ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುರ್ಷಿದ್‌ ಪುಸ್ತಕ ನಿಷೇಧಿಸಲು ಹಿಂದೂ ಜನ ಜಾಗೃತಿ ಸಮಿತಿ ಆಗ್ರಹ

Last Updated 17 ನವೆಂಬರ್ 2021, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಸಿರುವ ಕಾಂಗ್ರೆಸ್‌ ಮುಖಂಡ ಸಲ್ಮಾನ್ ಖುರ್ಷಿದ್ ಅವರ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಕೃತಿಯನ್ನು ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಸಮಿತಿಯ ಸಮನ್ವಯಕಾರ ಶಿವರಾಂ ಅವರು ಬುಧವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

‘ಭಾರತ ಮತ್ತು ಭಾರತೀಯತೆ, ಮಾತೆ ಮತ್ತು ಮಾತೃತ್ವದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಹಾಗೆಯೇ ಹಿಂದೂ ಮತ್ತು ಹಿಂದುತ್ವದ ನಡುವೆ ಭೇದ ಮಾಡಲು ಬರುವುದೇ ಇಲ್ಲ. ಆದ್ದರಿಂದ ರಾಹುಲ್ ಗಾಂಧಿ ಮತ್ತು ಸಲ್ಮಾನ ಖುರ್ಷಿದ್ ಅವರು ಹಿಂದೂ ಮತ್ತು ಹಿಂದುತ್ವದ ನಡುವೆ ವ್ಯತ್ಯಾಸವಿದೆ ಎಂದು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಹಿಂದೂಗಳು ಅದಕ್ಕೆ ಮರುಳಾಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಹಿಂದೂ ಧರ್ಮದ ಮೇಲೆ ನಿಜವಾದ ಪ್ರೀತಿ ಇದ್ದರೆ, ಭಗವಾನ್‌ ಶ್ರೀರಾಮ ಮತ್ತು ಶ್ರೀಕೃಷ್ಣ ಕಾಲ್ಪನಿಕ ವ್ಯಕ್ತಿಗಳು. ಕೇಸರಿ ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯವಿದೆ ಎಂದು ಹೇಳಿ ಹಿಂದೂ ಧರ್ಮವನ್ನು ಅವಮಾನಿಸುತ್ತಿರಲಿಲ್ಲ. ಅಲ್ಲದೇ,ಕಾಶ್ಮೀರ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿರುದ್ಧವೂ ಅದು ಧ್ವನಿ ಎತ್ತುತ್ತಿತ್ತು; ಆದರೆ, ಇದ್ಯಾವುದನ್ನೂ ಮಾಡದೇ ಇದೀಗ ಚುನಾವಣೆಯ ಕಾರಣದಿಂದ ಹಿಂದೂ ಮತಗಳ ಮೇಲೆ ಕಣ್ಣಿಟ್ಟು ದೇವಸ್ಥಾನ-ಪ್ರವಾಸವನ್ನು ಆರಂಭಿಸಿದ್ದಾರೆ’ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.

‘ಕಾಂಗ್ರೆಸ್‌ ಪಕ್ಷದ ನಾಯಕರು ಹಿಂದೂಗಳನ್ನು ಬೊಕೊ-ಹರಮ್ ಮತ್ತು ಐಸಿಸ್‌ನ ಭಯೋತ್ಪಾದಕರೊಂದಿಗೆ ಹೋಲಿಸಿ ಅವಮಾನಿಸುತ್ತಿದ್ದಾರೆ. ಇದಕ್ಕೆ ತೇಪೆ ಹಚ್ಚಲು ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ವ್ಯತ್ಯಾಸವಿದೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಸಲ್ಮಾನ್ ಖುರ್ಷಿದ್ ಅವರಿಗೆ ತಮ್ಮ ಪುಸ್ತಕವನ್ನು ಹಿಂಪಡೆಯಬೇಕು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಲು ಹೇಳಬೇಕು. ಭಾರತದಲ್ಲಿ ಡಾ-ವಿನ್ಸಿ ಕೋಡ್, ಸತಾನಿಕ್‌ವರ್ಸಸ್ .. ಮುಂತಾದ ನಿಷೇಧಿಸಬಹುದಾದರೆ ಸಲ್ಮಾನ್ ಖುರ್ಷಿದ್ ಅವರ ಪುಸ್ತಕವನೂ ನಿಷೇಧಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT