ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕೋಡಿ ಬಿದ್ದು ಸಂತಸ, ಏರಿ ಬಿರುಕು ಬಿಟ್ಟು ಆತಂಕ

ಗುಂಡ್ಲುಪೇಟೆ: ದಶಕಗಳ ನಂತರ ತುಂಬಿ ಹರಿದ ವಿಜಯಪುರ ಅಮಾನಿಕೆರೆ
Last Updated 22 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ವಿಜಯಪುರ ಅಮಾನಿ ಕೆರೆಯು ನಿರಂತರ ಮಳೆಯಿಂದಾಗಿ ದಶಕಗಳ ನಂತರ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸ ಉಂಟು ಮಾಡಿದ್ದರೆ, ಕೆರೆ ಏರಿ ಬಿರುಕು ಬಿಟ್ಟಿರುವುದು ಆತಂಕ ತಂದಿದೆ.

180 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವಿಜಯಪುರ ಅಮಾನಿ(ದೊಡ್ಡ)ಕೆರೆ ತಾಲ್ಲೂಕಿನಾದ್ಯಾಂತ ಸುರಿಯುತ್ತಿರುವ ಮಳೆಯಿಂದಾಗಿ ಕೋಡಿ ಬಿದ್ದಿದೆ. ಐದಾರು ವರ್ಷಗಳ ಹಿಂದೆ ಕೆರೆಗೆ ಹೆಚ್ಚಿನ ನೀರು ಬಂದು ಕೆರೆ ಏರಿ ಒಡೆದು ಸುತ್ತಮುತ್ತಲಿನ ರೈತರ ಬೆಳೆ ಹಾಳಾಗಿತ್ತು.

ತಾಲ್ಲೂಕಿನ ಶಿವಪುರ ಕಲ್ಲುಕಟ್ಟೆ ಜಲಾಶಯ ತುಂಬಿ ಕೋಡಿ ಬಿದ್ದು, ಅಲ್ಲಿನ ಹೆಚ್ಚುವರಿ ನೀರು ಈ ಕೆರೆಗೆ ಹರಿದು ಬಂದಿರುವುದರಿಂದ ಶನಿವಾರ ಕೋಡಿ ಬಿದ್ದಿದೆ. ಇಲ್ಲಿನ ಹೆಚ್ಚುವರಿ ನೀರು ಮುಂದಿನ ನಲ್ಲೂರ ಅಮಾನಿಕೆರೆಗೆ ಸೇರುತ್ತದೆ.

ಕೆರೆ ಏರಿಯ ಹಲವು ಕಡೆ ಬಿರುಕು ಕಾಣಿಸಿಕೊಂಡಿದೆ. ಹಲವು ಕಡೆ ಸಣ್ಣ ಪ್ರಮಾಣದಲ್ಲಿ ಬಿರುಕು ಇದ್ದರೆ, ಇನ್ನು ಕೆಲವು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಇದೆ. ಇದರಿಂದ ಏರಿಯಲ್ಲಿ ನೀರು ಸೋರಿಕೆಯಾಗುತ್ತಿದೆ. ಇದನ್ನು ಗಮನಿಸಿದ ರೈತರು, ಏರಿಯನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

‘ವಿಜಯಪುರ ಅಮಾನಿ ಕೆರೆ ತುಂಬಿದೆ. ಏರಿಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ. ಹೀಗಾಗಿ ಆತಂಕ ಉಂಟಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಏರಿ ದುರಸ್ತಿ ಮಾಡಬೇಕು. ಕೆರೆ ಒತ್ತುವರಿಯಾಗಿದ್ದು, ಅದನ್ನೂ ತೆರವುಗೊಳಿಸಬೇಕು’ ಎಂದು ರೈತ ಮುಖಂಡರಾದ ಶಿವಪುರ ಮಹದೇವಪ್ಪ ಮತ್ತು ಅಣ್ಣೂರು ಸಂತೋಷ್ ಒತ್ತಾಯಿಸಿದರು.

ಕೋಡಿ ವೀಕ್ಷಣೆ: ಕರೆ ಭರ್ತಿಯಾಗಿ ಕೋಡಿ ಬಿದ್ದಿರುವುದನ್ನು ವೀಕ್ಷಿಸಲು ಪಟ್ಟಣ, ಅಣ್ಣೂರುಕೇರಿ, ಕೋಡಹಳ್ಳಿ, ಶಿವಪುರ, ಬಸವಪುರ, ಬೆಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಕೆರೆ ಏರಿ ಒಡೆದ ಅಧಿಕಾರಿಗಳು: ಆರೋಪ
ಕೆರೆಯ ಒಳ ಹರಿವು ಹೆಚ್ಚಾಗಿರುವುದರಿಂದ ಕೆಲವೆಡೆ ಏರಿ ಬಿರುಕು ಬಿಟ್ಟಿದೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ಕೆರೆ ಕೋಡಿ ಬೀಳುವ ಜಾಗದಲ್ಲಿ ನಿರ್ಮಿಸಿದ ಏರಿಯನ್ನು ಜೆಸಿಬಿ ಮೂಲಕ ಒಡೆದು ಹಾಕಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರಗೆ ಹೋಗುವಂತೆ ಮಾಡಿದ್ಧಾರೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕೆರೆ ಏರಿ ಒಡೆದಿದಿದ್ದಾರೆ’ ಎಂದು ರೈತ ಅಂಕಹಳ್ಳಿಯ ಮಹೇಂದ್ರ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT