ಶನಿವಾರ, ನವೆಂಬರ್ 28, 2020
22 °C
ಭಕ್ತರ ಅನುಪಸ್ಥಿತಿಯಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

ದೀಪಾವಳಿ ಜಾತ್ರೆ: ಮಹದೇಶ್ವರ ಬೆಟ್ಟದಲ್ಲಿ ಸಾಂಪ್ರದಾಯಿಕ ಹಾಲರವಿ ಉತ್ಸವ

ಜಿ.ಪ್ರದೀಪ‍್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಭಾನುವಾರ ಹಾಲರವಿ ಉತ್ಸವ ಬೇಡಗಂಪಣ ವಿಧಿ ವಿಧಾನದಲ್ಲಿ ಸಂಪ್ರದಾಯ ಬದ್ಧವಾಗಿ ನೆರವೇರಿತು. 

ಪ್ರತಿ ವರ್ಷ ದೀಪಾವಳಿ ಜಾತ್ರೆಯ ಸಮಯದಲ್ಲಿ ಅಮಾವಾಸ್ಯೆ ದಿನದಂದು ಈ ಉತ್ಸವ ನಡೆಯುತ್ತದೆ. ಯಾವಾಗಲೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಹಾಲರವಿ ಉತ್ಸವ ನಡೆಯುತ್ತದೆ. ಈ ಬಾರಿ ಕೋವಿಡ್‌ ಕಾರಣದಿಂದ ಭಕ್ತರಿಗೆ ಪ್ರವೇಶ ನಿರ್ಬಂಧ ಇದ್ದುದರಿಂದ ಸ್ಥಳೀಯರ ಉಪಸ್ಥಿತಿಯಲ್ಲಿ ಉತ್ಸವ ನಡೆಯಿತು. 

ಸ್ಥಳೀಯ ಬೇಡಗಂಪಣ ಸಮುದಾಯದವರು ಮಾದೇಶ್ವರನಿಗೆ ನಡೆಸುವ ಉತ್ಸವ ಇದು. ಸಮುದಾಯದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಇದರಲ್ಲಿ ಭಾಗಿಯಾಗುತ್ತಾರೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು, ಉಪವಾಸವಿದ್ದು, ಬೆಳ್ಳಂ ಬೆಳಿಗ್ಗೆ ಬೆಟ್ಟದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಹಾಲರವಿ ಬಾವಿಗೆ ತೆರಳಿ ಅಲ್ಲಿ ಸ್ನಾನ ಮಾಡಿ ಹಿತ್ತಾಳೆಯ ಕಳಶದಲ್ಲಿ ಹಾಲರವಿ ಹಳ್ಳದ ನೀರನ್ನು ತುಂಬಿ, ಅದನ್ನು ತಲೆ ಮೇಲೆ ಇರಿಸಿ ಕಳಶಗಳಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ 101 ಹೆಣ್ಣು ಮಕ್ಕಳು ಕಳಶವನ್ನು ಹೊತ್ತು ಏಳು ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿ ಬಂದು ಬೆಟ್ಟದ ಪ್ರವೇಶ ದ್ವಾರ ತಲುಪುತ್ತಾರೆ.

ಅಲ್ಲಿ ಕತ್ತಿ ಪವಾಡ ಸೇವೆಯನ್ನು ನೆರವೇರಿಸಿದ ಬಳಿಕ, ಅಲ್ಲಿಂದ ಮಂಗಳವಾದ್ಯ, ವೀರಹಾಸೆ ಕುಣಿತ, ಛತ್ರಿ ಚಾಮರಗಳೊಂದಿಗೆ ಹೊರಡುವ ಕಳಶಗಳ ಮೆರವಣಿಗೆ ದೇವಾಲಯಕ್ಕೆ ತಲುಪಿ, ಒಳ ಆವರಣದಲ್ಲಿ ಎಲ್ಲ ಕಳಶಗಳನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಹದೇಶ್ವರಸ್ವಾಮಿಗೆ ಆ ಜಲದಿಂದ ಅಭಿಷೇಕ ಮಾಡಲಾಗುತ್ತದೆ. 


ಹಾಲರವಿ ಉತ್ಸವದ ಮೆರವಣಿಗೆಯ ನೋಟ

ಕತ್ತಿ ಪವಾಡ: ಪವಾಡ ಪುರುಷ ಮಾದಪ್ಪನ ಕ್ಷೇತ್ರದಲ್ಲಿ ಈಗಲೂ ಕೆಲವು ಪವಾಡಗಳು ಆಚರಣೆಯಲ್ಲಿವೆ. ಅವುಗಳಲ್ಲಿ ಕತ್ತಿ ಪವಾಡವೂ ಒಂದು. 

ಹಾಲರವಿ ಉತ್ಸವ ಜರಗುವುದಕ್ಕೂ ಮುನ್ನ ಕತ್ತಿ ಪ‍ವಾಡ ನಡೆಯುತ್ತದೆ. ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಗಂಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ. 

ಏಳು ಕಿ.ಮೀ ದೂರದಿಂದ ನೀರು ತರುವ ಹೆಣ್ಣುಮಕ್ಕಳು ಉಪವಾಸವಿದ್ದು, ಬರಿಗಾಲಲ್ಲಿ ನಡೆದುಕೊಂಡು ಬರುತ್ತಾರೆ. ಮಾರ್ಗ ಮಧ್ಯದಲ್ಲಿ ಯಾವುದೇ ದುಷ್ಟಶಕ್ತಿಗಳ ಕಣ್ಣು ಬಿದ್ದಿದ್ದರೂ ಕತ್ತಿ ಪವಾಡ ಮಾಡುವ ಸ್ಥಳದಲ್ಲಿ ಇವು ನಿಲ್ಲುವುದಿಲ್ಲ, ಪವಾಡ ಮಾಡಿದ ಸ್ಥಳದಿಂದ ಹಾಲರವಿ ಗಂಗೆ ಶುದ್ಧಳಾಗುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

ಇಂದು ಜಾತ್ರೆಗೆ ತೆರೆ

ದೀಪಾವಳಿ ಜಾತ್ರೆಗೆ ಸೋಮವಾರ ತೆರೆ ಬೀಳಲಿದೆ. ಪ್ರತಿ ವರ್ಷ ಜಾತ್ರೆಯ ಕೊನೆಯ ದಿನ ಮಹದೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಕೋವಿಡ್‌ ಕಾರಣದಿಂದ ಈ ಬಾರಿ ರಥೋತ್ಸವ ರದ್ದುಗೊಳಿಸಲಾಗಿದೆ. ರಾತ್ರಿ ನಡೆಯುವ ತೆಪ್ಪೋತ್ಸವದೊಂದಿಗೆ ಜಾತ್ರೆ ಮಹೋತ್ಸವ ಮುಕ್ತಾಯವಾಗುತ್ತದೆ. 

ಮಂಗಳವಾರದಿಂದ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು