ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯಕ್ಕೆ ಚಿಕಿತ್ಸೆಯ ಆಸೆ ತೋರಿಸಿ ಪೋಷಕರಿಗೆ ವಂಚನೆ?

ಆಯುರ್ವೇದ ವೈದ್ಯರೆಂದು ಹೇಳಿಕೊಂಡು ಸಾವಿರಾರು ರೂಪಾಯಿ ವಸೂಲಿ ಮಾಡಿದ ಆರೋಪ
Last Updated 18 ಮಾರ್ಚ್ 2021, 14:39 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅಂಗವಿಕಲ ಮಕ್ಕಳಿಗೆ ಆಯುರ್ವೇದ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣ ಮಾಡಲಾಗುತ್ತದೆಎಂದು ಹೇಳಿಕೊಂಡು ತಂಡವೊಂದು ತಾಲ್ಲೂಕಿನ ವಿವಿಧ ಊರುಗಳಿಗೆ ಭೇಟಿ ನೀಡಿ ಪೋಷಕರಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ,ಪಡಗೂರು ಗ್ರಾಮದ ಮಹೇಶ್ ಚಂದ್ರ ಎಂಬುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ಅಂಗವಿಕಲ ಮಕ್ಕಳು ಇರುವ ಮನೆಗಳನ್ನೇ ಹುಡುಕಿಕೊಂಡು ಹೋಗುವ ತಂಡವು ತಾವು ಮಂತ್ರಾಲಯದಿಂದ ಬಂದ ಆಯುರ್ವೇದ ಹಾಗೂ ನಾಟಿ ವೈದ್ಯರು ಎಂದು ಪರಿಚಯಿಸಿಕೊಂಡು ಪೋಷಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲವರು ಮೋಸ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಈಗಾಗಲೇ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಪೊಲೀಸರನ್ನೂ ಸಂಪರ್ಕಿಸಿದ್ದಾರೆ. ಆದರೆ, ಠಾಣೆಗೆ ಇನ್ನೂ ದೂರು ನೀಡಿಲ್ಲ.

ಗುಂಡ್ಲುಪೇಟೆ, ತಾಲ್ಲೂಕಿನ ಮಲ್ಲಯ್ಯನಪುರ, ಪಡಗೂರು, ವೀರನಪುರ, ಚೌಡಹಳ್ಳಿ, ಗುಂಡ್ಲುಪೇಟೆ ಪಟ್ಟಣ, ಕುರುಬರ ಹುಂಡಿ, ಹಂಗಳ ಮುಂತಾದ ಗ್ರಾಮಗಳಿಗೆ ಈ ತಂಡ ಭೇಟಿ ನೀಡಿದೆ ಎಂದು ಹೇಳಲಾಗುತ್ತಿದೆ.

‘ಚಿಕಿತ್ಸೆ ಸಂಪೂರ್ಣ ಉಚಿತ. ಮನೆಯಲ್ಲೇ ಆಯುರ್ವೇದ ಔಷಧಿ ತಯಾರಿಸಿಕೊಳ್ಳುವುದನ್ನು ಹೇಳಿಕೊಡಲಾಗುವುದು. ಇದನ್ನು ನಾಲ್ಕು ತಿಂಗಳ ಕಾಲ ನೀಡಿದರೆ ಅಂಗವಿಕಲ ಮಗು ಇತರ ಮಕ್ಕಳಂತೆ ಜೀವನ ಮಾಡಬಹುದು ಎಂಬ ಆಸೆಗಳನ್ನು ಪೋಷಕರಲ್ಲಿ ತುಂಬಿ ಬಲೆಗೆ ಬೀಳಿಸುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಮೊದಲಿಗೆ ಉಚಿತ ಚಿಕಿತ್ಸೆ ಎಂದು ಹೇಳಿಕೊಂಡು, ನಂತರ ಔಷಧಿಯನ್ನು ತಂದುಕೊಂಡಬೇಕು ಎಂಬ ಬೇಡಿಕೆ ಇಡುತ್ತಾರೆ. ಔಷಧಿಯನ್ನು ಸರಿಯಾಗಿ ತಯಾರಿಸದೇ ಇದ್ದರೆಪ್ರಯೋಜನವಾಗುವುದಿಲ್ಲ ಎಂದು ಹೆದರಿಸಿ, ‘ನೀವೇ ಔಷಧ ತಂದು ಬಿಡಿ’ ಎಂದು ಪೋಷಕರು ಹೇಳುವಂತೆ ಮಾಡುತ್ತಾರೆ. ₹5,000, ₹10 ಸಾವಿರ, ₹15 ಸಾವಿರ ವಸೂಲು ಮಾಡುತ್ತಿದ್ದಾರೆ’ ಎಂದು ಮಹೇಶ್‌ ಚಂದ್ರ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಮಹೇಶ್‌ ಚಂದ್ರ ಅವರು, ‘ಆಯುರ್ವೇದ ಚಿಕಿತ್ಸೆ ಕೊಡುತ್ತೇವೆ. ಅಂಗವೈಕಲ್ಯ ಶೇ 100ರಷ್ಟು ಗುಣಮುಖವಾಗುತ್ತದೆ ಎಂದು ನಂಬಿಸಿ ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದೆ. ಇದನ್ನು ನೋಡಿ ಅನೇಕರು ಮುಂದೆ ಬಂದಿದ್ದಾರೆ. ಎಲ್ಲರೂ ಸೇರಿ ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಹೇಳಿದರು.

‘ಗುರುವಾರ ಬೆಳಿಗ್ಗೆ ಒಬ್ಬರು ವ್ಯಕ್ತಿ ಬಂದು, ವೈದ್ಯರೆಂದು ಹೇಳಿಕೊಂಡು ಅನೇಕ ವ್ಯಕ್ತಿಗಳಿಗೆ ಮೋಸ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಬೇಕು. ಮೋಸ ಹೋದವರನ್ನೆಲ್ಲ ಕರೆದುಕೊಂಡು ಬಂದು ದೂರು ನೀಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಒಂದು ವೇಳೆ, ದೂರು ಬಂದರೆ, ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಬ್ ಇನ್‌‌ಸ್ಪೆಕ್ಟರ್‌ ರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ, ಪ್ರತಿಕ್ರಿಯೆ ನೀಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್‌ ಅವರು, ‘ಮೋಸ ಮಾಡಲಾಗುತ್ತಿದೆ ಎಂದು ಇಲಾಖೆಗೆ ದೂರು ಬಂದಿದೆ. ಕೋವಿಡ್‌ ಲಸಿಕೆ ವಿತರಣೆಗೆ ಗಮನ ಹರಿಸಿರುವುದರಿಂದ ಈ ಬಗ್ಗೆ ಗಮನ ನೀಡಿಲ್ಲ. ದೂರುಗಳ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಸಾಧ್ಯವಾಗದ ಸಂಪರ್ಕ

ಈ ತಂಡ ಭೇಟಿ ನೀಡಿದ ಮನೆಗಳಲ್ಲಿ ಅವರು ಕೊಟ್ಟ ಕಾರ್ಡ್‌ನಲ್ಲಿ ಪ್ರೊ.ಗುರುಸ್ವಾಮಿ, ರಾಘವೇಂದ್ರ ಪಂಚಾಮೃತ ವೈದ್ಯಶಾಲಾ, ರಾಘವೇಂದ್ರ ಕಾಲೊನಿ, ಮಂತ್ರಾಲಯ ಎಂಬ ವಿಳಾಸ ಇದೆ. ಅದರಲ್ಲಿ ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ, ‘ಒಳ ಬರುವ ಕರೆಗಳ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ’ ಎಂದು ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT