ್ರಭಾವಿಗಳಿಂದಲೂ ಅವರಿಗೆ ರಕ್ಷಣೆ ಸಿಗುತ್ತಿದೆ. ಆದರೆ, ಇದು ತಾತ್ಕಾಲಿಕ ರಕ್ಷಣೆ ಅಷ್ಟೆ. 36 ಜನರ ಸಾವಿಗೆ ಯಾರು ಕಾರಣ ಎಂದು ಹೈಕೋರ್ಟ್‌ ನೇಮಿಸಿರುವ ಸಮಿತಿ ಈಗಾಗಲೇ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಅಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿಗಳು ಖಂಡಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದರು.

ಯಾರೆಲ್ಲ ತಪ್ಪಿತಸ್ಥರು ಎಂದು ಪತ್ರಕರ್ತರು ಕೇಳಿದ್ದಕ್ಕೆ, ‘ಅದನ್ನು ನನ್ನಿಂದ ಯಾಕೆ ಹೇಳಿಸ್ತೀರಾ? ತನಿಖಾ ಸಮಿತಿಯು ಈಗಾಗಲೇ ಪಟ್ಟಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಮಧ್ಯಪ್ರವೇಶಿಸುವುದು ಅಷ್ಟು ಸರಿಯಾಗುವುದಿಲ್ಲ’ ಎಂದರು.

ಮನುಷ್ವತ್ಯವೇ ಇಲ್ಲ: ‘ಘಟನೆ ನಡೆದ ಬಳಿಕ ಮುಖ್ಯಮಂತ್ರಿ ಅವರು ಸ್ವತಃ ಚಾಮರಾಜನಗರಕ್ಕೆ ಬಂದು ನೊಂದವರಿಗೆ ಪರಿಹಾರ ವಿತರಿಸಿ ಸಾಂತ್ವನ ಹೇಳಬೇಕಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕಿತ್ತು. 36 ಜನರು ಮೃತಪಟ್ಟಿದ್ದರೂ ಇವರಿಗೆ ಮಾನವೀಯತೆಯೇ ಇಲ್ಲ. ಸರ್ಕಾರದಲ್ಲಿ ಯಾರಿಗೂ ಮನುಷ್ವತ್ವವೇ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

ಬೇರೆಯವರ ಪಾತ್ರ ಇಲ್ಲ: ‘ಜಿಲ್ಲೆಯ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಸಂಬಂಧ ಜಿಲ್ಲಾಡಳಿತ ಹಾಗೂ ಮೈಸೂರಿನ ಸದರ್ನ್‌ ಮತ್ತು ಪದಕಿ ಏಜೆನ್ಸಿಗಳ ನಡುವೆ ಒಪ್ಪಂದ ಆಗಿದೆ. ಅಲ್ಲಿಂದ ಆಮ್ಲಜನಕ ತರಿಸಿಕೊಳ್ಳಬೇಕಾಗಿದ್ದು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ನೋಡೆಲ್‌ ಅಧಿಕಾರಿಗಳ ಜವಾಬ್ದಾರಿ. ನನ್ನ, ಪ್ರಕಾರ ಇದರಲ್ಲಿ ಬೇರೆಯವರ ಪಾತ್ರ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ದುರಂತ ನಡೆದ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕ್ರಮವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದರು.
ಅವರ ಪರ ವಕಾಲತ್ತೂ ವಹಿಸಿದ್ದರು.ಆದರೆ, ಈಗ ತಮ್ಮ ನಿಲುವು ಬದಲಿಸುವುದು ಸರಿಯಲ್ಲ. ಈಗ ಸಿಂಧೂರಿ ಬಗ್ಗೆ ಆರೋಪ ಮಾಡುತ್ತಿರುವ ಪ್ರತಾಪ್‌ ಅವರಿಗೆ ಇದನ್ನು ಅವತ್ತೇ ಹೇಳಬಹುದಿತ್ತಲ್ಲವೇ' ಎಂದು ಧ್ರುವನಾರಾಯಣ ಪ್ರಶ್ನಿಸಿದರು.

'ತನಿಖಾ ಆಯೋಗದ ಕಚೇರಿ ಮೈಸೂರಿನಲ್ಲಿ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ'

ಆಮ್ಲಜನಕ ದುರಂತ ಪ್ರಕರಣದ ತನಿಖೆಗೆ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ ನೇತೃತ್ವದ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದಕ್ಕೆ ಧ್ರುವನಾರಾಯಣ ಅವರು ವಿರೋಧ ವ್ಯಕ್ತಪಡಿಸಿದರು.

‘ಹೈಕೋರ್ಟ್‌ ತನಿಖೆ ನಡೆಸುತ್ತಿರುವಾಗ ಮತ್ತೊಂದು ತನಿಖೆ ಅಗತ್ಯವಿಲ್ಲ. ಸರ್ಕಾರ ಈ ಆಯೋಗವನ್ನು ವಾಪಸ್‌ ಪಡೆಯಬೇಕು ಎಂಬುದು ನಮ್ಮ ಆಗ್ರಹ. ಘಟನೆ ನಡೆದಿರುವುದು ಚಾಮರಾಜನಗರದಲ್ಲಿ, ಆಯೋಗ ಕಚೇರಿ ಮೈಸೂರಿನಲ್ಲಿ ತೆರೆಯಲಾಗಿದೆ. ಇದು ಇಡೀ ಪ್ರರಕಣವನ್ನು ಮುಚ್ಚಿಹಾಕುವ ತಂತ್ರ. ಸಂತ್ರಸ್ತರಿಗೆ ಮೈಸೂರಿಗೆ ಹೋಗಿ ದೂರು ಸಲ್ಲಿಸಲು ಸಾಧ್ಯವಿಲ್ಲ’ ಎಂದರು.

‘ರಾಜ್ಯದಲ್ಲಿ ಇದುವರೆಗೆ ನಡೆದಿರುವ ನ್ಯಾಯಾಂಗ ತನಿಖೆಗಳು ಹಳ್ಳ ಹಿಡಿದಿವೆ.ನೀಡಿರುವ ವರದಿಗಳು ದೂಳು ತಿನ್ನುತ್ತಿವೆ. ಈ ಪ್ರಕರಣವೂ ಅದೇ ಹಾದಿ ಹಿಡಿಯಲಿದೆ. ದುರಂತಕ್ಕೆ ಸರ್ಕಾರವೇ ಕಾರಣವಾಗಿರುವುದರಿಂದ ಪ್ರಕರಣ ಮುಚ್ಚಿ‌ಹಾಕುವ ಸಂಶಯ ಇದೆ’ ಎಂದು ಧ್ರುವನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT