ಹನೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಣ ರಾಜಕೀಯಕ್ಕೆ ಪಕ್ಷದ ಮುಖಂಡರು ಮೇಲ್ನೋಟಕ್ಕೆ ತೇಪೆ ಹಚ್ಚಲು ಯಶಸ್ವಿಯಾಗಿದ್ದರೂ; ನಾಲ್ವರು ಆಕಾಂಕ್ಷಿಗಳಲ್ಲಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಇನ್ನೂ ಉಳಿದಿದೆ.
ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡ ಹನೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಅಭ್ಯರ್ಥಿಯಾದರೂ ಆಶ್ಚರ್ಯ ಇಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದ್ದು, ಕ್ಷೇತ್ರದ ಕದನ ಕೌತುಕವನ್ನು ಹೆಚ್ಚಿಸಿದೆ.
ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿ ಸುವ ಅಭ್ಯರ್ಥಿಯ ಹೆಸರು ಈಗಾಗಲೇ ಅಂತಿಮವಾಗಿದೆ. ಎಂ.ಆರ್.ಮಂಜು ನಾಥ್ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿಗೆ ಸ್ಪರ್ಧಿಸುವುದು ನಿಚ್ಚಳವಾಗಿದೆ. ಇಬ್ಬರೂ ಪ್ರಚಾರವನ್ನೂ ಆರಂಭಿಸಿದ್ದಾರೆ.
ಬಿಜೆಪಿಯಲ್ಲಿ ಅಭ್ಯರ್ಥಿ ಯಾರೆಂಬುದು ಇನ್ನೂ ಖಚಿತವಾಗ ದಿರುವುದರಿಂದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.
ಬಿಜೆಪಿ ಟಿಕೆಟ್‌ಗಾಗಿ ನಾಲ್ವರ ನಡುವೆ ಪೈಪೋಟಿ ಇದೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಡಾ.ಪ್ರೀತನ್ ನಾಗಪ್ಪ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ಜನಧ್ವನಿ ಬಿ.ವೆಂಕಟೇಶ್ ಮತ್ತು ನಿಶಾಂತ್. ಇದರ ಮಧ್ಯೆ ಸಚಿವ ವಿ.ಸೋಮಣ್ಣ ಅವರು ಹೆಸರೂ ಪ್ರಸ್ತಾಪವಾಗುತ್ತಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಆರ್.ಮಂಜುನಾಥ್ ಹಾಗೂ ಡಾ.ಪ್ರೀತನ್ ನಾಗಪ್ಪ ಟಿಕೆಟ್ ಬಯಸಿದ್ದರು. ಬಿಜೆಪಿ ಪ್ರೀತನ್ ನಾಗಪ್ಪ ಅವರಿಗೆ ಮಣೆ ಹಾಕಿತ್ತು. ನಂತರ ಮಂಜುನಾಥ್ ಜೆಡಿಎಸ್‌ನಿಂದ ಸ್ಪರ್ಧಿಸಿ, ನರೇಂದ್ರ, ಪ್ರೀತನ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.
ಡಾ.ಪ್ರೀತನ್ ನಾಗಪ್ಪ ಸೋಲು ತ್ತಿದ್ದಂತೆ ಹನೂರಿಗೆ ಜನಧ್ವನಿ ಬಿ.ವೆಂಕ ಟೇಶ್ ಬಂದು ತಮ್ಮ ಜನಧ್ವನಿ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯ ನಡೆಸಿ ಜನರಿಗೆ ಹತ್ತಿರವಾದರು. ಯುವ ಮುಖಂಡ ನಿಶಾಂತ್ ಕೂಡ ಬಿಜೆಪಿಯಲ್ಲಿ ಗುರುತಿಸಿಕೊಂಡು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡು ಸಕ್ರಿಯರಾಗಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಬಣ ರಾಜಕೀಯ ಆರಂಭವಾಗಿತ್ತು. ಬಣಗಳ ನಡುವೆ ಹೊಡೆದಾಟ, ವಾಗ್ವಾದವೂ ನಡೆದು ಪಕ್ಷದ ಜಿಲ್ಲಾ, ರಾಜ್ಯದ ಮುಖಂಡರು ಮುಜುಗರವನ್ನೂ ಅನುಭವಿಸಿದ್ದರು.
ನಂತರ ರಾಜ್ಯ ಮುಖಂಡರು ಮೂವರನ್ನು ಕರೆದು ಬಣ ರಾಜಕೀಯ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರ ಎರಡ್ಮೂರು ತಿಂಗಳುಗಳಿಂದ ಮೇಲ್ನೋಟಕ್ಕೆ ಬಣ ರಾಜಕೀಯ ಕಂಡು ಬರುತ್ತಿಲ್ಲ. ಆದರೆ, ಟಿಕೆಟ್‌ಗಾಗಿ ನಾಲ್ವರೂ ಲಾಬಿ ನಡೆಸುತ್ತಿದ್ದಾರೆ.
ಮಾರ್ಚ್ 1ರಂದು ಹನೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಮುಖಂಡರು, ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದರೇ ವಿನಾ, ಯಾರೊಬ್ಬರ ಹೆಸರನ್ನೂ ಹೇಳಿರಲಿಲ್ಲ. ಇದು ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಉಂಟು ಮಾಡಿತ್ತು.
ಪಕ್ಷದ ಅಭ್ಯರ್ಥಿಯ ಹೆಸರನ್ನು ಬೇಗ ಘೋಷಿಸಿದಷ್ಟೂ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ. ವಿರೋಧ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದು, ಪಕ್ಷ ಇದರಲ್ಲಿ ಹಿಂದುಳಿದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ ನಿಷ್ಠಾವಂತ ಕಾರ್ಯಕರ್ತರು.
ಬಿಜೆಪಿ ಆಕಾಂಕ್ಷಿಗಳು ಹೇಳುವುದೇನು?
ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದೇನೆ. ಈ ಬಾರಿಯೂ ಪಕ್ಷದ ವರಿಷ್ಠರು ಸ್ಥಳೀಯರಿಗೆ ಆದ್ಯತೆ ನೀಡುತ್ತಾರೆ ಎಂಬ ಭರವಸೆಯಿದೆ. ಸ್ಥಳೀಯರಿಗೆ ಆದ್ಯತೆ ನೀಡಿದರೆ ನನಗೆ ಟಿಕೆಟ್ ಸಿಗಲಿದೆ. ವರಿಷ್ಠರೂ ಸೂಚನೆ ನೀಡಿದ್ದಾರೆ
–ಡಾ.ಪ್ರೀತನ್ ನಾಗಪ್ಪ
10 ವರ್ಷಗಳಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪಕ್ಷದ ವರಿಷ್ಠರು ಈ ಬಾರಿ ಹೊಸಮುಖಕ್ಕೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸವಿದೆ. ನನಗೆ ಟಿಕೆಟ್ ಸಿಗುವ ನಂಬಿಕೆಯಿದೆ
–ಡಾ.ದತ್ತೇಶ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ. ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಈ ಬಾರಿ ನನಗೆ ಟಿಕೆಟ್ ಸಿಗುವುದು ಖಚಿತ
– ಜನಧ್ವನಿ ಬಿ. ವೆಂಕಟೇಶ್
ಪಕ್ಷ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುತ್ತಲೇ ಬಂದಿದೆ. ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ದರೂ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ
–ನಿಶಾಂತ್, ಯುವ ಮುಖಂಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.