ಸೋಮವಾರ, ಡಿಸೆಂಬರ್ 5, 2022
22 °C
ಗ್ರ್ಯಾನೈಟ್‌ ವ್ಯವಹಾರ; ಅನುಮತಿ ಇಲ್ಲದೆ ಗಣಿಗಾರಿಕೆ ನಡೆಸುತ್ತಿರುವ ಆರೋಪ ಮಾಡಿದ ಕಲಮೇಶ್‌

ಶಾಸಕ: ಪುಟ್ಟರಂಗಶೆಟ್ಟಿ ವಿರುದ್ಧ ₹9 ಕೋಟಿ ವಂಚನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯಲ್ಲಿ ನನ್ನಿಂದ ಕರಿ ಕಲ್ಲು ಕ್ವಾರಿ ಖರೀದಿಸಿ ಪೂರ್ಣ ಹಣ ಪಾವತಿಸದೆ ₹9 ಕೋಟಿ ವಂಚನೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಕರಿಕಲ್ಲು ಉದ್ಯಮಿ, ಗುಜರಾತ್‌ನ ಕಮಲೇಶ್‌ ಕುಮಾರ್‌ ಗೋಪಾಲ್‌ದಾಸ್‌ ಪಟೇಲ್‌ ಶನಿವಾರ ಆರೋಪಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಹಣದ ಬಗ್ಗೆ ವಿಚಾರಿಸಿದರೆ ಶಾಸಕರ ಅಳಿಯ ರಾಮಚಂದ್ರ, ಪಾಲುದಾರ ಶಾಂತಕುಮಾರ್‌ ಅವರು ಧಮಕಿ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ. ದೆಹಲಿ ಹೈಕೋರ್ಟ್‌ನ ತಡೆಯಾಜ್ಞೆ ಇದ್ದರೂ ಗಣಿಗಾರಿಕೆ ನಡೆಸಿದ್ದಾರೆ. ನಾನು ಶಾಸಕರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು, ವಿಧಾನಸಭಾ ಸಭಾಧ್ಯಕ್ಷರ ಅನುಮತಿ ಬೇಕು ಎಂದು ಹೇಳುತ್ತಿದ್ದಾರೆ. ರಾಮಚಂದ್ರ ಹಾಗೂ ಶಾಂತಕುಮಾರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ’ ಎಂದು ದೂರಿದರು. 

‘ಗುಜರಾತ್‌ ರಾಜ್‌ಕೋಟ್‌ನವನಾದ ನಾನು 2018ರ ಏಪ್ರಿಲ್‌ನಲ್ಲಿ ತೆರಕಣಾಂಬಿ ಗ್ರಾಮದ ಸರ್ವೆ ನಂಬರ್‌ 335/1, 226/4, 336/6ಮತ್ತು 339/1ರಲ್ಲಿ 4 ಎಕರೆ 33 ಗುಂಟೆಯಲ್ಲಿ ನಡೆಯುತ್ತಿದ್ದ ಕರಿಕಲ್ಲು ಕ್ವಾರಿಯನ್ನು ಗುಜರಾತ್‌ನವರಾದ ಹಿತೇಂದ್ರ ಜೋಶಿ ಅವರಿಂದ ಖರೀದಿಸಿದ್ದೆ.  ಅದರ ಜೊತೆಯಲ್ಲಿ ಇದಕ್ಕೆ ಹೊಂದಿಕೊಂಡಂತಹ ಸರ್ವೆ ನಂಬರ್‌ನ 337ನಲ್ಲಿ 4 ಎಕರೆ 1 ಗುಂಟೆ ಜಮೀನನ್ನು ಕ್ರಯದ ಕರಾರು ಒಪ್ಪಂದ  ಮಾಡಿಕೊಂಡು ಕಳೆದ ವರ್ಷದ ನವೆಂಬರ್‌ವರೆಗೆ ಗಣಿಗಾರಿಕೆ ನಡೆಸಿಕೊಂಡು ಬಂದಿದ್ದೆ’ ಎಂದರು.

‘ಆ ಮೇಲೆ ಕೆಲವರು ತೊಂದರೆ ಕೊಡಲು ಶುರುಮಾಡಿದ ನಂತರ, ಇದೇ ಉದ್ಯಮದಲ್ಲಿ ತೊಡಗಿರುವ ಶಾಸಕ ಪುಟ್ಟರಂಗಶೆಟ್ಟಿ ಅವರಿಂದ ಸಹಾಯ ಕೇಳಿದೆ. ಅವರು ಪರಿಹರಿಸುವ ಭರವಸೆ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಬಳಿಕ, ‘ನೀವು ಇಲ್ಲಿ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ಗಣಿಯನ್ನು ನನಗೆ ಕೊಡಿ’ ಎಂದು ಕೇಳಿದರು. ನಾನು ಒಪ್ಪಿಕೊಂಡು ₹12 ಕೋಟಿಗೆ ಮಾತಾಗಿತ್ತು. ಮಾರಾಟದ ಒಪ್ಪಂದವನ್ನೂ ಮಾಡಿಕೊಂಡಿದ್ದೆವು.  ಶಾಸಕರ ಖಾತೆಯಿಂದಲೇ ಒಂದು ಕೋಟಿ ಹಣವನ್ನು ನನ್ನ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಆ ಮೇಲೆ ಹಂತ ಹಂತವಾಗಿ  2.5 ಕೋಟಿ ನೀಡಿದ್ದು, ಒಟ್ಟಾರೆ ₹3.5 ಕೋಟಿ ಸಂದಾಯವಾಗಿದೆ’ ಎಂದರು. 

‘6 ತಿಂಗಳಲ್ಲಿ ನೋಂದಣಿ ಮಾಡಿಸುವುದಾಗಿ ತಿಳಿಸಿರುವ ಶಾಸಕರು ಹಾಗೂ ಉಳಿದ ಹಣವನ್ನು ಕೊಡುತ್ತಿಲ್ಲ. ಕೇಳಿದರೆ ಕೊಲೆ ಮಾಡುವುದಾಗಿ ಅವರ ಅಳಿಯ ರಾಮಚಂದ್ರ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಮೊಬೈಲ್‌ ಕರೆಯ ಮುದ್ರಿಕೆಗಳು ನನ್ನ ಬಳಿ ಇವೆ. ಸೆಪ್ಟೆಂಬರ್‌ ತಿಂಗಳಲ್ಲಿ ನಾನು ರಾಮಚಂದ್ರ ಹಾಗೂ ಶಾಂತಕುಮಾರ್‌ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಅದರ ಮರುದಿನವೇ ಶಾಂತಕುಮಾರ್‌ ನನ್ನ ಹಾಗೂ ಪತ್ನಿಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ’ ಎಂದು ಕಮಲೇಶ್‌ ಕುಮಾರ್‌ ದೂರಿದರು. 

ಕಮಲೇಶ್‌ ದೊಡ್ಡ ವಂಚಕ: ಪುಟ್ಟರಂಗಶೆಟ್ಟಿ

ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಶಾಸಕ ಪುಟ್ಟರಂಗಶೆಟ್ಟಿ, ‘ಕ್ವಾರಿ ಖರೀದಿಗೆ ಒಪ್ಪಂದ ಆಗಿರುವುದು ನಿಜ. ₹3.5 ಕೋಟಿ ಕೊಟ್ಟಿರುವುದೂ ನಿಜ. ಆದರೆ, ಕಮಲೇಶ್‌ ದೊಡ್ಡ ವಂಚಕ. ಹಿತೇಂದ್ರ ಜೋಶಿಗೂ ವಂಚನೆ ಮಾಡಿದ್ದಾರೆ. ಜಮೀನಿಗೆ ಖಾತೆಯೇ ಆಗಿಲ್ಲ. ಖಾತೆ ಮಾಡಿಕೊಟ್ಟರೆ ನಾನು ಹಣ ಕೊಡುವೆ. ನನ್ನ ಬಳಿಯೂ ದಾಖಲೆಗಳಿದ್ದು, ವಕೀಲರೊಂದಿಗೆ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.