ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಉದ್ಯಮಿ ಮಾಡಿರುವ ₹9 ಕೋಟಿ ವಂಚನೆ ಆರೋಪ ಸುಳ್ಳು: ಪುಟ್ಟರಂಗಶೆಟ್ಟಿ

ಬಿಜೆಪಿಯ ಕೆಲವು ಮುಖಂಡರ ಷಡ್ಯಂತ್ರ, ಖಾತೆ ಮಾಡಿಕೊಟ್ಟ ತಕ್ಷಣ ದುಡ್ಡುಪಾವತಿ–ಶಾಸಕ
Last Updated 22 ನವೆಂಬರ್ 2022, 7:19 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕು ತೆರಕಣಾಂಬಿಯಲ್ಲಿ ಕರಿಕಲ್ಲು ಕ್ವಾರಿ ಖರೀದಿಯಲ್ಲಿ ನಾನು ₹9 ಕೋಟಿ ವಂಚನೆ ಮಾಡಿದ್ದೇನೆ ಎಂದು ಗುಜರಾತ್‌ನ ಉದ್ಯಮಿ ಕಮಲೇಶ್‌ ಕುಮಾರ್‌ ಮಾಡಿರುವ ಆರೋಪ ಶುದ್ಧ ಸುಳ್ಳು. ಇದರ ಹಿಂದೆ ಬಿಜೆಪಿಯ ಕೆಲವು ಮುಖಂಡರ ಕುಮ್ಮಕ್ಕು ಇದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಹೇಳಿದರು.

ಗುಜರಾತ್‌ ರಾಜ್‌ಕೋಟ್‌ನ ಉದ್ಯಮಿ ಕಮಲೇಶ್‌ ಕುಮಾರ್‌ ಗೋಪಾಲ್‌ದಾಸ್‌ ಪಟೇಲ್‌ ಅವರು ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಶಾಸಕರು, ‘ಈಗಾಗಲೇ ₹3 ಕೋಟಿ ಪಾವತಿಸಿದ್ದೇನೆ. ಆ ಜಾಗ ಇನ್ನೂ ಅವರ ಹೆಸರಿಗೆ ನೋಂದಣಿಯಾಗಿಲ್ಲ. ಖಾತೆ ಮಾಡಿಕೊಟ್ಟರೆ ತಕ್ಷಣವೇ ಉಳಿದ ಹಣ ಪಾವತಿಸುತ್ತೇನೆ’ ಎಂದರು.

‘42 ವರ್ಷಗಳಿಂದ ಕರಿಕಲ್ಲು ವ್ಯವಹಾರ ಮಾಡಿಕೊಂಡು ಬಂದಿದ್ದೇನೆ. ಹಲವು ಗಣಿಗಳನ್ನು ನಿರ್ವಹಿಸಿದ್ದೇನೆ. ಈ ಉದ್ಯಮದಲ್ಲಿ ಪ್ರಾಮಾಣಿಕತೆ ಹಾಗೂ ವಿಶ್ವಾಸ ಅತ್ಯಂತ ಮುಖ್ಯ. ಆದರೆ, ಕಮಲೇಶ್‌ ಅವರು ಈ ಮೊದಲೇ ಅವರ ಹಲವು ಪಾಲುದಾರರಿಗೆ ವಂಚಿಸಿದ್ದಾರೆ. ಅವರಿಗೆ ಜಮೀನು ಕೊಟ್ಟ ಹಿತೇಂದ್ರ ಜೋಷಿ ಎಂಬುವವರಿಗೂ ವಂಚಿಸಿದ್ದಾರೆ. ಅಂತಹ ವ್ಯಕ್ತಿ ಈಗ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತೆರಕಣಾಂಬಿ ಗ್ರಾಮದ ಸರ್ವೆ ನಂಬರ್‌ 335/1, 336/4, 336/6 ಮತ್ತು 339/1 ಜಮೀನುಗಳ 4 ಎಕರೆ 33 ಗುಂಟೆ ಜಮೀನನ್ನು ಹಿತೇಂದ್ರ ಜೋಷಿ ಅವರಿಂದ ಕಮಲೇಶ್‌ ಅವರು ಕ್ರಯಕ್ಕೆ ಪಡೆದಿದ್ದು, ಆ ಜಮೀನನನ್ನು ಕಮಲೇಶ್‌ 2021ರ ನವೆಂಬರ್‌ 11ರಂದು ನನ್ನ ಹೆಸರಿಗೆ ಕ್ರಯದ ಕರಾರು ಪತ್ರ ಬರೆದು ಕೊಟ್ಟಿದ್ದಾರೆ. ಇದಕ್ಕೆ ₹3 ಕೋಟಿಯನ್ನೂ ಮುಂಗಡವಾಗಿ ನೀಡಿದ್ದೇನೆ. ಆ ಜಮೀನು ಇನ್ನೂ ಕಮಲೇಶ್‌ ಹೆಸರಿಗೆ ನೋಂದಣಿಯಾಗಿಲ್ಲ. ಅವರು ಖಾತೆಯನ್ನೂ ಮಾಡಿಸಿಕೊಂಡಿಲ್ಲ. ಆರು ತಿಂಗಳ ಒಳಗೆ ನೋಂದಣಿ ಮಾಡಿಕೊಟ್ಟ ನಂತರ ಉಳಿದ ₹3 ಕೋಟಿ ಹಣವನ್ನು ಕೊಡುವುದಾಗಿ ಕರಾರು ಪತ್ರದಲ್ಲಿ ನಮೂದಿಸಲಾಗಿದೆ. ಕಮಲೇಶ್‌ ಅವರು ಇದುವರೆಗೆ ಖಾತೆ ಮಾಡಿ ಕೊಟ್ಟಿಲ್ಲ’ ಎಂದರು.

‘ಇದೇ ಜಮೀನಿಗೆ ಹೊಂದಿಕೊಂಡಂತಿರುವ ಸರ್ವೆ 337ರಲ್ಲಿರುವ 4 ಎಕರೆ 01.08 ಗುಂಟೆ ಜಮೀನನ್ನು ನಾನು ಹಿತೇಂದ್ರ ಜೋಷಿ ಅವರಿಂದ ನೇರವಾಗಿ ಖರೀದಿ ಮಾಡಿದ್ದು, ಇದೇ ಜೂನ್‌ 23ರಂದು ನನ್ನ ಹೆಸರಿಗೆ ಖಾತೆ ಆಗಿದೆ. ಈ ಎಲ್ಲ ವ್ಯವಹಾರ ಮಾತುಕತೆಗಳು ಅವರ ಇಬ್ಬರ ಸಮ್ಮುಖದಲ್ಲಿ ನಡೆದಿದೆ. ಕರಾರು ಒಪ್ಪಂದದಂತೆ ಹಿತೇಂದ್ರ ಜೋಷಿ ಅವರಿಗೆ ನಾನು ಹಣ ಕೊಟ್ಟಿದ್ದೇನೆ. ಕಮಲೇಶ್‌ ಅವರು ಖಾತೆ ಮಾಡಿ ಕೊಡದೆ ನಾನು ಹೇಗೆ ದುಡ್ಡು ಕೊಡಲಿ‘ ಎಂದು ಪ್ರಶ್ನಿಸಿದರು.

ಗಣಿ ಉದ್ಯಮಿಗಳಾದ ಶ್ರೀನಾಥ್‌, ಶಾಂತಕುಮಾರ್‌, ಸೈಯಲ್‌ ಕಮೀಲ್‌ ಖಾನ್‌, ಆಲೂರು ಪ್ರದೀಪ್‌, ಪುಟ್ಟರಂಗಶೆಟ್ಟಿ ಅಳಿಯ ರಾಮಚಂದ್ರ ಇದ್ದರು.

‘ಮಾನನಷ್ಟ ಮೊಕದ್ದಮೆ ಹೂಡುವೆ’

‘ನಾನು ಅಕ್ರಮ ಗಣಿಗಾರಿಕೆ ನಡೆಸಿಲ್ಲ. ನಾನಾಗಲಿ, ನನ್ನ ಅಳಿಯ ರಾಮಚಂದ್ರನಾಗಲಿ, ಶಾಂತಕುಮಾರ್‌ ಅವರಾಗಲಿ ಕಮಲೇಶ್‌ಗೆ ಬೆದರಿಕೆ ಹಾಕಿಲ್ಲ. ಅವರ ಆರೋಪದಲ್ಲಿ ಹುರುಳಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಳಂಕ ತರುವ ಉದ್ದೇಶದಿಂದ ಕೆಲವು ಬಿಜೆಪಿ ಮುಖಂಡರ ಬೆಂಬಲದಿಂದ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸುತ್ತೇನೆ’ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT