ಶುಕ್ರವಾರ, ಜುಲೈ 1, 2022
21 °C
ಹಿಂದೂ ಜಾಗರಣೆ ವೇದಿಕೆಯಿಂದ ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ

ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರಸ್ವಾಮಿ ದೇವಾಲಯದ ಎದುರು ಸಮಾವೇಶಗೊಂಡ ಪ್ರತಿಭಟನಕಾರರು, ಬೆಂಗಳೂರಿನ ಕೆ.ಜೆ.ಹಳ್ಳಿ ಹಾಗೂ ಡಿ.ಜೆಹಳ್ಳಿಯಲ್ಲಿ 11ರ ರಾತ್ರಿ ನಡೆದ ಗಲಭೆಯನ್ನು ಖಂಡಿಸಿದರು.

ದೇವಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಸಾಗಿದ ವೇದಿಕೆಯ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಿದರು. 

ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಕಾರ್ಯಕರ್ತರು ಅಲ್ಲಿನ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ನೆರೆಹೊರೆ ಹತ್ತಾರು ಹಿಂದೂಗಳ ಮನೆ, ವಾಹನಗಳ ಮೇಲೆ ದಾಳಿ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿಮಾಡಿದ್ದಾರೆ.  ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

‘ಈ ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು. 

‘ಕಾಂಗ್ರೆಸ್‌ ಪಕ್ಷವು ಇಂತಹ ದೇಶದ್ರೋಹಿ ಸಂಘಟನೆಗಳನ್ನು ರಕ್ಷಿಸುವ ಮೂಲಕ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 1600 ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರ ವಿರುದ್ಧದ 175 ಪ್ರಕರಣಗಳನ್ನು ವಾಪಸ್‌ ಪಡೆಯುವುದರ ಮೂಲಕ ಪರೋಕ್ಷವಾಗಿ ಈ ಸಂಘಟನೆಗಳ ಪರವಾಗಿ ನಿಂತಿದ್ದು, ಈಗಿನ ಪರಿಸ್ಥಿತಿಗೆ ಕಾರಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ, ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗಳಲ್ಲಿ ಈ ಸಂಘಟನೆಗಳ ಪ್ರಮುಖ ಪಾತ್ರ ಇದ್ದು, ಇವುಗಳಿಂದ ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸಮಾಜದಲ್ಲಿ ಭಯೋತ್ಪಾದನೆ ಉಂಟು ಮಾಡುತ್ತಿರುವ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು. ಜೊತೆಗೆ ಕೃತ್ಯದಲ್ಲಿ ಭಾಗಿಯಾಗಿರುವವರ ಬಗ್ಗೆ  ಸಮಗ್ರ ತನಿಖೆ ನಡೆಸಿ, ದುಷ್ಕರ್ಮಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ರಾಜ್ಯ‍ಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ನಗರ ಘಟಕದ ಅಧ್ಯಕ್ಷ ಪ‍್ರದೀಪ್‌, ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ವಿಜಯ್‌ ಬ್ಯಾಡಮೂಡ್ಲು, ಮುಖಂಡರಾದ ಶಿವು, ರಾಘು, ದೀಪಕ್‌, ಸುಂದರರಾಜ್‌, ಬಾಲಸುಬ್ರಹ್ಮಣ್ಯಂ, ಸುದರ್ಶನಗೌಡ, ನಂದೀಶ್‌, ರಮೇಶ್‌ ನಾಯಕ, ಚಂದ್ರಶೇಖರರಾವ್‌, ಶಶಾಂಕ್‌, ಚೇತನ್‌, ಸಂಪತ್‌ಕುಮಾರ್‌, ಸ್ವಾಮಿ, ಕೃಷ್ಣಮೂರ್ತಿ, ಇತರರು ಇದ್ದರು.

ಪೂರ್ವನಿಯೋಜಿತ ಗಲಭೆ: ಎಬಿವಿಪಿ

ಬೆಂಗಳೂರಿನ ಕಾವಲ್‌ ಭೈರಸಂದ್ರ ಹಾಗೂ ಇತರ ಕಡೆಗಳಲ್ಲಿ ನಡೆದಿರುವ ಗಲಭೆಯನ್ನು ಖಂಡಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಬಿ), ಇದು ಸಮಾಜಘಾತುಕ ಶಕ್ತಿಗಳ ಪೂರ್ವನಿಯೋಜಿತ ಷಡ್ಯಂತ್ರ ಎಂದು ಆರೋಪಿಸಿದೆ‌.

ರಾಜ್ಯದಲ್ಲಿರುವ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಇದು. ಸಮಾಜ ಘಾತುಕ ಶಕ್ತಿಗಳು ತಮ್ಮ ಪುಂಡಾಟದ ಮೂಲಕ ಮನಸೋ ಇಚ್ಛೆ ವರ್ತಿಸಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲುತೂರಾಟ, ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿರುವಾಗ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ಎಬಿವಿಪಿಯ ಮೈಸೂರು ವಿಭಾಗ ಸಂಚಾಲಕ ರಾಕೇಶ್‌, ರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಘಟನೆ ನಡೆಸಿದ ಪುಂಡರ ಹಿಂದೆ ಯಾರಿದ್ದಾರೆ ಅನ್ನೋದನ್ನು ಸರ್ಕಾರ ತಕ್ಷಣವೇ ತನಿಖೆ ಮಾಡಿ, ಪುಂಡರಿಗೆ ಹಾಗೂ ಇದರ ಹಿಂದೆ ಇರುವವರನ್ನು ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕು. ಉತ್ತರ ಪ್ರದೇಶದಲ್ಲಿ ಮಾಡಿರುವಂತೆ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಆಗಿರುವ ಹಾನಿಯ ಮೊತ್ತವನ್ನು ಸರ್ಕಾರ ಗಲಭೆ ಕೋರರಿಂದಲೇ ವಸೂಲಿ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು